ಅಂದು ನಿನ್ನ ಮಾತು,ಪ್ರಶ್ನೆ
ಗಳಿಗುತ್ತರಿಸಿ ವಿವರಿಸಿದ್ದೆ  
ನನ್ನ ಮಾತುಗಳನು ಕೇಳಲು
ಸಮಯವಿಲ್ಲ ನಿನಗೆ ಇಂದು

ಅಂದು ಇದ್ದ ಕೆಲಸವನ್ನೆಲ್ಲ ಬಿಟ್ಟು ನಿತ್ಯ
ಸೈಕಲಲ್ಲಿ  ಶಾಲೆಗೆ ಕರೆದೊಯ್ದಿದ್ದೆ
ನಾ ಜತೆಯಲೊಮ್ಮೆ  ಬರುವೆನೆಂದರೆ
ಬೇರೆಕೆಲಸ ಬಹಳವಿದೆ ನಿನಗೆ ಇಂದು

ಅಂದು ಅಮ್ಮ ರಮಿಸಿದರೂ ಅತ್ತು ರಂಪ
ಮಾಡುತ್ತಿದ್ದ ನಿನ್ನ ತಟ್ಟಿತೂಗಿ ಮಲಗಿಸಿದ್ದೆ
ನಾ ಕೆಮ್ಮುವ ಸದ್ದಿಗೆ ನಿದ್ದೆ  ಬರದೆಂದು
ಗೊಣಗಿ ಬಯ್ಯುತಿರುವೆ ನೀನು ಇಂದು

ಅಂದು  ನಿನ್ನನೆತ್ತಿಕೊಂಡು ದವಾ
ಖಾನೆಗೊಯ್ದು ಚಿಕಿತ್ಸೆ ಕೊಡಿಸಿದ್ದೆ
ನನ್ನ  ದಿನನಿತ್ಯದ ಮಾತ್ರೆಗಳನು
ತರಲು ಮರೆಯುವೆ ನೀನು ಇಂದು

ಅಂದು ನಿನಗಿಷ್ಟವೆಂದು ಎತ್ತರದ ಮರ
ವನೇರಿ  ಹಣ್ಣುಗಳನು ಕಿತ್ತು ತಂದಿದ್ದೆ
ನನಗತ್ಯವೆಂದು ಹತ್ತಿರದ ಅಂಗಡಿಯಿಂದ
ಕೊಳ್ಳಲು ನೆನಪಾಗುವುದಿಲ್ಲ ನಿನಗೆ ಇಂದು

ಅಂದು ನೀ ಚಿಗುರಾಗಿದ್ದೆ
ನನ್ನಲ್ಲಿ ಬಲವಿತ್ತು, ಒಲವಿತ್ತು
ನಾ ಹಣ್ಣಾಗಿರುವೆ ಇಂದು
ನಿನ್ನಲ್ಲಿ ಬಲವಿದೆ, ಒಲವು... ?