ನಯನಗಳ ಭೇಟಿಯಲ್ಲಿ

ಮೊದ ಮೊದಲ ಮಾತಿದೆ

ಮಾತುಗಳ ದಾಟಿಯಲ್ಲಿ

ಮನ ಮನದ ನಂಟಿದೆ

ಸಂವೇದನೆ

ಸಂಯೋಜನೆ

ನಮ್ಮೊಳಗೆ ಹೂತಿದೆ

 

ಮೊಗಸಾಲೆಯು ಮುಖಿಯಾದರೆ

ಮತಿಮೌನ ತಾನಾಗಿಯೆ

ಮಿತಿಮೀರಿದ ಅತಿರೇಖವು

ಬಂತೇನು ನನಗಾಗಿಯೆ

ಭಾನ ಸೆರಗು

ಭೂಮಿ ತಾಗಿ

ಧರೆಯ ಸೊಬಗು

ಮುಗಿಲ ತೂಗಿ

ಸೆಳೆದಂತೆ ನನಗಾಗಿದೆ

 

ದಾಖಲಿಸದ ಹೃದಯದೊಳಗೆ 

ಅವಳೀಗ ಕಥೆಯಾದಳು

ಪುಟ ಪುಟವನು ನಾ ತೆರೆಯುತ

ಪ್ರತಿದಿನವೂ ಓದಾದಳು

ರವಿಯ ಕಿರಣ

ಕೈಯ ಚಾಚಿ

ಮೋಡ ಹನಿಯ

ಎದೆಗೆ ಬಾಚಿ

ಹಿಡಿದಂತೆ ನನಗಾಗಿದೆ

 

ತಿಳಿ ಕನಸಿನ ಕಣ್ಣೊಳಗಡೆ

ನೇವರಿಸಿದಂತಾಗಿದೆ

ಅಮವಾಸ್ಯೆಯ  ಕಣ್ಣೊಳಗಡೆ

ಬೆಳಕೀಗ ರುಜು ಮಾಡಿದೆ

ಕಲ್ಲ ಕಲೆಯು

ಕೈಯ ಬೀಸಿ

ಮರದ ಹೂವು

ಕಂಪ ಸೂಸಿ

ಮೈಮರೆಸಿದಂತಾಗಿದೆ

 

- ಹಾರೋಹಳ್ಳಿ ರವೀಂದ್ರ