ಮಾಡುವ ವಿಧಾನ: 

1. ನೀರಿನ ಬಟ್ಟಲಿಗೆ ಹುಣಸೆ ಹಣ್ಣನ್ನು ಚೆನ್ನಾಗಿ ಕಿವುಚಿ ಹುಣಸೆ ರಸ ಮಾಡಿಕೊಳ್ಳಿ (ಕಿವುಚಿದ ಹಣ್ಣನ್ನು ಹೊರಗೆಸೆಯಲು ಮರೆಯಬೇಡಿ - ಬಾಯಿಗೆ ಸಿಕ್ಕರೆ, ರುಚಿ ಮುಖ ಕಿವಿಚಿಸುತ್ತದೆ; ಬೇಕಿದ್ದರೆ ಆ ಹಿಂಡಿ ಹಿಪ್ಪೆ ಮಾಡಿದ ಹಣ್ಣನ್ನು ಪಾತ್ರೆ ತೊಳೆಯಲು ಉಪಯೋಗಿಸಬಹುದು). 
2. ಕಿವುಚಿ ತೆಗೆದ ಹುಣಸೆ ನೀರಿಗೆ ಉಪ್ಪನ್ನು ಹಾಕಿ ಕಲಕಿ.
3. ಈಗ ಕಾರದ ಪುಡಿಯನ್ನು ಹಾಕಿ ಚೆನ್ನಾಗಿ ಕಲಕಿ.
4. ನಂತರದ ಸರದಿ - ಬೆಲ್ಲದ ಚೂರಿಗೆ; ತುಸು ಮೆಲು ರುಚಿಗೆ ಬೆರೆಸಿದರೆ ಸಾಕು - ಬೆಲ್ಲದ ಪಾನಕವಾಗುವಷ್ಟು ಬೇಡಾ!
5. ಇನ್ನು ಕರಿಬೇವಣ್ಣನ ಸರದಿ - ಎಂಟತ್ತು ಎಲೆಯನ್ನು ಈ ಮಿಶ್ರಣಕ್ಕೆ ಹಾಕಿ ತಿರುವಿ ಬಿಡಿ - ವಾಸನೆ ಗಮ್ಮೆನ್ನುವತನಕ!
6. ಇನ್ನುಳಿದವರು - ಸಣ್ಣಗೆ ಹೆಚ್ಚಿದ ಹಸಿ ಇರುಳ್ಳಿ ಸಾಹೇಬರು- ಅವರನ್ನು ಸೇರಿಸಿಬಿಟ್ಟರೆ ಮಿಶ್ರಣ ಹೆಚ್ಚು ಕಮ್ಮಿ ರೆಡಿ ( ಚೂರು ಹಾಕದೆ ಹೋಳಾಗಿ ಕತ್ತರಿಸಿಟ್ಟುಕೊಂಡು, ಕಟ್ಟಿದ ಅನ್ನದ ಉಂಡೆಯ ಜತೆ ನೆಂಚಿಕೊಂಡು ತಿನ್ನುವುದು ಉಂಟು - ಲೋಕೋ'ವಿ'ಭಿನ್ನ ರುಚಿಃ!)
7. ಇನ್ನು ಕಟ್ಟ ಕಡೆಯ ವಿಧಿ - ತಂಗಳನ್ನಕ್ಕೆ ಈ ಮಿಶ್ರಣವನ್ನು ಹದವಾಗಿ ಬೆರೆಸಿ ಕಲಸಿ. ಗಟ್ಟಿಯುಂಡೆಯಾಗಿ ಕಟ್ಟಲು ಸಾಧ್ಯವಾಗುವಂತೆ ಕಲಸಿದರೆ ಉತ್ತಮ ಹಾಗು ರುಚಿಗೂ ಚೆನ್ನ ( ವಿ.ಸೂ. : ಬಿಸಿ ಅನ್ನವನ್ನೆ ಬಳಸಬೇಕೆಂದರೆ, ಹೇಗಾದರೂ ಅದನ್ನು ತಂಗಳಾಗಿಸುವ ದಾರಿ ಕಂಡುಹಿಡಿದರೆ ಒಳಿತು ; ಈ ಹಸಿಹುಳಿಗೆ ಬಿಸಿಯನ್ನ ತಂಗಳನ್ನದಷ್ಟು ರುಚಿಯಿರದೆಂದೆಂದು ಇದನ್ನು ಚಪ್ಪರಿಸಿ ತಿನ್ನುವವರೆಲ್ಲರ ಅಂಬೋಣ!)

ಇಷ್ಟಾದರೆ ನಮ್ಮ 'ದಿಢೀರ ತಂಗಳು ಸಾಂಬಾರನ್ನ' ರೆಡಿ! ಲಕ್ಷಣವಾಗಿ ಮುದ್ದೆ ಕಟ್ಟಿ ತಟ್ಟೆಯಲ್ಲಿ ಜೋಡಿಸಿಟ್ಟುಕೊಂಡು ರೇಡಿಯೊ ಹಾಡು ಕೇಳುತ್ತಲೊ, ಪೇಪರೊ, ಪುಸ್ತಕವೊ ಓದುತ್ತಲೊ ಅಥವಾ ಟಿವಿ ನೋಡುತ್ತಲೊ ಪಟ್ಟಾಗಿ ಹೊಡೆಯಬಹುದು. ಬೆಳದಿಂಗಳ ರಾತ್ರಿಯಾದರೆ ಸೀನನ್ನು ರೂಮಿನೊಳಗಿಂದ ತಾರಸಿಗೆ ಶಿಪ್ಟು ಮಾಡಿದರೆ ಸಾಕು - ಅದೆ ಬೆಳದಿಂಗಳೂಟವೂ ಆಗುತ್ತದೆ ( ಹುಷಾರು - ಒಬ್ಬರೆ ಇದ್ದರೆ ರೂಮೊಳಗೆ ಕ್ಷೇಮವೆಂದು ಕಾಣುತ್ತದೆ - ಒಂಟಿಯಾಗಿ, ತಾರಸಿಯಲ್ಲಿ, ಬೆಳದಿಂಗಳ ರಾತ್ರಿಯಲ್ಲಿ, ದೆವ್ವ ಮೋಹಿನಿಗಳ ಭಯವಿಲ್ಲದೆ ತಿನ್ನುವುದಾದರೂ ಹೇಗೆ? ಜತೆಯಿದ್ದರೆ ಓಕೆ!). ಇನ್ನೊಂದು ಪುಕ್ಕಟೆ ಸಲಹೆಯೆಂದರೆ - ಸ್ವಲ್ಪ ತಂಗಳನ್ನ ಜಾಸ್ತಿಯಿದ್ದು, ಹೆಪ್ಪು ಹಾಕಿದ ಮೊಸರೂ ಇದ್ದರೆ, ಜತೆಗೆ ಮೊಸರನ್ನದ ಚೆಂಡುಗಳನ್ನು ಕಲಸಿಟ್ಟುಕೊಂಡರೆ ಊಟ ಇನ್ನೂ 'ಬೊಂಬೋಟ್'! 

ಈ ಹೊಸ ರುಚಿಯನ್ನು ಪ್ರಯತ್ನಿಸಿ ನೋಡಿ, ತಿಂದು ಆನಂದಿಸಿ!

ವಿಶೇಷ ಎಚ್ಚರಿಕೆ: ಲೇಖನದಲ್ಲಿ ವರ್ಣಿಸಿದಂತ ತುರ್ತು ಪರಿಸ್ಥಿತಿಗಳಲ್ಲೆ ಈ ಹೊಸರುಚಿಯನ್ನು ಮಾಡಿ ಕಬಳಿಸಬೇಕಲ್ಲದೆ, ಯಥೇಚ್ಚವಾಗಿ ಸೋಮಾರಿಗಳಂತೆ ಪ್ರತಿದಿನ ಇದನ್ನೆ  ಮಾಡಿ ಪತಿ (ಪತ್ನಿ) ದೇವರುಗಳ ಕೋಪ, ತಾಪ, ಶಾಪಕ್ಕೆ ಗುರಿಯಾಗಬಾರದು (ರೂಮಿನ ಬ್ರಹ್ಮಚಾರಿಗಳಿಗೆ ಈ ನಿಯಮದಿಂದ ವಿನಾಯ್ತಿ ಕೊಡಲಾಗಿದೆ). ಅಲ್ಲದೆ, ಈ ಖಾದ್ಯವನ್ನು ಮಾಡಿ, ತಿಂದು ಯಾವುದೆ ಅಡ್ಡ ಪರಿಣಾಮಕ್ಕೊಳಗಾದರೂ ಅದಕ್ಕೆ ಮಾಡುಗರೆ ಸ್ವತಃ ಹೊಣೆಯಲ್ಲದೆ, ಈ ಲೇಖನ, ಮತ್ತಿದರ ಕತೃ ಯಾವ ರೀತಿಯಲ್ಲು ಜಾವಾಬ್ದಾರನಲ್ಲವೆಂದು ಈ ಮೂಲಕ ಸ್ಪಷ್ಟಪಡಿಸಲಾಗಿದೆ. 

ಇತಿ ಈ ಹೊಸ (ಹಳೆ) ರುಚಿ ತಿಂದು ಇನ್ನು ಬದುಕಿರುವ ಜೀವಂತ ಸಾಕ್ಷಿ,
ನಾಗೇಶ ಮೈಸೂರು, ಸಿಂಗಪುರದಿಂದ
(ಅಂದ ಹಾಗೆ ಆ ಚಿಕ್ಕಂದಿನ ದಿನಗಳಲ್ಲಿ ಇದು ಒಂದು ವಿಶೇಷ ಖಾದ್ಯವೆಂದುಕೊಂಡು, ಕೇಳಿ ಮಾಡಿಸಿಕೊಂಡು ತಿನ್ನುತ್ತಿದ್ದ ದಿನಗಳೂ ಹೇರಳ!!)

ಕೊಟ್ಟ ಕೊನೆಯ ಮಾತು: 
ಇದನ್ನು ಹಾಸ್ಯ ಲೇಖನದಡಿ ಸೇರಿಸಬೇಕೊ, ರುಚಿ ಸಂಪದದಡಿ ಸೇರಿಸಬೇಕೊ ಗೊಂದಲವಾಗಿ - ಕಡೆಗೆ ನಿಜವಾದ 'ಖಾದ್ಯವಾದ' ಕಾರಣ 'ರುಚಿ ಸಂಪದದಲ್ಲೆ' ಉಳಿಸಿಕೊಳ್ಳಲಾಗಿದೆ. ಓದುಗರು ಯಾವ ತಲೆಬರಹದಡಿಯಲ್ಲಾದರೂ ಓದಿಕೊಳ್ಳಲು ಸರ್ವ ತಂತ್ರ ಸ್ವತಂತ್ರರು!