ಕೆಳ್ಪುದೇಂ ಕೆಳ್ಪುದೇಂ ಗತಕಾಲದೆದೆಗಳಲಿ ಧ್ವನಿಸಿರ್ಪ
ಸ್ವಗತನುಡಿಗಳ್ ನಿನ್ನ ಕರ್ಣಂಗಳಲನುರಣಿಸಿರ್ಪುದೇಂ?
ಭವಗದ್ದಲವನಪ್ಪಿ ನಿಂದಿರ್ಪ ನಿನಗೆ ಸ್ವಗತ ಮೆಲ್ದನಿಯ
ಎಳೆಯು, ಕಾಲ ನಿಮ್ನಾಂತರದಲ್ಲಿ ನೀಳ್ಕುದೇಂ ?
ಪೆರ್ಬುಲಿಯು ಪಂಜೆಸಗಿ, ಭ್ರೂಮಧ್ಯೆಯಂ ಪಳಂಚಲು,
ಕಂಪಿಸುವ ನಿಲುವಿನಲುಂ ಮೃತ್ಯುವನೆ ಜಯಪೆನೆಂದ
ವೀರನೋರ್ವನ ಸ್ವಗತ ನಿನಗೆ ಕೇಳ್ಪುದೇಂ ?
ಸಮರಭೂಮಿಯೊಳ್ ಸರ್ವದಿಕ್ಕನಾರ್ವಿಸಿ ಅರಿಗಳು
ಪೊಣರ್ಗಾಹ್ವಾನಿಸಲ್, ಮೃತ್ಯುದಭಿಗಮನವಂ ದಿಟ್ಟಿಸಿ
ನಕ್ಕ, ಧೀರನ ವೀರಹಾಸದುಳುದುಗಿಹ ಸ್ವಗತ ಕೇಳ್ಪುದೇಂ ?
ತನ್ನವರ ಪಸಿವ ನೀಗಿಸಲು, ಅವರ ವಿಕ್ಷುಭ್ಧ ಮನದಿಂ
ನಗುವನುಣ್ಮಿಸಲು, ಅಸದಳವೆನಿಪ ಭವವನೆದುರಿಸಿ ನಡೆವ
ಪೊಸಧೈರ್ಯವಂ ಮಥಿಸಿದಾ ಸ್ವಗತ ಕೇಳ್ಪುದೇಂ ?
ಅಧರ್ಮದ ಬಿರುಗಾಳಿಗೆದುರಾಗಿ, ಧರ್ಮ ಚುಕ್ಕಾಣಿಯುಂ
ಪಿಡಿದು ಸಾಗಲೆಳೆಸಿದ, ನಾವಿಕನ ಸ್ವಗತ ಸತ್ಯದ
ಮೌನ, ಪಿಸುಮಾತಗಿ ನಿನಗೆ ಕೇಳ್ಪುದೇಂ ?
ಕಾಲಾಂತರದೀ ಸುಧೀರಸ್ವಗತಗಳು ಯುಗಯುಗಗಳಂ
ದಾಂಟುತ, ನಿನ್ನ ಹೃನ್ಮೌನವನಿಂದು ಸೀಳುತಿರ್ಪುದೇಂ?.
ಜಗದ ಬಿಡಿಸಲಾರದ ಪ್ರಶ್ನೆಗಳಿಗೆ ಬಸವಳಿದ ಚೇತನವೆ
ಕೇಳ್, ಸ್ವಗತಗಳ ಬಳಿಯಿರ್ಪುದು ಪ್ರಶ್ನೆಗುತ್ತರವು.
ಆ ದಿಟ್ಟ ಧೀರ ಧೀಮಂತ ಸ್ವಗತವಾಹಿನಿ, ಭೋರ್ಗರೆದ
-ರಿಯಲಿ ನಿನ್ನಧೀರ ಹೃದಯ ಕೊಳದೊಳ್.
ಅದರೊಳೊಗೆದ ಸತ್ವಸಾರಸ್ವತಕ್ಕಳಿಯಲಿ ಅನಿಶ್ಚತೆ,
ಅಸಹಾಯದಭದ್ರತೆ, ಅಧೈರ್ಯತೆ, ವಿಷಣ್ಣತೆ.
ಧೈರ್ಯದೊನಲು ರಭಸಕ್ಕೆ ಕೆರಳ್ದ ನಿನ್ನ ಮನೋಸರಸ್ಸು,
ಹರಿಯಲಿ ತಾನ್ ಪರಮ ಗುರಿಯೆಡೆಗೆ.
--- ಚಂದ್ರಹಾಸ ( ೦೨ - ೦೯ - ೨೦೧೩ )
-------------------------
ಅನುರಣಿಸು = ಪ್ರತಿಧ್ವನಿಸು
ನೀಳ್ಕು = ನಿಲುಕು
ಪೆರ್ಬುಲಿ = ಹೆಬ್ಬುಲಿ
ಪಂಜು = ಹಸ್ತ
ಭ್ರೂಮಧ್ಯೆ = ಹುಬ್ಬಿನ ನಡುವಿನ ಜಾಗ
ಕರ್ಣ = ಕಿವಿ
ಉಣ್ಮಿಸು : ಹುಟ್ಟಿಸು
ಪೊಣರ್ = ಯುದ್ಧ
ಆರ್ವಿಸಿ = ಸುತ್ತುವರಿ
ಚುಕ್ಕಾಣಿ = ಹಡಗು ನಿಯಂತ್ರಿಸುವ ಸಾಧನ
ಅನುರ್‍ಅಣಿಸು - ಪ್ರತಿಧ್ವನಿಸು
ವಿಕ್ಷುಭ್ಧ = ದುಃಖಗೊಂಡ
-------------------------
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!