ಕಾಣದ‌ ಅಮ್ಮನುದರದಲಿ ಜನಿಸಿದ‌

ಆ ಕೂಸು ಕಣ್ಣು ಬಿಡುವ‌ ಮುನ್ನವೆ

ಭೂಮಿಯಾಳದಲಿ ಸೇರಿದ‌ ಅಮ್ಮನೊಲವ‌

ತಬ್ಬಿದಂತೆ ಭಾಸವಾಗಿ ಕಣ್ಣು ತೆರೆಯಿತು

ಸಣ್ಣ‌ ನಗುವೊಂದನ‌ ಬೀರಿ ಅಪ್ಪನ‌

ಕಂಗಳ‌ ಕಳವಳಕ್ಕೆ ಸುಮ್ಮನಾಯಿತು ||

 

ಹುಟ್ಟಿದ‌ ಮನೆಯು ಗಟ್ಟಿಯಾಗದೆ

ಹೊಟ್ಟೆಗೆ ಇಟ್ಟು ಅನ್ನವ‌ ಸುರಿಯಲಾಗದೆ

ಹದಿನಾರವ‌ ದಾಟಿನಿಂತ‌ ಕನ್ಯೆಯಾದಳು

ಲಂಪಟನ‌ ಕೈಗೆ ಧಾರೆಯೆರೆದು,ಬೆಳೆಸಿ

ಬೇಯಿಸಿದವರು ಕೈ ತೊಳೆದುಕೊಂಡರು ||

 

ಅತ್ತೆ ಮನೆಯವರ‌ ದಬ್ಬಾಳಿಕೆಗೆ

ಮುಸುರೆ ತಿಕ್ಕಿದ‌ ಅಮ್ಮನ‌ ಅಂಗೈ

ಸುಕ್ಕುಗಟ್ಟಿ ಸವೆದು ಹೋಗಿದೆ

ಹಸ್ತರೇಖೆಗಳಿಲ್ಲದೆ ಹಣೆಬರಹ‌ ಬದಲಾಗಿದೆ

ದುಡಿದಿಡದ‌ ಕೈಗಳು ಬಡವಾಗಿ ಹೋಗಿವೆ ||

 

ಗಂಡ‍ ಮಕ್ಕಳ ಕಡೆಗಣನೆಗೆ

ಸಿಲುಕಿ ಇಳಿಬಿದ್ದ‌ ಕಣ್ಣುಗಳಲಿ

ಮುಸಲಧಾರೆ ಹರಿದು ಹಳ್ಳ‌ ಬಿದ್ದಿದೆ

ಸ್ಮಿತವಲ್ಲದ‌ ಜೀವನ‌ ಚಕ್ರ‌ ಉರುಳಿಹೋಗಿದೆ ||

 

ಒಂಟಿ ಜೀವನ‌ ಸಾಗದೆ ಹೂವ‌

ಕಟ್ಟುತ‌ ಕಣ್ಣು ಮುಚ್ಚುವ‌ ಹೊತ್ತಾಗಿದೆ

ಭಗವಂತ‌ ಏನೆಂದು ಅರ್ಥವಾಗದೆ

ಪ್ರಾಣ‌ ಅಲ್ಪ‌ ಅರ್ಧ‌ ಪೂರ್ಣವಿರಾಮ‌ವಾಗಿದೆ

ಹುಟ್ಟಿದಾಗಿನ‌ ಆ ಕ್ಷಣದ‌ ನಗುವಿಗಾಗಿ ||