ಬಾಗಿಲ ಹಿಂದೆ ನಿಂತು

ಬರೀ ಮೊಗವನಷ್ಟೇ ಇಣುಕಿಸಿ

"ಅವುಕ್" ಎಂದು ನಗುವ ಮುಗ್ಧ ಮಗುವಿನ ಹಾಗೆ

ಹಗಲಿನ ಹಿಂದೆ ನಿಂತು

ಕತ್ತಲಿನ ಮುಖ ತೋರಿಸೋ

ನಸುಗತ್ತಲಿನ ಆಟ ಇಂದ್ರಜಾಲದ ಹಾಗೆ

 

ಹಗಲೆಲ್ಲಾ ಹಸಿರನು ತಾ ಪಸರಿಸಿ

ಪರಿಮಳದ ಹೂವನು ತಾ ಅರಳಿಸಿ

ಮೋಹಕದ ನಗೆ ಬೀರಿ ತಾ ನಿಂತಿದೆ

ನಸುಗತ್ತಲದು ನೆಳಲು ಬೆಳಕಿನ ನಡುವೆ|

ಹಕ್ಕಿಗಳ ಕೊರಳಿಂದ ಚಿಲಿಪಿಲಿಯ ಹೊಮ್ಮಿಸಿ

ನಿಸರ್ಗದ ಓಟವನು ತಾ ನಿಧಾನಗೊಳಿಸಿ

ಸುತ್ತಲೂ ಹರಡುವದು ದಿನದ ಛಾಯೆಯೊಳಗೆ|

 

ಏನೆಲ್ಲ ಚಿಂತೆಯನು ಹೊತ್ತುಕೊಂಡು

ಹಗಲ ಹೊಣೆ ಹೆಗಲಲಿ ಎತ್ತಿಕೊಂಡು

ದಿನದ ಪ್ರಭೆಯಲೂ ಮಂಕಾಗಿ ಕುಳಿತಂಥ

ಜನರೆಲ್ಲ ಓಡುವರು ಮನೆಯೆಡೆಗೆ

ಇರುಳು ಧರಣಿಯ ಆವರಿಸತೊಡಗೆ|

ಕ್ಷಣ ಮಾತ್ರದಿ ದಿನದ ಒತ್ತಡವ ಮರೆತು

ಗೂಡು ಸೇರುವ ತವಕ ಮನದಿ ಬೆರೆತು

ಸೇರುವರು ಸಂಜೆಯ ದೌಡಿನೊಳಗೆ

ತನ್ನೊಲವಿನ ಜನರ ಸೇರುವರೆಗೆ|

 

ಕತ್ತಲೆಂಬ ದೈತ್ಯನ ಅಂಜಿಕೆಯ ತಾ ತೋರಿ

ಹಗಲೆಂಬ ಹೊಂಗನಸ ನಿಧಾನದಿ ಮರೆ ಮಾಡಿ

ಜಗವನಾಳುವ ಪರಿಯು ನಸುಗತ್ತಲಿನ ಯಕ್ಷನದು

ಹಗಲು ಇರುಳಿನ ನಡುವೆ ಸೇತು ಬೆಸೆಯುವದು

ಇರುಳಿನ ನಂತರದ ಬೆಳಕಿನ ಬಗೆಗಿನ

ಕನಸಿನ ಕಟ್ಟಡಕೆ ಬುನಾದಿಯನು ಇಕ್ಕುವುದು|