ಪಾರಿವಾಳ ಜೋಡಿಯೊಂದು ನಮ್ಮ ಬಾಲ್ಕನಿಗೆ ಆಗಾಗ ಭೇಟಿ ಕೊಡುತ್ತಿತ್ತು. "ಊಂ..ಊಂ...ಊಂ..." ಎಂದು ಅವು "ರೂಂ" ಕಟ್ಟಲು ಅನುಮತಿ ಕೇಳುತ್ತಿವೆ ಎಂದು ಆಗ ಗೊತ್ತಾಗಲಿಲ್ಲ. ಕುಂಡದಲ್ಲಿರುವ ಗಿಡಗಳನ್ನೆಲ್ಲಾ ಅವು ಎಳೆಯುವುದು ನೋಡಿದಾಗ, ಕಿರಿಕಿರಿ ಅನಿಸಿ, ಅವುಗಳನ್ನು ಓಡಿಸಿ, ಬಾಲ್ಕನಿ ಕಿಟಕಿಗಳನ್ನು ಮುಚ್ಚುತ್ತಿದ್ದೆವು.

 ಒಂದು ದಿನ ಟೆರೇಸ್‌ನಿಂದ ನೋಡುವಾಗ ಆ ಜೋಡಿ ಪಕ್ಕದ ಫ್ಲಾಟ್‌ನ ಒಂದು ಅಡ್ಡಗೋಡೆಯ ಮೇಲೆ, (ನೆಲದಿಂದ ಅಂದಾಜು ೪೦ ಅಡಿ ಎತ್ತರದಲ್ಲಿ) ಗೂಡು ಕಟ್ಟುತ್ತಿತ್ತು. ಗಂಡು ಹಕ್ಕಿ ಸುತ್ತಲೂ ಹುಡುಕಿ ಹುಲ್ಲುಕಡ್ಡಿಗಳನ್ನು ಹೆಕ್ಕಿ ತಂದು ಕೊಡುತ್ತಿತ್ತು-ಹೆಣ್ಣು ಗೂಡು ಕಟ್ಟುತ್ತಿತ್ತು. ಪಾಪ..ನಮ್ಮ ಬಾಲ್ಕನಿಯಲ್ಲೇ ಅವಕ್ಕೆ ಗೂಡು ಕಟ್ಟಲು ಬಿಡಬಹುದಿತ್ತು. ಆದರೆ ನಾವು ಎಲ್ಲಾದರೂ ಹೋಗುವಾಗ, ಕಿಟಕಿಗಳನ್ನು ಮುಚ್ಚಿದರೆ, ಅವುಗಳ ಓಡಾಟಕ್ಕೆ ತೊಂದರೆಯಾಗುತ್ತಿತ್ತು ಅಂತ ಸಮಾಧಾನ ಮಾಡಿಕೊಂಡೆವು.

ಈಗ ಗೂಡಿರುವ ಸ್ಥಳದಲ್ಲಿ ಗಾಳಿ ಮಳೆಯ ಭಯವಿಲ್ಲ. ಬೆಕ್ಕು ಹದ್ದುಗಳ ಕಾಟವೂ ಇಲ್ಲ. ಫ್ಲಾಟ್‌ನ ಮಕ್ಕಳು..!?-ಸ್ಕೂಲ್ ಮುಗಿದು ಬಂದ ಕೂಡಲೇ ಟ್ಯೂಷನ್, ನಂತರ ಅಪ್ಪನ ಮೊಬೈಲಲ್ಲಿ ಆಟವಾಡುವ ಮಕ್ಕಳು ಇದನ್ನೆಲ್ಲಾ ಗಮನಿಸುವ ಚಾನ್ಸೇ ಇಲ್ಲ. :)

 ಎರಡು ಮೊಟ್ಟೆ ಇಟ್ಟ ತಾಯಿ ಹಕ್ಕಿ ಕಾವು ಕೊಡುತ್ತಾ ಸ್ಥಳಬಿಟ್ಟು ಕದಲುತ್ತಲೇ ಇರಲಿಲ್ಲ ಅಂತ ತಿಳಿದಿದ್ದೆವು. ನಾವು ನೋಡುತ್ತಿದ್ದ ಹಾಗೇ ಗಂಡು ಹಕ್ಕಿ ಬಂದು,ಹೆಣ್ಣಿಗೆ ಏನೋ ಮೆಸೇಜ್ ಹೇಳಿ, ಅದನ್ನು ಕಳುಹಿಸಿ, ತಾನೂ ಕಾವು ಕೊಡಲು ಕುಳಿತಿತು. ಹೀಗೇ ದಿನವೂ ಶಿಫ್ಟ್ ಪ್ರಕಾರ ಅವು ಕಾವು ಕೊಡುತ್ತಲಿದ್ದವು.

 ಅಂದಾಜು ಎರಡು ವಾರದ ನಂತರ ಮೊಟ್ಟೆಯೊಡೆದು ಮರಿಯಾಯಿತು. (ಹುಟ್ಟಿದಾಗ ಹಳದಿ ಬಣ್ಣ ಇದ್ದು, ದಿನಗಳೆದಂತೆ ಬ್ರೌನ್, ದೊಡ್ಡದಾಗುತ್ತಾ ತಾಯಿಯ ಬಣ್ಣ ಬರುವುದು) ಮರಿಗಳಾದಾಗಲೂ ಹಕ್ಕಿಗಳ ಶಿಫ್ಟ್ ಕೆಲಸ ಮುಂದುವರೆದೇ ಇತ್ತು. ದಿನ ಕಳೆದಂತೆ ಮನೆಯೊಳಗಿದ್ದೇ ನಾವು, ಮರಿಗಳ ಚಿಲಿಪಿಲಿ ಸ್ವರದಿಂದಲೇ-ಹಕ್ಕಿಗಳು ಬಂದು ಹೋಗುವುದು, ಆಹಾರ ಕೊಡುವುದು ಎಲ್ಲಾ ಅಂದಾಜು ಮಾಡುವಷ್ಟು ಎಕ್ಸ್‌ಪರ್ಟ್ ಆಗಿದ್ದೆವು. ಮರಿಗಳು ಎಲ್ಲಿ ಕೆಳಗೆ ಬೀಳುವವೋ ಎಂದು ತಾಯಿ ಹಕ್ಕಿಗಿಂತ ಜಾಸ್ತಿ ಟೆನ್ಷನ್ ನಮಗೇ ಇತ್ತು. ಸ್ವಲ್ಪ ಬೇರೆ ಸ್ವರ ಕೇಳಿದ ಕೂಡಲೇ ಓಡಿ ಹೋಗಿ ನೋಡುತ್ತಿದ್ದೆವು.

 ಮರಿಹಕ್ಕಿಗಳು ಒಂದೆರಡು ವಾರದಲ್ಲೇ ಬೆಳೆದು ಹತ್ತಿರ ಹತ್ತಿರ ತಾಯಿ ಹಕ್ಕಿಯ ಗಾತ್ರದವೇ ಆದವು. ಮರಿಗಳಿಗೆ ಹಾರುವುದನ್ನು ತಾಯಿ ಹಕ್ಕಿ ಹೇಗೆ ಕಲಿಸುವುದು ಎಂಬ ಕುತೂಹಲ ನಮಗಿತ್ತು. ಒಂದು ದಿನ....

 ಹಕ್ಕಿ ಮರಿಗಳು ಜೋರಾಗಿ ಕಿರುಚುವುದು ಕೇಳಿಸಿತು. ಓಡಿ ಹೋಗಿ ನೋಡಿದಾಗ... ಆಶ್ಚರ್ಯ! ಪ್ರೀತಿಯಿಂದ ಮರಿಗಳಿಗೆ ಬಾಯಿತುತ್ತು ನೀಡುತ್ತಿದ್ದ ತಂದೆ-ತಾಯಿ ಹಕ್ಕಿಗಳು ಆ ದಿನ ಮರಿಗಳನ್ನು ಕುಕ್ಕುತ್ತಿದ್ದವು. ಎರಡೂ ಮರಿಗಳು ನಡುಗುತ್ತಾ ಗೋಡೆಗೆ ಒತ್ತಿ ಕುಳಿತು ಅಳುತ್ತಿದ್ದವು. " ಆ ಮರಿಗಳಿಗೆ ಹಾರಲು ಒತ್ತಾಯಿಸುತ್ತಿರಬಹುದು" ಎಂದು ನನ್ನ ಎಕ್ಸ್‌ಪರ್ಟ್ ಒಪೀನಿಯನ್ ಕೊಟ್ಟೆನು. ಆದರೆ ಆದ್ದದ್ದೇ ಬೇರೆ...

ಅವೆರಡೂ ಬೇರೆ ಜೋಡಿ ಪಾರಿವಾಳಗಳು. ಆ ಮರಿಗಳನ್ನು ಓಡಿಸಿ ಗೂಡನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಬಂದಿದ್ದವು. ತಾಯಿಹಕ್ಕಿ ಮರಿಗಳ ರಕ್ಷಣೆಗೆ ಬಂದಾಗ ಅದನ್ನು ಕುಕ್ಕಿ ಓಡಿಸುತ್ತಿದ್ದವು. ಇನ್ನು ಸುಮ್ಮನಿರುವುದು ಸರಿಯಲ್ಲ. ಮರಿಗಳ ರಕ್ಷಣೆಗೆ ನಾನೇ ಆಖಾಡಕ್ಕೆ ಇಳಿಯಬೇಕು ಎಂದಾಲೋಚಿಸಿ (ಭಯಬೀಳಬೇಡಿ, ಆ ಫ್ಲಾಟ್‌ಗೆ ಜಂಪ್ ಮಾಡುವುದಿಲ್ಲ...ನಾನು Krrrish ಅಲ್ಲ ಅಂತ ನನಗೆ ಗೊತ್ತು) ಅಲ್ಲೇ ಒಣಗಲು ಹಾಕಿದ್ದ ದುಪ್ಪಟ್ಟಾ ಒಂದನ್ನು ತೆಗೆದುಕೊಂಡು, ಆ ಹೊಸ ಹಕ್ಕಿಗಳ ಮೇಲೆ ಎಸೆಯುವಂತೆ ಆಕ್ಷನ್ ಮಾಡಿದೆ. ಮರಿಹಕ್ಕಿಗಳು, ತಾಯಿಹಕ್ಕಿಗೆ ನನ್ನ ಪರಿಚಯವಿದ್ದುದರಿಂದ ಸುಮ್ಮನಿದ್ದವು. ಹೊಸಹಕ್ಕಿಗಳು ಹಾರಿ ಹೋದವು. ಹತ್ತೇ ನಿಮಿಷ... ಪುನಃ ಮರಿಗಳ ಕಿರುಚಾಟ-ಟೆರೆಸ್‌ಗೆ ಓಟ- ದುಪ್ಪಟ್ಟಾ... ಹೀಗೇ ಎರಡು ದಿನ ಕದನ ಮುಂದುವರೆಯಿತು. ಗೂಡೆಲ್ಲಾ ಚೆಲ್ಲಾಪಿಲ್ಲಿ... ಮರಿಹಕ್ಕಿಗಳು ಇಲ್ಲಿಂದಲ್ಲಿಗೆ, ಅಲ್ಲಿಂದಿಲ್ಲಿಗೆ ಹಾರುತ್ತಿದ್ದರೂ, ನನ್ನ ಗಮನವೆಲ್ಲಾ ಹೊಸಹಕ್ಕಿ ಜೋಡಿಯನ್ನು ಓಡಿಸುವ ಕಡೆಗೇ ಇತ್ತು.

೩ನೇ ದಿನ ಆ ಹಕ್ಕಿಗಳು ಬರುವುದು ನಿಲ್ಲಿಸಿತು. ಮರಿಹಕ್ಕಿಗಳು ಫ್ಲಾಟ್‌ನಿಂದ ಫ್ಲಾಟ್‌ಗೆ ಹಾರುವಷ್ಟು ಚುರುಕಾಗಿದ್ದವು! ಬಹುಷಃ ಆ ಹಕ್ಕಿ ಜೋಡಿ, ಮರಿಹಕ್ಕಿಗಳಿಗೆ ಹಾರುವುದನ್ನು ಕಲಿಸಿಕೊಡಲು, ತಂದೆತಾಯಿ ಹಕ್ಕಿಗಳೇ ಕರೆಸಿದ "ಟೀಚರ್ ಹಕ್ಕಿ"ಗಳಿರಬಹುದೇ? ನಾನು ಸುಮ್ಮನೆ ಮಧ್ಯ ಪ್ರವೇಶಿಸಿ ಮರಿಹಕ್ಕಿಗಳ ಕಲಿಕೆಗೆ ಅಡ್ಡಬಂದೆನೇ..?

 ಹಾರಲು ಕಲಿತಮೇಲೆಯೂ ಮರಿಹಕ್ಕಿಗಳು ಓಡಾಡಿ ಸಂಜೆ ಬಂದು ಗೂಡಿಲ್ಲದ ಗೂಡಿನ ಸ್ಥಳದಲ್ಲಿ  ತಂದೆ-ತಾಯಿ ಹಕ್ಕಿಗಳ ಜತೆ ಒಟ್ಟಾಗಿ ಇರುತ್ತಿದ್ದವು. ೨-೩ ದಿನ ಕಳೆದ ಮೇಲೆ ಮರಿಗಳು ಸಂಜೆಯಾದರೂ ಕಾಣಿಸಲಿಲ್ಲ.. ಪಾಪ..ತಾಯಿಹಕ್ಕಿ "ಊಂ..ಊಂ..." ಎನ್ನುತ್ತಾ ಕರೆಯುತ್ತಲಿತ್ತು. ರೆಕ್ಕೆ ಬಲಿತ ಮೇಲೆ ಮರಿಗಳು ತಮ್ಮ ದಾರಿ ತಾವು ನೋಡಿಕೊಂಡಿರಬಹುದು. ಆದರೂ ಅಲ್ಲೆಲ್ಲಾದರೂ ಕಾಣುವವೋ ಎಂದು ಹುಡುಕಾಡಿದೆ. ಇನ್ನೂ ಸ್ವಲ್ಪ ಹೊತ್ತು ಅಲ್ಲಿರುತ್ತಿದ್ದರೆ, ತಾಯಿ ಹಕ್ಕಿಯ ಜತೆ ನಾನೂ "ಊಂ..ಊಂ...." ಅನ್ನುತ್ತಿದ್ದೆನೋ ಏನೋ...

ಜೀವನಾನೇ ಹೀಗೆ.. ಇತ್ನೀಸಿ ಹಂಸೀ..ಇತ್ನೀಸಿ ಖುಶಿ.. ಎಂದು ಸಮಾಧಾನ ಹೇಳಿಕೊಂಡು ಹಿಂದೆ ಬಂದೆನು.

 ಕೆಲದಿನ ಏನೋ ಕಳಕೊಂಡ ಭಾವನೆ.. ಬಾಲ್ಕನಿಯಲ್ಲಿ ಏನೋ ಸದ್ದಾಯಿತೆಂದು ಹೋಗಿ ನೋಡಿದರೆ, ಅದೇ ಜೋಡಿ ಪಾರಿವಾಳಗಳು "ಊಂ..ಊಂ..." ಅನ್ನುತ್ತಿದ್ದವು! "ರೂಮ್ ಇಲ್ಲ, ಏನೂ ಇಲ್ಲ, ನಡೀರಿ.." ಎನ್ನಲು ಮನಸ್ಸಾಗಲಿಲ್ಲ. ಹಿಂದೆ ಬಂದೆ..

 ಕಸಬರಿಕೆಯ ಕಡ್ಡಿಗಳ ತುದಿಯನ್ನು ಸ್ವಲ್ಪ ತೆಗೆದುಕೊಂಡು ಹೋಗಿ ಬಾಲ್ಕನಿಯಲ್ಲಿ ಇಟ್ಟೆನು. ಪಾರಿವಾಳಗಳು ಖುಷಿಯಲ್ಲಿ ಒಂದೊಂದೇ ಕಡ್ಡಿಯನ್ನು  ತೆಗೆದುಕೊಂಡು ಹೋಗಿ ಗೂಡು ಕಟ್ಟಲು ಪ್ರಾರಂಭಿಸಿತು.