ಗಾನ ಸರಸ್ವತಿ ಲತಾ ಮಂಗೇಶಕರ್ – ಹೀಗೊಂದು ಪ್ರಸಂಗ
- - ಲಕ್ಷ್ಮೀಕಾಂತ ಇಟ್ನಾಳ.
ಲತಾ ಮಂಗೇಶಕರ ಬಗ್ಗೆ ನೌಶಾದರು, “ಕಂಭಖ್ತ್, ಗಲ್ತೀ ಸೇ ಭೀ ಬೇಸರಾ ನಹೀಂ ಗಾತೀ” ಎಂದಿದ್ದರೊಮ್ಮೆ ಮೆಚ್ಚುಗೆಯಿಂದ.
1958-59 ರಲ್ಲಿ ಲತಾ ಮಂಗೇಶಕರ ಹಾಗೂ ನೌಶಾದ್ ಅವರ ನಡುವೆ ಸಂಭವಿಸಿದ ಘಟನೆ. ಅದು ಮೊಘಲ್ – ಎ- ಆಜಮ್ (1960) ಚಿತ್ರದ ಗೀತೆಗಳ ಧ್ವನಿ ಮುದ್ರಣದ ಸಮಯ..
ಅಂದು ಮೆಹಬೂಬ್ ಸ್ಟುಡಿಯೋದಲ್ಲಿ ಹಾಡಿನ ರೆಕಾರ್ಡಿಂಗ್ ಸಮಯ. ಎಂಭತ್ತಕ್ಕೂ ಹೆಚ್ಚು ಸಂಗೀತಗಾರರ ಮೇಳ. ನಲವತ್ತು ವಯೋಲಿನ್ ನುಡಿಸುವವರು. ಮತ್ತೆ ಮತ್ತೆ ರಿಹರ್ಸಲ್ ನಡೆದೇ ಇತ್ತು. ಮುಂಜಾನೆಯೇ ರೆಕಾರ್ಡಿಂಗ್ ಗೆ ಬರಹೇಳಿದ್ದರಿಂದ ನಿಗದಿತ ಸಮಯಕ್ಕೆ ಎಂದಿನಂತೆ ಲತಾ ಮಂಗೇಶ್ಕರ ಬರುವ ವೇಳೆಗಾಗಲೇ ಒಂದು ತಾಸು ಸತತವಾಗಿ ರಿಹರ್ಸಲ್ ನಡೆದು ಎಲ್ಲ ಆರ್ಕೆಸ್ಟ್ರಾ ರೆಕಾರ್ಡಿಂಗ್ ಗೆ ತಯಾರಾಗಿತ್ತು.
ನೌಶಾದ ಅವರ ಜೊತೆ ಒಂದು ಸಾರಿ ತಾಲೀಮ್ ಮಾಡಿದ ಲತಾಜಿಗೆ ಒಮ್ಮೆಲೆ ನೌಶಾದರು, "ತಯಾರಿಯಾಯಿತಲ್ಲ. ಹಾಡಿಬಿಡಿ. ಟೇಕ್ ಆಗಿ ಬಿಡ್ಲಿ" ಎಂದರು. ಲತಾ ಅವರು ಇನ್ನೊಮ್ಮೆ ರಿಹರ್ಸಲ್ ಮಾಡಿಬಿಡೋಣವೇ ಎಂದಾಗ ನೌಶಾದರು ಅವರೊಡನೆ ಹಾರ್ವೋನಿಯಮ್ ಸಾಥ್ ನೀಡಿ ರಿಹರ್ಸಲ್ ಮಾಡಿದರು.
ಲತಾ ಕಡೆಗೆ ತಿರುಗಿ, “ಹಾಡನ್ನು ನಾನು ಕಂಪೋಸ್ ಮಾಡಿದರೂ ನನಗೆ ನಾಲ್ಕು ಚಂದಿರರನ್ನು ಆ ಹಾಡಿಗೆ(ಚಾರ ಚಾಂದ) ತುಂಬಲು ಸಾಧ್ಯವಾಗದು, ಈಗ ಗೀತೆಗೆ ಜೀವ ತುಂಬುವ ಜೊತೆಗೆ ಅದರಲ್ಲಿ ನಾಲ್ಕು ಚಂದಿರರನ್ನು ಅದರಲ್ಲಿ ತುಂಬಿ ಎಂದು ಹೇಳಿದರು.
ಲತಾಜಿ “ನಾನು ರೆಡಿ, ನೀವು ರೆಡಿಯಾಗಿದ್ದೀರಾ?” ಎಂದು ಕೇಳಿ, ಕ್ಯಾಬಿನ್ ನಲ್ಲಿ ಮೈಕ್ ಹತ್ತಿರ ಹೋದರು. ರೆಕಾರ್ಡಿಂಗ್ ಪ್ರಾರಂಭವಾದ ಕೆಲವೇ ಸೆಕಂಡುಗಳಲ್ಲಿ ಹಾಡುವುದನ್ನು ನಿಲ್ಲಿಸಿದರು. ನೌಶಾದ್ ಏನಾಯಿತೆಂದು ಕೇಳಿದರು. ನಲವತ್ತು ವಯೋಲಿನ್ ನುಡಿಸುವವರಲ್ಲಿ ಒಬ್ಬ ನೀಲಿ ಶರ್ಟಿನ ಹುಡುಗನ ಕಡೆಗೆ ಕೈತೋರಿಸಿ ಆ ಹುಡುಗ ಸುರ್ ಸರಿಯಾಗಿ ಹಿಡಿಯುತ್ತಿಲ್ಲ. ಇದರಿಂದ ನಾನು ಬೇಸುರ್ ಹೋಗುತ್ತಿದ್ದೇನೆ. ” ಎಂದರು. ಆದರೆ ನೀವು ಬೇಸುರ್ ಆಗಿಲ್ಲವಲ್ಲ ಎಂದರು ನೌಶಾದ್. ಹೌದು ನಾನಿನ್ನು ಬೇಸುರ್ ಆಗಿಲ್ಲ ಆದರೆ ಅವನ ಟ್ಯೂನ್ ನಿಂದ ನಾನು ಬೇಸುರ್ ಹೋಗುವವಳಿದ್ದೆ. ಅವನಿಗೆ ನುಡಿಸದಿರಲು ಹೇಳಿ ಎಂದರು.
ನೌಶಾದರು ಮುಂಜಾನೆಯ ಸಮಯವಿದ್ದುದರಿಂದ ಇನ್ನೂ ಲತಾ ಸುರ್ ಗೆ ಹೊಂದಿಕೊಳ್ಳುವುದು ಆಗುತ್ತಿಲ್ಲವೆಂದು ತಿಳಿದು, “ಲತಾಜಿ, ನೀವು ಬರುವುದಕ್ಕಿಂತಲೂ ಮೊದಲು ಒಂದು ತಾಸಿನವರೆಗೆ ರಿಹರ್ಸಲ್ ಆಗಿದೆ. ಆವಾಗ ಎಲ್ಲಿಯೂ ಬೇಸುರ್ ಆಗಿಲ್ಲ. ನೀವೇನೂ ತಲೆಕೆಡಿಸಿಕೊಳ್ಳಬೇಡಿ, ಎಲ್ಲವೂ ಸರಿಯಾಗಿಯೇ ಇದೆ. ಹಾಡಿ” ಎಂದರು.
ನೌಶಾದ್ ಅವರು ಹೇಳಿದ ಮೇಲೆ, ಮತ್ತೆ ಟೇಕ್ ಶುರುವಾಯಿತು. ಕೆಲವೇ ಸೆಕೆಂಡುಗಳಲ್ಲಿ ಲತಾಜಿ ಮತ್ತೆ ನಿಲ್ಲಿಸಿದರು. ನೌಶಾದರು ‘ಸರಿಯಾಗಿದೆ , ಏನೂ ತಪ್ಪಾಗಿಲ್ಲ ಹಾಡಿ’ ಎಂದರೂ ಲತಾ ಹಾಡಲೊಲ್ಲರು. ನೌಶಾದ ಅವರ ಒತ್ತಾಸೆ ಮೇರೆಗೆ ಮತ್ತೆ ಹಾಡಲು ಶುರು ವಿಟ್ಟೊಡನೇ ಲತಾ ನಿಲ್ಲಿಸುವುದು ನಡೆಯಿತು.
ಕೊನೆಗೆ ಲತಾ ಹೇಳಿದರು. “ತಾವು ಒಂದು ಕೆಲಸ ಮಾಡಿ. ನಾನು ಸರಿಯುತ್ತೇನೆ. ಬೇರೆ ಯಾರಾದರೂ ಇದನ್ನು ಹಾಡಬಲ್ಲರು. ಅವರಿಂದ ಹಾಡಿಸಿ” ಎಂದು ಕ್ಯಾಬಿನ್ ನಿಂದ ಹೊರಬಂದರು. ಏನು ಮಾಡುತ್ತಿರುವಿರಿ ನೀವು ಲತಾಜಿ. ನಾನು ಈ ಹಾಡನ್ನು ಎರಡು ವರ್ಷಗಳಿಂದ ಸಂಯೋಜಿಸುತ್ತಿದ್ದೇನೆ. ನಿಮ್ಮಂತಹ ಇನ್ನೊಬ್ಬ ಹಾಡುಗಾರರು ಈ ಭೂಮಿಯ ಮೇಲೆ ಮಾತ್ರವಲ್ಲ, ಸ್ವರ್ಗದಲ್ಲಿಯೂ, ನರಕದಲ್ಲಿಯು ಹುಡುಕಿದರೂ ಸಿಗುವುದಿಲ್ಲ. ಈ ಭೂ ಗ್ರಹದ ಮೇಲಿರುವ ಏಕೈಕ ಫಿನಾಮಿನಾ ನೀವು. ನೀವು ಹೀಗೆ ಮಾಡಬೇಡಿ ಎಂದು ವಿನಂತಿಸಿದರು.
“ನಾನು ಅಷ್ಟು ಹೇಳಿದರೂ ತಾವು ಆ ಹುಡುಗನನ್ನು ನಿಲ್ಲಿಸುತ್ತಿಲ್ಲವಲ್ಲ” ಲತಾಜಿ ಹೇಳಿದಾಗ ನೌಶಾದ್ ಮತ್ತೊಮ್ಮೆ ಆರ್ಕೆಸ್ಟ್ರಾ ಕೇಳುವುದಾಗಿ ಹೇಳಿ ಈ ಸಾರೆ ಧ್ಯಾನದಿಂದ ಆರ್ಕೆಸ್ಟ್ರಾ ಆಲಿಸಿದರು.
ತಲ್ಲೀನರಾಗಿ ಆರ್ಕೆಸ್ಟ್ರಾ ಕೇಳಿ, ತಮ್ಮ ಎರಡೂ ಕೈಗಳನ್ನು ಇವರತ್ತ ಜೋಡಿಸಿ, “ನನಗೆ ಎರಡು ವರ್ಷಗಳಿಂದ ಒಮ್ಮೆಯೂ ಗುರುತಿಸಲಿಕ್ಕಾಗದ, ಆ ನಲವತ್ತು ಜನರ ವಯೋಲಿನ್ ತಂಡದ ಒಬ್ಬ ಬೇಸುರ್ ನುಡಿಸುವವನನ್ನು ಒಂದೇ ಟೇಕ್ ನಲ್ಲಿ ಗುರುತಿಸಿ, ಅವನೇ ತಪ್ಪೆಸಗುತ್ತಿದ್ದಾನೆ ಎಂದು ನಿಖರವಾಗಿ ಹೇಳುವ ನಿಮ್ಮನ್ನು ಜಗತ್ತು ಸಂಗೀತ ಸರಸ್ವತಿ ಎಂದು ಸುಮ್ಮನೇ ಅನ್ನುವುದಿಲ್ಲ, ತಾವು ಸಾಕ್ಷಾತ್ ಗಾನಸರಸ್ವತಿಯೇ ಸರಿ” ಎಂದು ಇವರತ್ತ ಕೈಜೋಡಿಸಿ ನಮಿಸಿದರು. ಆ ಹುಡುಗನನ್ನು ಬಿಟ್ಟು ರಿಹರ್ಸಲ್ ಒಂದೇ ಟೇಕ್ ನಲ್ಲಾಯಿತು,. ಕೆಲವೇ ಕ್ಷಣಗಳ ಹಿಂದೆ ರೆಕಾರ್ಡಿಂಗ್ ರೂಮ್ ತೊರೆಯಲು ಸಿಧ್ದಳಾದ ಲತಾ ಅವರನ್ನು ನೌಶಾದರು ಸರಿಯಾದ ಸಮಯದಲ್ಲಿ ಎಚ್ಚತ್ತುಕೊಳ್ಳದೇ ಹೋಗಿದ್ದರೆ, ಲತಾ ಹೊರಬಂದು ಬಿಡುತ್ತಿದ್ದರು. ಜಗತ್ತಿಗೆ 'ಮೊಘಲ್ –ಎ- ಆಜಮ್’ ನ ಇಂಪಾದ ಗೀತೆಗಳು ಕೇಳಲಿಕ್ಕೆ ಸಿಗುತ್ತಿರಲಿಲ್ಲ. ಆ ಪ್ರಸಂಗದ ಅಂದಿನ ಆ ಹಾಡು, “ ರಾತ್ ಇತ್ನಿ ಮತ್ವಾಲಿ ಸುಬಹ್ ಕಾ ಆಲಮ್ ಕ್ಯಾ ಹೋಗಾ” ವೊಗಲ್ ಎ ಆಜಮ್ ಚಿತ್ರದ್ದು. ಅಂದ ಹಾಗೆ ‘ಪ್ಯಾರ ಕಿಯಾ ತೊ ಡರನಾ ಕ್ಯಾ’ ಮುಂತಾದ ಹಾಡುಗಳು ಕೂಡ ಇದೇ ಚಿತ್ರದಲ್ಲಿವೆ. ದ್ಯಾಟ್ ಈಸ್ ಲತಾ ಮಂಗೇಶಕರ್. ದಿ ಲಿವಿಂಗ್ ಲೀಜೆಂಡ್!
( ಎಲ್ಲಿಯೋ ಓದಿದ್ದು, ಮೂಲ ಲೇಖಕರು ಯಾರಿದ್ದರೂ. ಅವರಿಗೆ ಕೃತಜ್ಞತೆಗಳು)
ಗಾನ ಸರಸ್ವತಿ ಲತಾ ಮಂಗೇಶಕರ- ಹೀಗೊಂದು ಪ್ರಸಂಗ
ಪ್ರತಿಕ್ರಿಯೆ (2)