ಕನಸಲಿ ಬಂದು ಕರೆದ ಗೆಳೆಯರ
ಭೇಟಿಯಾಗಲು ನಾ ಹೊರಟೆ
ನಮ್ಮ ಸ್ನೇಹ ಅಮರವಾಗಲೆಂದು
ದೇವನಲಿ ಬೇಡುತ ನಾ ಹೊರಟೆ
ಕರೆದರೆ ನೀವು, ಬಾರದೆ ಹೇಗಿರಲಿ ನಾ?!
ನೀವಲ್ಲವೇ ನನಗೆ ಪ್ರಾಣ ಸ್ನೇಹಿತರು
ನಿಮ್ಮ ಒಡನಾಟದಲಿ ನಾನಿದ್ದರೆ
ಮನದ ತುಮುಲಗಳೆಲ್ಲ ಮಾಯ
ನಿಮ್ಮ ಸ್ನೇಹ ಮನಕೆಷ್ಟು ಹಿತಕರ
ನೀವೆನಗೆ ನೀಡಿದ ಪ್ರೀತಿ ಅಪಾರ
ನಿಮಗೆ ಹಾನಿಯಾದರೆ, ನಾ ತಾಳಲಾರೆ
ನೀವು ಕೋಪಗೊಂಡರೆ, ನಾ ಬದುಕಲಾರೆ
ಜನಜಂಗುಳಿ, ಸದ್ದುಗದ್ದಲವನು ಬಿಟ್ಟು
ಇಗೋ! ಭೇಟಿಯಾಗಲು ನಾ ಹೊರಟೆ
ಬಾನಿಗೆ ಕೈಚಾಚಿ, ಮೋಡಗಳ ಹಿಡಿದು
ಮಳೆರಾಯನ ಸುರಿಸಿ, ಬರಡು ಭೂಮಿಗೆ
ಹಸಿರ ಜೀವ ತುಂಬುವ ಪರ್ವತಗಳೇ
ಮೃಗ ಪಕ್ಕಿಗಳ ಮನೆಯಾಗಿ,
ಧರೆಯ ತಾಪವನು ಹೀರಿ
ತಂಪಾಗಿಸುವ ಹಸಿರು ವನಗಳೇ
ಹೋದ ದಾರಿಯುದ್ದಕೂ ವರವಾಗಿ
ತನ್ನ ನಡೆಗೆ ತಡೆಯೊಡ್ಡಿದ ಜನರಿಗೂ
ಬದುಕಿನಾಸರೆಯಾಗುವ ನದಿಗಳೇ
ಕರೆದರೆ ನೀವು, ಬಾರದೆ ಹೇಗಿರಲಿ ನಾ?!
ನೀವಲ್ಲವೇ ನನಗೆ ಪ್ರಾಣ ಸ್ನೇಹಿತರು
-ಶಫಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!