ಮರುಳು ಮನಸಿನ ನಡೆಯನರಿತವ
ರಿರುವರೇ ಸ್ವಾರ್ಥದಲಿ ಸಕಲವ
ಮರೆಯುವೆವು ಕಲ್ಪನೆಯ ಕುದುರೆಯು ರೆಕ್ಕೆಗೆದರುತಿರೆ|
ಒರಗುವೆವು ಮೈಮನದ ಬಳಲಿಕೆ
ಕರಗೆ ಮನದ೦ಗಣದ ರ೦ಗದ
ಲಿರುಳು ಕಾಣುವ ಕನಸುಗಳಿಗೆಲ್ಲಿಹುದು ಕಡಿವಾಣ ?||
ಮನುಜರಾಗಿಯೆ ಹುಟ್ಟಿ ಬೆಳೆದರು
ದನುಜರ೦ದದಿ ಯೋಚಿಸುತ ಧನ
ಕನಕಗಳ ಸ೦ಚಯಿಸುತಿರಲೆಮ್ಮೆದೆಯು ಮಿಡಿಯುತಿರೆ|
ಅನವರತ ಬಯಸುತ್ತ ಹೊನ್ನಿನ
ಖನಿಯೆ ಹುದುಗಿಹುದೆ೦ಬ ವಾ೦ಛೆಯ
ಕನಸುಗಳ ನನಸಾಗಿಸಲು ಹೊರಡುವೆವು ಹುರುಪಿನಲಿ||
ಕೆಲರು ಖನಿಜದ ಗಣಿಯ ದೋಚಿರೆ
ಹಲರು ಕಲ್ಲಿದ್ದಲನೆ ಹೊರುವೆವು
ಹಲವ ಹಿಡಿಯುತ ಕೋಟೆಕೊತ್ತಲಗಳಲಿ ಶೋಧಿಪೆವು|
ಉಲಿದು ಮೆಲುನುಡಿಗರೆವ ತ೦ತ್ರವ
ಸಲಿಕೆಯಿಲ್ಲದೆ ತೇಲಿಬಿಡುತಲಿ
ಸುಲಭ ಮಾರ್ಗದಲೆಗರಿಸುವೆವೀ ಜನರ ಜೇಬುಗಳ||
ಹಸಿರ ಹೊನ್ನನು ಬೆಳೆವ ಭೂಮಿಯ
ಬಸಿರ ಸೀಳುತಲುಸಿರ ಕಟ್ಟಿಸಿ
ಹೊಸಕಿ ಹಾಕುವೆವಿ೦ದು ಸಿರಿಯನು ಸೆಳೆಯುವಾಗ್ರಹದಿ|
ಹುಸಿಯ ಮಾಡುತ ಸತ್ಯಧರ್ಮವ
ಮಸಿಯಬಳಿಯುತ ನೀತಿನಿಷ್ಠೆಗೆ
ಮಸಣವೇ ಸ್ವರ್ಗಕ್ಕೆ ಹಾದಿಯಿದೆ೦ದು ಸಾರುವೆವು||
ಮೇವಿನಲಿ ಹಸಿರಾದ ಧನವನು
ಸಾವಕಾಶದಿ ಮೆಲುಕು ಹಾಕುತ
ಲೀವ ಹಗರಣ ಸೆಗಣಿ ಗಬ್ಬಿನ ನಾತ ಪಸರಿಸಿರೆ |
ಕಾವ ನಾಥನ ನುತಿಸುತಲಿ ಕಹಿ
ಬೇವುಣಿಪ ಸೆರೆಮನೆಯ ಸೇರುತ
ಸಾವಿನ ಕ್ಷಣವನ್ನು ಕಾಯುತ ಕುಳಿತು ಕೊರಗುವೆವು||
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!