ನೀರಿಗಾಗಿ ರೋಧನೆ,

ನೀರಿಗಾಗಿ ವೇದನೆ,

ನೀರಿಗಾಗಿ ಪ್ರಾರ್ಥನೆ,

ನೀರಿಗಾಗಿ ಯಾಚನೆ,

ನೀರಿಗಾಗಿ ಯೋಚನೆ,||ಪಲ್ಲವಿ||

 

ನೀರೇ ಜೀವ ಸಕಲ ಜೀವಿಗಳೆಲ್ಲದಕು,

ನೀರೇ ಮೂಲ ಸಕಲ ಜೀವಿಗಳ ಉದಯಕು,

ನೀರಿಲ್ಲದೆ ಜೀವಿಗಳಿಗೆಲ್ಲಿದೆ ಸಹಜ ಬದುಕು,

ಸಾಯುವ ಪ್ರಾಣಿಗಳಿಗೂ ಕೂಡಾ ಸಂಜೀವಿನಿಯಾಗುವುದು ನೀರಿನ ಒಂದು ಗುಟುಕು.

 

ನೀರೇ ಆಧಾರ ಸರ್ವ ಕಾರ್ಯಕೆಲಸಗಳಿಗೆ,

ನೀರೇ ಸಂಜೀವಿನಿ ರೈತರ ಬೆಳೆಗಳಿಗೆ,

ನೀರೇ ಜೀವಾಳ ಜೀವಕೋಶದ ಕೆಲಸಗಳಿಗೆ,

ನೀರಿಲ್ಲದೆ ಜೀವವಿಲ್ಲ ಜೀವ ಜಲಚರಗಳಿಗೆ,

 

ಪೂರ್ವದ ಜನರಿಗೆ ನದಿಯ ನೀರು ಪವಿತ್ರ ಜಲ, ಮುಕ್ತಿಗೆ ದಾರಿ,

ಈಗಿನ ಜನರಿಗೆ ತಮ್ಮ ಮನೆಯ ಕಸವನ್ನು ಹಾಕಲು ಇರುವ ಗಟಾರದ ದಾರಿ,

ನಿತ್ಯಕಾರ್ಯಗಳಿಗೆ ಬೇಕಾದ ಕಾವೇರಿ, ಗೋದಾವರಿ,

ಕಾರ್ಖಾನೆಗಳ ಕಲುಷಿತಗಳಿಂದ ಈ ನದಿಗಳೆಲ್ಲವೂ ವಿಷಕಾರಿ,

 

ಕಾವೇರಿಯದ್ದು ಎರಡು ರಾಜ್ಯಗಳ ಕಾವೇರಿದ ವ್ಯಾಜ್ಯ,

ತಮ್ಮ ಬೇಳೆ ಬೇಯಿಸಿಕೊಳ್ಳಬೇಕೆಂದು ಖಾದಿಯ ಜನರು ಗಲಭೆಗೆ ಹಾಕುತ್ತಿದ್ದಾರೆ ಆಜ್ಯ,

ನೀರಿಲ್ಲದಿದ್ದರೂ ನದಿನೀರಿನ ಹಂಚಿಕೆಯಿಂದ ಬಳಲುತ್ತಿದೆ ನಮ್ಮ ರಾಜ್ಯ,

ನೀರಿಗೆ ಇಷ್ಟು ಬೇಡಿಕೆಯಾದರೂ ನಮ್ಮ ಜನರು ನೀರಿಗೆ ಹಾಕುತ್ತಿದ್ದಾರೆ ಕೊಳೆತ ತ್ಯಾಜ್ಯ.

 

ಶರಾವತಿಯ ನೀರು ಬರಿ ವಿದ್ಯುತ್ ಪಾಲು,

ಜೋಗದಿಂದ ಹರಿದ ನೀರು ನೇರ ಸಮುದ್ರದಲ್ಲಿ ಶಾಮೀಲು,

ಹಿರಿಯರಿಂದ ನಮ್ಮವರು ಕಲಿತ ಪಾಠ “ಸರ್ವರಿಗೆ ಸಮ ಪಾಲು ಸರ್ವರಿಗೆ ಸಮ ಬಾಳು”.

ಆದರೂ ನಮ್ಮವರು ನಮ್ಮವರೊಂದಿಗೆ ಹಂಚಿಕೊಳ್ಳುತ್ತಿಲ್ಲ ನೀರಿನ ಸಮಪಾಲು. 

 

ನಮ್ಮ ಪೂರ್ವಿಕರ ಮಾತಿನಂತೆ ಆಗ “ ಗಂಗಾ ಸ್ನಾನ ತುಂಗಾ ಪಾನ”,

ಈಗಿನ ಸ್ಥಳೀಯರ ಮಾತಿನಂತೆ ಈಗ  “ಗಂಗಾ ಸ್ನಾನ ತುಂಗಾ ಪಾನ ಆರೋಗ್ಯಕ್ಕೆ ಊನ”,

ಸ್ನಾನ ಮಾಡಲೂ ಹೆದರಿ ಎಣಿಸುತ್ತಿದ್ದಾರೆ ಮೇಷದಿಂದ ಮೀನ,

ಅಂತರರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶದಲ್ಲಾಗುವ ನದಿಯ ಮಾಲಿನ್ಯದಿಂದ ಹೋಯಿತು ಮಾನ,

ಆದರೂ ನಮ್ಮ ಕೇಂದ್ರ ಸರ್ಕಾರ ತಳೆದಿದೆ ತಪಸ್ವಿಯ ಮೌನ.

 

ವೃಷಭಾವತಿ ಈಗ ವಿಷಭಾವತಿ,

ಉತ್ತರ ಮತ್ತು ದಕ್ಷಿಣ ಪಿನಾಕಿನಿ ಈಗ ಗುಪ್ತಗಾಮಿನಿ,

ತುಂಗಭದ್ರ ಮಾತ್ರ ನಮ್ಮ ರಾಜ್ಯದಲ್ಲಿ ಭದ್ರ.