ಅವಲೋಕನ

 

    ಕಾಂಕ್ರೀಟು ಕಾಡಿನಲ್ಲಿ ಸಿಮೆಂಟು ಗೂಡಿನಲ್ಲಿ,

    ಸೃಷ್ಟಿಯಾಗುತ್ತಿದೆ ಜೀವಂತ ರೋಬೋಟುಗಳ ಸಂತಾನ.

    ಕಂಪ್ಯೂಟರ್ ಪರದೆಗಳೇ ಅವರಾಟದ ಮೈದಾನ,

    ಕೂತಲ್ಲೇ ಮಾಡುವರು ವಿಶ್ವದ ವಿರಾಟ್ ದರ್ಶನ.

    ತುತ್ತಿಕ್ಕಿ ಮುತ್ತಿಕ್ಕಿ ಮುದ್ದಿಸುವ ಅಮ್ಮನಿಲ್ಲಿ ಹೇಳುವುದಿಲ್ಲ,

    ಚಂದಮಾಮನ ಕಥೆಗಳನ್ನ.

    ಹೇಳಲೆಂದೂ ಮರೆಯುವುದಿಲ್ಲ ರ್‍ಯಾಂಕ್ ಬಂದವರ 

    ಯಶೋಗಾಥೆಯನ್ನ.   

    ಪಾಲಕರ ತಲೆಯಲ್ಲಿ ಅಂಕಗಳ ಭೂತಸವಾರಿ,

    ತಲೆಕೆಟ್ಟ ಮಗುವೊಂದು ಮನೆಯಿಂದ್ ಪರಾರಿ.

    ಅಮ್ಮಾ ಜಾಮೆಟ್ರಿ ಜೀರ್ಣವಾಗದು,

    ಅರ್ಥಮೆಟಿಕ್ ಅರ್ಥವಾಗದು.

    ಅದರೆ,ಅವಳದೊಂದೇ ನುಡಿ ಟ್ಯೂಶನ್ ಗೆ ನಡಿ.

    ಮಗುವಿಗೊಂದೇ ಆಯ್ಕೆ ಮಾಡು ಇಲ್ಲವೇ ಮಡಿ.

    ರ್‍ಯಾಂಕು ಬಂದವಗೆ ಸ್ವರ್ಗಕ್ಕೆ ಮೂರೇ ಗೇಣು,

    ಅದಿಲ್ಲದವನೊಂದು ನೇಣುಕುಣಿಕೆಗೆ ಶರಣು. 

    ಕೊನರುವಮೊದಲೇ ಕಮರಿಹೋಗುತಿವೆ ಕನಸುಗಳು,

    ಮಣ್ಣಲ್ಲಿ ಮಣ್ಣಾಗಿ ಹೋಗುತಿವೆ ಎಳೆಯ ಬದುಕುಗಳು.

    ಓ ಅಪ್ಪ ಅಮ್ಮಂದಿರೇ ಎಚ್ಚೆತ್ತುಕೊಳ್ಳಿ,

    ರೇಸಿನಕುದುರೆಗಳಾಗುತ್ತಿವೆ ನಿಮ್ಮ ಕುರುಳಬಳ್ಳಿ.

    ರ್‍ಯಾಂಕುಗಳ ಭೂತವನು ಹೊಡೆದೋಡಿಸಿ,

    ಬದುಕಿನ ಲೆಕ್ಕಾಚಾರದಲಿ ಪಕ್ಕಾಗಿಸಿ,

    ಭವಿತವ್ಯ ಭಾರತದ ಕಣ್ಣಾಗಿಸಿ.