ಮಗಳಿಗೆ ಜಮಾಲಾಬಾದ್ ಕೋಟೆ ತೋರಿಸಬೇಕೆಂದು ಅನೇಕ ವರ್ಷಗಳಿಂದ ಬಯಸಿದ್ದೆನು. ಸಾಧ್ಯವಾಗಿರಲಿಲ್ಲ. ಕಳೆದ ಏಳನೇ ತಾರೀಕು ಮಂಗಳೂರು ಸಮೀಪ ಒಂದು ಫಂಕ್ಷನ್ ಮುಗಿಸಿ, ಎಂಟನೇ ತಾರೀಕಿಗೆ "ಗಡಾಯಿ ಕಲ್ಲು" ( ಜಮಾಲಾಬಾದ್ ಕೋಟೆಯನ್ನು ಸ್ಥಳೀಯರು ಕರೆಯುವುದು) ಹತ್ತುವುದು ಎಂದು ತೀರ್ಮಾನಿಸಿ ಬೆಂಗಳೂರಿಂದ ಹೊರಟೆನು.
"ಇತ್ತೀಚಿನ ದಿನದವರೆಗೆ ಮಳೆ ಬರುತ್ತಲಿತ್ತು. ಹುಲ್ಲು ಬಹಳವಿರುತ್ತದೆ, ಮುಂದಿನ ತಿಂಗಳು ಹೋಗುವುದು ಉತ್ತಮ" ಎಂದರೂ ನನ್ನ ನಿರ್ಧಾರ ಬದಲಿಸಲಿಲ್ಲ. ನಾನು, ನನ್ನ ಮಗಳು, ನನ್ನ ಎವರ್ ರೆಡಿ ಭಾವ, ಅವನ ಮಗ, ಇನ್ನೊಬ್ಬ ಭಾವನ ಎರಡು ಮಕ್ಕಳು ಹೋಗುವುದೆಂದು ತೀರ್ಮಾನವಾಯಿತು.
ಒಬ್ಬರು ಸಂಬಂಧಿ ಹೋಗಿ ಬರಲು ಕಾರು ರೆಡಿ ಮಾಡಿದರು, ಇನ್ನೊಬ್ಬರು "ಚಪಾತಿ- ಕೂರ್ಮ" ಬುತ್ತಿಕಟ್ಟಿ ಕೊಟ್ಟರು. ಎಂಟನೇ ತಾರೀಕು ಎಂಟು ಗಂಟೆಗೆ "ಗಡಾಯಿಕಲ್ಲಿಗೆ ಜೈ" ಎಂದು ಹೇಳಿ ನಮ್ಮ ಪ್ರಯಾಣ ಪ್ರಾರಂಭಿಸಿದೆವು.
ಕಾರಲ್ಲಿ ಹೋಗುವಾಗ ಮಕ್ಕಳ ಬಳಿ ಹೇಳಿದೆ-" ಮುಂದೆ ಈ ಬೆಟ್ಟ ಉಳಿಯುತ್ತೋ ಇಲ್ಲವೋ ಹೇಳಲು ಸಾಧ್ಯವಿಲ್ಲ. ಕೆಲ ರಾಜಕಾರಣಿಗಳು, ಅಧಿಕಾರಿಗಳು ಸೇರಿ ಅಭಿವೃದ್ಧಿ (ಚತುಷ್ಪಥ ರಸ್ತೆ?) ನೆಪದಲ್ಲಿ ಕಲ್ಲನ್ನು ಸೈಜ್ ಕಲ್ಲು ಮಾಡಿ ಚೀನಾಕ್ಕೆ ಸಾಗಿಸಿಯಾರು. ಈಗಲೇ ಕಣ್ತುಂಬಾ ನೋಡಿಕೊಳ್ಳಿ."
"ಹಾಗೆಲ್ಲಾ ಆಗಲು ನಾವು ಬಿಡುವುದಿಲ್ಲ" ಅಂದರು ಮಕ್ಕಳು.
"ನಿಮ್ಮ ವಿರೋಧ ಯಾರು ಕ್ಯಾರ್ ಮಾಡುತ್ತಾರೆ. ಬೆಂಗಳೂರಲ್ಲಿ ಒಂದು "ದೊಡ್ಡಬೆಟ್ಟಹಳ್ಳಿ" ಅಂತ ಊರಿದೆ. ಅಲ್ಲಿದ್ದ ದೊಡ್ಡ ಕಲ್ಲಿನ ಬೆಟ್ಟದಿಂದಾಗಿ ಆ ಹೆಸರು. ಬೆಟ್ಟದ ಮೇಲೆ ಒಂದು ಗುಡಿಯೂ ಇದೆ. ಆ ಬೆಟ್ಟದ ಮೇಲೆ ನಿಂತರೆ "ಯಲಹಂಕ" ಪೂರ್ತಿ ಕಾಣುತ್ತಿತ್ತು ಅಂತ ಹೇಳುತ್ತಿದ್ದರು. ಆ ಕಲ್ಲು ಕಟ್ ಮಾಡಿ ದಿನಾ ಲಾರಿಯಲ್ಲಿ ಸಾಗಣೆಯಾಗುತ್ತಿದೆ. ಸಮೀಪದ ಕೆರೆ ಕಸಕಡ್ಡಿ ಹಾಕಿ ಮುಚ್ಚುತ್ತಿದ್ದಾರೆ. ಇನ್ನು ಸ್ವಲ್ಪ ದಿನದಲ್ಲಿ ಆ ಊರು ಬೆಟ್ಟವಿಲ್ಲದ "ದೊಡ್ಡಬೆಟ್ಟಹಳ್ಳಿ"ಯಾಗುವುದು.
ಹಿಂದಿನ ಕಾಲದವರು ಸ್ಥಳೀಯ ಕಲ್ಲು ಮಣ್ಣಿಂದ ಗುಡಿ- ದೇವಸ್ಥಾನಗಳನ್ನು ಕಟ್ಟಿ, ಅದಕ್ಕೆ ಸಂಬಂಧಿಸಿ ಸುತ್ತಲೂ ಪವಿತ್ರ ಮರಗಳು, ಸಮೀಪದಲ್ಲಿ ಕೆರೆ, ನಾಗರ ಬನ..ಹೀಗೇ ಜನತೆಯ ಮತ್ತು ಊರಿನ ಒಳಿತಿಗಾಗಿ ಕಟ್ಟುತ್ತಿದ್ದರು. ಈಗಿನ ಮಾರ್ಬ್‌ಲ್ ಮೊಸಾಯಿಕ್‌ಗಳಿಗೆ ಒಗ್ಗಿದ ಭಕ್ತರು ಅಲ್ಲಿಗೆ ಹೋಗುವುದು ಕಮ್ಮಿ. ಆದಾಯ ಕಮ್ಮಿಯಿದ್ದಾಗ ಗುಡಿ ಪಾಳು ಬೀಳುತ್ತಿರುವುದು. ಆವಾಗ ಆ ಗುಡಿಯ ಆಢಳಿತಕ್ಕೆ ಅಲ್ಲಿನ ಜಮೀನು ಮಾಫಿಯಾದ ಒಡೆಯನೋ, ಏರಿಯಾದ ಪುಡಿ ರೌಡಿಯೋ, ಅಥವಾ ರಾಜಕಾರಣಿಯೋ ಸೇರಿಕೊಳ್ಳುವರು. ಗುಡಿಯ ಜೀರ್ಣೋದ್ಧಾರವಾಗುವುದು. ನೆಲಗೋಡೆಯೆಲ್ಲಾ ಮಾರ್ಬ್‌ಲ್ ಮೊಸಾಯಿಕ್‌ಗಳಾಗುವುದು. ಸುತ್ತಲಿನ ಮರಗಿಡಗಳ ಸಾಗಣೆಯಾಗಿ ಇನ್ನೆರಡು ಜನಪ್ರಿಯ ದೇವತೆಗಳ ಸ್ಥಾಪನೆಯಾಗುವುದು. ನಾಗರ ಬನಹೋಗಿ, ನಾಗರ ಕಲ್ಲು, ನವಗ್ರಹಗಳು ದೇವಸ್ಥಾನದೊಳಗೆ ಜನರಿಗೆ ಸುತ್ತುಹಾಕಲು ಅನುವಾಗುವಂತೆ ಸೇರಿಕೊಳ್ಳುವವು. ಕೆರೆಯಲ್ಲಿ ನೀರಿಲ್ಲ, ಪಾಳುಬಿದ್ದಿದೆ ಎಂದು ಹೇಳಿ, ಅದನ್ನು ಮುಚ್ಚಿ ಅಲ್ಲಿ ಕಲ್ಯಾಣ ಮಂಟಪ ಸೈಡಲ್ಲಿ ಉದ್ದಕ್ಕೂ ಕಮರ್ಷಿಯಲ್ ಅಂಗಡಿಗಳು ಬರುವವು. ಉದ್ದ ಗಡ್ಡಬಿಟ್ಟು ಅದೇ ಪುಡಿ ರೌಡಿ ಅಲ್ಲಿನ ಸ್ವಾಮಿಯಾಗಲೂಬಹುದು....." ಕೇಳುವವರಿರುವಾಗ ನನ್ನ ಭಾಷಣ ಜೋರಾಗಿ ಸಾಗಿತ್ತು. ಅಷ್ಟರೊಳಗೆ ಕೋಟೆ ಬುಡಕ್ಕೆ ಬಂದಿದ್ದೆವು.
ಮಂಗಳೂರಿಂದ ಉಜಿರೆ/ಧರ್ಮಸ್ಥಳಕ್ಕೆ ಹೋಗುವ ದಾರಿಯಲ್ಲಿ ಬೆಳ್ತಂಗಡಿ ಸೇತುವೆ ದಾಟಿದ ಮೇಲೆ ಒಂದು ಕ್ರಾಸ್ ರೋಡ್ ಬರುವುದು. ಎಡಕ್ಕೆ ತಿರುಗಿ ಅಂದಾಜು ೭-೮ ಕಿ.ಮೀ ಸಾಗಿದರೆ ಮಹಾಧ್ವಾರ ಕಾಣಿಸುವುದು. ಅದನ್ನೂ ಸುತ್ತಿ ಬಳಸಿ ಸ್ವಲ್ಪ ಮುಂದೆ ಹೋದರೆ ಬೆಟ್ಟ ಹತ್ತುವ ಮೆಟ್ಟಲುಗಳು ಕಾಣಸಿಗುವುದು. ರಸ್ತೆ ಬದಿಯಲ್ಲಿ ವಾಹನವನ್ನು ಪಾರ್ಕ್ ಮಾಡಿದರಾಯಿತು. ಅಲ್ಲೊಬ್ಬ ಗಾರ್ಡ್ ಬರುವನು. ವಿಳಾಸ, ಮೊಬೈಲ್ ನಂಬರ್ ಅವನ ಬುಕ್‌ನಲ್ಲಿ ಎಂಟರ್ ಮಾಡಿ, ದೊಡ್ಡವರಿಗೆ ೨೦ ರೂ, ಮಕ್ಕಳಿಗೆ ೧೦ ರೂನಂತೆ ಹಣ ಕಟ್ಟಿದರಾಯಿತು-ಮೇಲೆ ಹೋಗಲು ಪರ್ಮಿಶನ್ ಸಿಗುವುದು. ಬೆಟ್ಟ ಹತ್ತೋಣ ಬನ್ನಿ.
(ಇನ್ನೂ ಇದೆ)
ಪ್ರತಿಕ್ರಿಯೆ (5)
ನೀವಂದಂತೆ ಚಾರಣಿಗರಿಗೆ ಒಳ್ಳೆಯ ಪ್ರದೇಶ. ಜಾಸ್ತಿ ಕಷ್ಟವೂ ಇಲ್ಲ. ಸುಂದರ ದೃಶ್ಯಗಳನ್ನು ನೋಡಲು ಸಾಕಷ್ಟು ಸಮಯ ಸಿಗುವುದು. ರಾತ್ರಿಯೊಳಗೆ ಹಿಂದಿರುಗಲೂಬಹುದು.
ಹೈದರ್-ಟಿಪ್ಪು ಬಗ್ಗೆ ನೀವು ಬರೆದ ಲೇಖನ ಓದಿದ್ದೆ. ಈ ಲೇಖನ ಸಿದ್ದಪಡಿಸುವಾಗಲೂ ಟಿಪ್ಪು ಯಾವಾಗ ಈ ಗುಡ್ಡವನ್ನು ವಶಪಡಿಸಿದ್ದು, ಯಾವಾಗ ಇದು ಬ್ರಿಟಿಷರ ವಶವಾಯಿತು, ಮಂಗಳೂರ ಕ್ರಿಶ್ಚಿಯನ್ನರು... ಇತ್ಯಾದಿ ಬಗ್ಗೆ ಓದಿದ್ದೆ.
ಇತಿಹಾಸ ನಾವು ಓದಿದ ತರಹವೇ ಇರಲಿ. ಟಿಪ್ಪು ನಮ್ಮ ಹೆಮ್ಮೆಯ ಹುಲಿಯಾಗೇ ಇರಲಿ.
ನಾನು ಸಿದ್ದ.
. .
ಎಂದು ನಮ್ಮನ್ನೆಲ್ಲ ಹುರುದುಂಬಿಸಿ ನೀವು ಕೆಳಗೆ ಏನೋ ತಿನ್ನುತ್ತ ಕುಳಿತುಕೊಳ್ಳಬೇಡಿ
:)
ಅವರು ನೋಡಿದ್ದು ಜಮಾಲಾಬಾದ್ ಕೋಟೆ... ನಾವ್ ನೋಡಿದ್ದು ಮೂಡಬಿದ್ರಿ - ಬೆಳ್ಮಣ್ಣು ,ಸಚೇರಿಪೇಟೆ ,ಶಿರ್ವ (ಫೇಸ್ಬುಕ್ನ ಶ್ರೀಯುತ ಪುಷ್ಪರಾಜ್ ಚೌಟ ಅವರ ಊರು )-ಉಡುಪಿಗೆ ಬಂದು -ಅಲ್ಲಿಂದ ಬೆಂಗಳೂರಿಗೆ ಬಂದದ್ದಾಯ್ತು ..!! ಜಮಾಲಾಬಾದ್ ಕೋಟೆ ಹೆಸರು ಕೇಳಿರುವೆ , ಅಲ್ಲಿಗಿನ್ನೂ ಹೋಗಿಲ್ಲ, ನಮ್ಮ ರಾಯಚೂರು ಕೋಟೆಗೆ ಒದಗಿದ ದುಸ್ತಿತಿ ಕಣ್ಣಾರೆ ನೋಡಿರುವೆ , ಅದು ಇಲ್ಲಿಯೂ ಆಗದೆ ಇರಲಿ ..!
ಸಚಿತ್ರ ಲೇಖನ ಸೂಪರ್ , ಆದರೆ ಯಾರ್ಯಾರದೋ ಪೋಟೋ ಹಾಕಿರುವಿರಿ ..!!
ಈಗ ಹೇಗಿದೆ ಅಂದರೆ ನಿಮ್ಮದೇ ಪೋಟೋ ಹಾಕಿದರೂ ನಂಬಲು ನಾವ್ ತಯಾರಿಲ್ಲ್ಲ - ಥೇಟ್ ನಾ ಬರೆದ ' ನಾನೇ ರ್ರೀ ಗಣೇಶ್ ' ಬರಹದ ತರಹ ..!! ಇನ್ನೇನು ಕೆಲವು ದಿನಗಳಲಿ ನಿಮ್ಮ ನನ್ನ ಜೊತೆಗೆ ನಿಂತು ತೆಗೆದ ಚಿತ್ರವನ್ನೇ ಇಲ್ಲಿ ಹಾಕುವ .. ನೀವ್ ಇಷ್ಟ ಪಟ್ಟರೆ ..!!
ಶುಭವಾಗಲಿ
\।/
ಬೆಟ್ಟ ಕರುಗಿತೋ ಇಲ್ಲಾ ನೀವೇ ಕರಿಗಿದ್ದೀರೋ ಈ ಜಮಾಲಾಬಾದ್ ಬೆಟ್ಟ ಹತ್ತಿ ಇಳಿದು :)
ಯಾವುದೇ ಸಂಗತಿ ರಹಸ್ಯವಾಗಿದ್ದರೇನೇ ಮಜಾ .. ಕುತೂಹಲ ..!!
ಅದು ಬಟಾ ಬಯಲಾದರೆ ಎಂತು ಸ್ವಾರಸ್ಯ?
ಅದ್ಕೆ ಗಣೇಶ್ ಅಣ್ಣ ಮತ್ತು ನನ್ನ ಸಮ್ಮಿಲನ ಬಗ್ಗೆ ಇಲ್ಲಿ ಬರೆಯುವ ಚಿತ್ರ ಸೇರಿಸುವ ಬಗ್ಗೆ ಗೊಂದಲವಿದೆ ..
ನೋಡುವ ...!! ಏನಾಗುತ್ತೆ ಅಂತ .>!!! ಶುಭವಾಗಲಿ \|/