ಕರಿಮಣಿಯ ಸುತ್ತಲಿನ ಚಿನ್ನವೆಲ್ಲ ಕರಗಿ ಹೆಂಡವಾಗಿ,
ಕೊನೆಗೆ ಕರಿ ಮಣಿಯೂ ಕರಗಿ ಅರಿಶಿನದ ಕೊಂಬಾಗಿ,
ಮನೆ ಎದುರಿನ ಬಟ್ಟೆ ನೇಲೆಯಲ್ಲಿನ, ಹೊಸ ಹಸಿರು ಸೀರೆ,
ಚಿಕ್ಕ ಪುಟ್ಟಿಗೆ ಲಂಗವಾಗಿ, ಉಳಿದದ್ದು ತಂಪಾದ ಕವದಿಯಾಗಿ,
ಮಧ್ಯ ರಾತ್ರಿಯವರೆಗೂ ಬುಡ್ಡಿ ದೀಪದ ಕೆಳಗೆ ಕಾದು,
ತುಟಿ ಒಣಗಿದರೂ, ಮಧುರ ಮಾತಿನಲೇ ಗಂಡನನ್ನು
ಎದುರುಗೊಂಡಾಕೆ ಇಂದು ಸತ್ತಿದ್ದಾಳೆ, ಕಣ್ಣೀರ ಸಾಗರದಲಿ
ಅಮ್ಮನ ಸೆರಗು ಹಿಡಿದು ನಗುತ್ತಿದ್ದ ಪುಟ್ಟಿ, ದೊಡ್ಡದಾಗಿ,
ಯಾರದೋ ಕಾರಿನ ಬಣ್ಣದ ಗಾಜಿಗೆ ಮರುಳಾಗಿ ಮನೆ ಬಿಟ್ಟ ಮೇಲೆ,,
ಕುಡಿದರೂ-ಬಡಿದರೂ ಗಂಡನೆನ್ನುವವನೊಬ್ಬ ಇರಬೇಕೆನ್ನುವ
ಹಂಬಲದಲ್ಲಿ, ಕಣ್ಣೀರಲೆ ಸ್ನಾನ ಮಾಡಿ ಗಂಡ ಸತ್ತ ಮೇಲೆ,,
ಸತ್ತಿದ್ದಾಳೆ ಆಕೆ, ಬದುಕಿಗೆ ಸವಾಲಾಗಿ !!
ಗೌಡನ ಮನೆಯ, ತೊಳೆಯುವ ಪಾತ್ರೆಯಲಿ ಉಳಿದ
ಅನ್ನದ ಕಾಳುಗಳನು ಸವರಿ, ಕಣ್ಣಲೇ ಸವಿದು, ಉಂಡಂತೆ ತೇಗಿದಾಕೆ,
ಗೌಡತಿಯ ಹಳೆಯ ಸೀರೆ, ಹೊಸ ವರ್ಷಕ್ಕೆ ತನಗೆ ಹೊಸದಾಗಿ
ಸಿಕ್ಕಿದಾಗ, ಅದರ ಅಂದವನು ಅರೆ ಮುರಿದ ಕನ್ನಡಿಯಲಿ ಕಂಡಾಕೆ,
ಸತ್ತಿದ್ದಾಳೆ ಇಂದು ಕನ್ನಡಿಯ ಹೊರಗೆ, ಎಲ್ಲರಿಗೂ ಕಾಣುವಂತೆ,,
ಜೋಪಡಿಯ ಸಂದಿಯಲಿ ಹಾದು ಬರುವ ಕಿರಣಗಳು
ಸಗಣಿ ನೆಲಕ್ಕೆ ತಾಗಿ, ಸಗಣಿ ಒಣಗಿದಾಗ,,,, ಗೌಡನ ಮನೆಯ
ಕೊಟ್ಟಿಗೆಯ ಮೆಟ್ಟಿಲಿನ ಸಿಮೆಂಟಿನ ಮೇಲೆ ಕ್ಷಣ ಕಾಲ ನಿಂತು,
ಜೋಪಡಿಯ ನೆಲ ಸಿಮೆಂಟ್ ಆದಂತೆ ಕನಸು ಕಂಡಾಕೆ,
ಸತ್ತಿದ್ದಾಳೆ ಇಂದು ಬರಿಯ ನೆಲದ ಮೇಲೆ, ದೇಹ ಹಾಸಿ,
ಆಕೆ ಸತ್ತರೂ,,,, ಕನಸು ಸತ್ತೀತೆ ? ಆಕೆಯ ಬದುಕು ಸತ್ತೀತೆ ?
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!