ದೂರಗಳು     

ನಿಮಿಷಗಳಲ್ಲಿ  ಅಳೆಯುವರು  ದೂರವನ್ನು

ತಾಸುಗಳಲ್ಲಿ ಅದೇ ದೂರವನ್ನು  ಇನ್ನೊಮ್ಮೆ

ಅಳೆಯುವರೊಮ್ಮೆ ಬಾಣದಂತೆ, ಮತ್ತೊಮ್ಮೆ ಬಿಲ್ಲಿನಂತೆ

ಗೇಣು, ಚೋಟು,  ಮೊಳ,  ಮಾರುಗಳಲ್ಲಿ ಮತ್ತೆ ಹೆಜ್ಜೆಗಳಲ್ಲೂ ಅದರಳತೆ

ಗಾವುದ, ಫರ್ಲಾಂಗು, ಮೈಲು, ಹರದಾರಿಗಳು ಕಾಣವು ಈಗ

ಖಣ, ವಾರಗಳೂ ಸೀರೆ ಧೋತರಗಳಲ್ಲಿ ಮರೆಯಾಗಿ ಹೋಗಿವೆ

ಜೀವ ಹಿಡಿದಿವೆ ನೂಲು, ಇಂಚು, ಫೂಟುಗಳು ಕಟ್ಟಡಗಳ ಚೌಕಟ್ಟಿನಲ್ಲಿ

ಆಳುತ್ತಿವೆ ಸೆಂಟಿಮೀಟರು,  ಮೀಟರು, ಕಿ.ಮೀಗಳು ಈಗ

ಇನ್ನು, ಲಿಂಬೆಕೈಯಿಯ ದೂರಳತೆಗಳು

ಒಯ್ಯುವವು  ಕಲ್ಲುತಿಂದು ಕರಗಿಸಿದ ಹುಂಬ ಗಳಿಗೆಗಳಿಗೆ

ಕಣ್ಣಳತೆಗಳೂ, ಕೂಗಳತೆಗಳೂ, ಹಾರಿಗ್ಗಾಲುಗಳೂ,

ಜಪಾಟಿಗಳಲ್ಲೂ ದೂರದ ಚಾವಿಯಿದೆ,

ತೆರೆದುಕೊಳ್ಳುವವು ಮತ್ತೆ ರಸಗಳಿಗೆಯ ಬಳಿಗೆ

ಒಂದಾಳು ಎರಡಾಳು ಅಳೆಯುವರು ಬಾವಿಯ, ಹೊಳೆದಂಡೆಯ ಮಂದಿ

ನಾಟಿಕಲ್ ಮೈಲಿಯಲಿ ದೂರ, ಕಿಮೀಗಳ ಆಳಗಳಲ್ಲಿ ಸಾಗರದ ಮಂದಿ

ಶಬ್ದವೇಗವೂ ಅಳೆಯುವುದು ದೂರವನ್ನು

ಶರವೇಗವೂ ಸಾಲದು, ಅಳೆಯಲು ಬೆಳಕಿನ ದಾರಿಯನ್ನು

ಬಳಸುವನು ರೈತ ‘ನಂಬರ’ನ್ನು

ತಿನ್ನುವರು ಕೆಲವರು ಆರಾಮವಾಗಿ, 'ಟೈಮ್’ನ್ನೂ

ದೂರದಿಂದ ಹತ್ತಿರವಾಗುವ ಸಂಬಂಧಗಳಲ್ಲಿಯೂ ಅಡಗಿದೆಯಲ್ಲವೆ

ಅಂಕುಡೊಂಕಿನ ದೂರ,

ಸೂಕ್ಷ್ಮಾತಿಸೂಕ್ಷ್ಮ ಅಳತೆಗಳು, ಅಳತೆಗೂ ಸಿಗದ ಕಾಲಾತೀತ ದೂರಗಳು,

ಹತ್ತಿರವಿದ್ದರೂ ದೂರವಿರುವ, ದೂರವಿದ್ದರೂ ಹತ್ತಿರವಿರುವ

ದೂರಗಳೂ ಇವೆಯಲ್ಲವೆ!

ಹುಡುಕಿದರೆ ಸಿಗುತ್ತವೆ,

ಅವು ಹುಡುಕಿದರೆ ಸಿಗುತ್ತವೆ!