ಕವಿಯ ಹಠವೋ?
------------------
ನನ್ನೆದೆಗೆ ಬೇಕು ಕೆಂಪಾದ ಮುಗಿಲ
    ತುದಿಯಿಂದ ಒಂದು ಸಾಲು.
ಎದೆಮುಗಿಲ ತುದಿಗೆ ಮೋಡಗಳ ಕೆಳಗೆ
    ಹಾರಿಹುದು ಹಕ್ಕಿ ಸಾಲು.

ನನ್ನೆದೆಗೆ ಬೇಕು ಕಾನನದ ಗಿರಿಯ
    ಹಸಿರಿಂದ ಒಂದು ಮರವು.
ಎದೆವೃಕ್ಷದಲ್ಲಿ ಹೊಸ ಚಿಗುರಿನಲ್ಲಿ
    ಜಾರಿಹುದು ಹಿಮದ ಮಣಿಯು.

ಎದೆಯೊಳಗೆ ಬರಲಿ ಆ ಶಿಲ್ಪಿ ಪಡೆದ
    ಅಪ್ರತಿಮ ಕಲೆಯ ಸ್ಫೂರ್ತಿ.
ಎದೆಶಿಲೆಯ ಕಡೆದು, ಅರಳಿಹುದು ಒಂದು
    ಚಿರತೇಜ ದಿವ್ಯ ಮೂರ್ತಿ.

ಎದೆಯೊಳಗೆ ಬರಲಿ ಆ ಋಷಿಯು ಕಂಡ
    ಸುಜ್ಞಾನ ಸಾರ ಸಿಂಧು.
ವಿಭ್ರಾಂತಿ ತಲ್ಪದಿಂದೆದ್ದ ಎದೆಗೆ
    ಚುಂಬಿಸಿದೆ ಜ್ಞಾನ ಬಂಧು.

ಇದು ಕವಿಯ ಹಠವೊ?, ಭಾವಗಳ ಚಟವೊ?
    ಬರೆದಿಹೆನು ಕೆಲವು ಸಾಲು.
ಭಾವಗಳ ಚಿಲುಮೆ ನುಡಿಸಿಹುದು ಇಲ್ಲಿ
    ನವ ಕವನದಿಂಪು ಕೊಳಲು.

ಓ ಕವಿಯೆ ಕೇಳು, ಆ ನಿನ್ನ ಸಾಲು
    ಮಾಡಿಹುದು ನನ್ನ ಕವಿಯ.
ಆ ನಿನ್ನ ಭಾವ, ನೀ ಕಂಡ ದೃಶ್ಯ
    ನಾ ಬಲ್ಲೆ ಅದರ ಸವಿಯ.

        - ಚಂದ್ರಹಾಸ (೨೧-ಜೂನ್ - ೨೦೧೩)