ಬೀಳ್ವ ಮಂಜನು ಬೀಳ್ಕೊಡುವುದಕೆ  ಋತು ವಸಂತನು ಬಂದಿರೆ

ಹೂತ ಮಾಮರದಲ್ಲಿ ಮೆಲ್ಲಗೆ ಕೊಂಬೆರೆಂಬೆಯನಲುಗಿಸಿ

ಕೋಗಿಲೆಯ ಸವಿದನಿಯ ಹಾಡನು ದಿಕ್ಕುದಿಕ್ಕಲಿ ಪಸರಿಸಿ

ಮಂದ ಮಾರುತ ಹೃದಯಗಳನೂ ಜೊತೆಯಲೇ ಸೆಳೆದೊಯ್ದನೆ!

 

ಸಂಸ್ಕೃತ ಮೂಲ (ಕಾಳಿದಾಸನ ಋತುಸಂಹಾರ, 6ನೇ ಸರ್ಗ-22):

 

ಅಕಂಪಯನ್ ಕುಸುಮಿತಾ: ಸಹಕಾರ ಶಾಖಾ

ವಿಸ್ತಾರಯನ್ ಪರಭೃತಸ್ಯ  ವಚಾಂಸಿ ದಿಕ್ಷು

ವಾಯುರ್ವಿವಾತಿ ಹೃದಯಾನಿ ಹರನ್ನರಾಣಾಂ

ನೀಹಾರಪಾತ ವಿಗಮಾತ್ ಸುಭಗೋ ವಸಂತೇ

 

-ಹಂಸಾನಂದಿ

 

ಕೊ: ಮಾರ್ಚ್ ೨೦ ವಸಂತ ವಿಷುವ - ಅಂದರೆ  ವಸಂತದ ಮೊದಲ ದಿನ. ಈ ದಿನ ಹಗಲು ಇರುಳು ಭೂಮಿಯ ಮೇಲೆ ಎಲ್ಲ ಕಡೆಯಲ್ಲೂ ಒಂದೇ ಸಮನಾಗಿರುತ್ತವೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಗಳನ್ನ ಇಲ್ಲಿ ಮತ್ತೆ ___LINK_OPEN_href="http://hamsanada.blogspot.com/2008/09/blog-post_22.html"___ಇಲ್ಲಿ ನೀವು ಓದಬಹುದು.

 

ಕೊ.ಕೊ: ನಮ್ಮ ಪುರಾಣಗಳ ಪ್ರಕಾರ, ವಸಂತ ಅಂದರೆ ಮನ್ಮಥನ ಗೆಳೆಯನಂತೆ. ಈ ಮನ್ಮಥ ವಸಂತಕಾಲದಲ್ಲಿ ಅರಳುವ ಅರವಿಂದ, ಅಶೋಕ, ನೀಲೋತ್ಪಲ, ಚೂತ (ಮಾವು) ಮತ್ತೆ ನವಮಲ್ಲಿಕಾ - ಹೀಗೆ ಐದು ಹೂವಿನ ಅಂಬುಗಳನ್ನು ನೇರವಾಗಿ ಪ್ರೇಮಿಗಳ ಎದೆಗೇ ಗುರಿ ಇಡುತ್ತಾನಂತೆ! ತಪಸ್ಸು ಮಾಡಲು ಕುಳಿತಿದ್ದ ಶಿವನನ್ನೇ ಬಿಡಲಿಲ್ಲ ಈ ಮದನ ಅಂದರೆ, ಇವನು ಅದೆಷ್ಟು ಗಟ್ಟಿಗ ನೋಡಿ! ಶಿವನ ಮೂರನೇ ಉರಿಗಣ್ಣಿಂದ ಬೂದಿ ಆದರೂ, ದೇಹವೇ ಇರದೇ ಹೋದರೂ ತನ್ನ ಕಾಯಕವನ್ನು ಮಾತ್ರ ಮುಂದುವರಿಸಿಯೇ ಇದ್ದಾನೆ, ಯುಗ ಯುಗಾಂತರದಿಂದಲೂ. ___LINK_OPEN_href="http://hamsanada.blogspot.com/2011/05/blog-post_01.html"___ಇಂತಹ ಹೂ ಬಾಣ ಹಿಡಿದವನ ಮೇಲೊಂದು ಹಳೆಯ ಹರಟೆ ಇಲ್ಲಿದೆ.

 

ಕೊ.ಕೊ.ಕೊ: ಇಂತಹ ವಸಂತ ಕಾಲದಲ್ಲಿ ಬೀಸುವ ಗಾಳಿ ಅದೆಂತದದ್ದು ನೋಡಿ? ಎಲ್ಲರಲ್ಲೂ ಪ್ರೇಮವನ್ನು ಚಿಮ್ಮಿಸಿ ಅವರ ಹೃದಯಗಳನ್ನು ಸೆಳೆದೊಯ್ಯುವಂತಹದ್ದು ಅನ್ನುವುದು ಕಾಳಿದಾಸನ ಅಂಬೋಣ. ಕವಿಕುಲಗುರುವಲ್ಲವೇ ಅವನು? ಹಾಗೆಂದಮೇಲೆ ಅವನು ಹೇಳಿರುವುದು ನಿಜವೇ ಇರಬೇಕು, ಏನಂತೀರ?

 

ಚಿತ್ರ: ___LINK_OPEN_href="http://treesplanet.blogspot.com/2013/06/mangifera-indica-mango-tree.html#.Uyp_MPldXPU "___http://treesplanet.blogspot.com/2013/06/mangifera-indica-mango-tree.html...ಇವರ ಕೃಪೆ