ಕಂಬನಿ...
ಕಂಬನಿ- ಕೇವಲ ಅಳುವಿನ ಕುರುಹಲ್ಲ..
ಅದು ಸುಪ್ತ ಭಾವಗಳ ಇಬ್ಬನಿ!
ಆರ್ತ ಹೃದಯದ ಮೌನ ದನಿ!!
 
ಬೇಸರ, ಕಾತರ, ಅಸಹಾಯಕತೆ,
ದುಗುಡ, ತಲ್ಲಣ, ಭಾವುಕತೆ-
ಕೊನೆ-ಮೊದಲಿಲ್ಲದ ಭಾವಲಹರಿಯ
ಮೂಕ ಅಭಿವ್ಯಕ್ತಿಯಿದು- ಈ ಕಂಬನಿ!
 
ಮನದಾಳದ ಬೇಗೆಯು ಮೇಲುಕ್ಕಿ
ಕಂಗಳ ಕೊಳದಿ ತುಂಬಿ ನಿಂತು,
ಕಣ್ಣಂಚಿನಿಂದ ಮೆಲ್ಲನೆ ಜಾರಿ,
ದಿಂಬಿನೊಳಗೆ ಕಣ್ಮರೆಯಾಗುವ ಮಾರ್ಜಾಲವಿದು- ಈ ಕಂಬನಿ!
 
ದೌರ್ಬಲ್ಯದ ಸಂಕೇತವಲ್ಲ ಈ ಕಂಬನಿ!
ನೋವಿಗೆ ಸೆಡ್ಡು ಹೊಡೆದು,
ಸ್ಫೂರ್ತಿಯ ಚಿಲುಮೆಯಾದವರ
ದಿಟ್ಟ ನವಜೀವನಕೆ ನಾಂದಿಯಿದು- ಈ ಕಂಬನಿ
 
ಕಂಬನಿ- ಕೇವಲ ಅಳುವಿನ ಕುರುಹಲ್ಲ..
ಅದು ಸುಪ್ತ ಭಾವಗಳ ಇಬ್ಬನಿ!
ಆರ್ತ ಹೃದಯದ ಮೌನ ದನಿ!!
_ಶ್ವೇತಾ ಸೂರ್ಯಕಾಂತ್.