-ಯಾರಿವರು?!
ಹೀಗೆಯೆ ಇವರೆಲ್ಲರು!
ನೀರಿನಂತೆ ಹರಿಯುವರು - ಒಡಲ ಬೇಗೆ ತಣಿಸುವರು
ಪೈರಿನಂತೆ ಬೆಳೆಯುವರು-ಹೂವಿನಂತೆ ಮೆಲ್ಲನರಳಿ
ಪರಿಮಳವನು ಕೊಡುವವರು;
ಹೀಗೆಯೇ ಇವರೆಲ್ಲರು!
ಗಾಳಿಯಂತೆ ತೇಲುವರು -ಕಡಲಿನಂತೆ ಮೊರೆಯುವರು
ರವಿಯ ತೆರದಿ ಬೆಳಗುವರು-ಇರುಳ ತಾರೆಯಂತೆ ಹೊಳೆದು
ಎದೆಗೆ ಬೆಳಕ ತರುವವರು;
ಹೀಗೆಯೆ ಇವರೆಲ್ಲರು!
ಹಾಲಿಗೆ ಸಿಹಿ ಬೆರೆಸುವರು - ಜೇನು ತುಪ್ಪ ಉಣಿಸುವರು
ನಾಳೆಯ ಕದ ತೆರೆವವರು - ಬರುವ ಎಲ್ಲ ನೋವ ಸರಿಸಿ
ಬಾಳ ಕಹಿಯ ಮರೆಸುವರು;
ಹೀಗೆಯೇ ಇವರೆಲ್ಲರು!
ಮಗುವಿನಂತೆ ಇರುವವರು - ನಗುವನಷ್ಟೆ ತರಿಸುವರು
ನೊಂದು ಬೆಂದು ಮಾಗುವರು-ಗಂಧದಂತೆ ತಾವೆ ತೇಯ್ದು
ಅಂದವನ್ನು ತೋರುವರು;
ಹೀಗೆಯೆ ಇವರೆಲ್ಲರು!
ಮಾತಾಡುವ ದೇವತೆಗಳು - ನಡೆದಾಡುತ ಕಾಯ್ವರು!
ಕೋಟಿ ಜನಕೆ ಕೆಲವರು-ಹೇಳಲು ಇನ್ನೇನಿದೆ?!
ಇವರ ಹೆಸರೆ ಗೆಳೆಯರು!
-ಮಾಲು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!