ಇದು ಭಾರತವಂತೆ ಅದು ಪಾಕಿಸ್ತಾನವಂತೆ!

ಇದು ಇವರದಂತೆ ಅದು ಅವರದಂತೆ!

ಹಿಂದೂ ಅಂತೆ ಮುಸ್ಲಿಂ ಅಂತೆ ಕ್ರೈಸ್ತರಂತೆ!

ಅವರು ಹಾಡಿದರೂ ನನ್ನ ಹಾಡೆ

ಇವರು ಜಪಿಸಿದರೂ ನನ್ನದೇ ಜಪವೇ

ಈ ಮನುಜರೇಕೆ ಅಜ್ಞಾನಿಗಳಂತೆ ವರ್ತಿಸುತ್ತಿರುವರು?

ಬಲು ಪ್ರೀತಿಯಿಂದ ಭೂಗೋಳ ಸೃಷ್ಟಿಸಿ

ಜೀವ ವೈವಿದ್ಯಗಳ ಸೃಜಿಸಿದೆ.

ಮನುಜನೆಂಬ ಪ್ರಾಣಿಯ ಅತಿ ಚಿಕ್ಕ ಮೆದುಳಲ್ಲಿ ಅಪಾರ ಶಕ್ತಿಯ ತುಂಬಿದೆ.

ಜ್ಞಾನ ಭಂಡಾರವ ತುಂಬಿದೆ.

ಇಂದು ಆ ಜ್ಞಾನವೇ ವಿಜ್ಞಾನವೆನಿಸಿಕೊಂಡು ನನ್ನೆಡೆಗಿನ ಅಜ್ಞಾನ ಮೇರೆ ಮೀರುತ್ತಿದೆ.

ಈ ಮನುಜರೇಕೆ ಅಜ್ಞಾನಿಗಳಂತೆ ವರ್ತಿಸುತ್ತಿರುವರು?

ಭೂದಾನವಂತೆ ಗೋದಾನವಂತೆ!

ಹಸಿದು ಮಿಯ್ಯಾಂ ಎನ್ನುವ ಬೆಕ್ಕಿನ ಆರ್ತನಾದವನ್ನು ಅರ್ಥೈಸದೆ ವನ್ಯ ಮೃಗಗಳ ನಾಶ ಮಾಡಿ ತನ್ನ ಮರಿ ಮಕ್ಕಳಿಗೆಂದು ಆಸ್ತಿ ಎಂಬ ಪದದಿಂದ ಸುತ್ತ ಕಾಡಿಗೆ ಬೇಲಿ ನಿರ್ಮಿಸುವ ಇವರು ತನ್ನ ಜಾತಿ ಬಾಂಧವರಿಗೆ ಅಗ್ರದೆಲೆ ಭೋಜನವ ದಾನವೆಂದು ನೀಡಿ ಅದಾವ ಪುಣ್ಯವ ನನ್ನಿಂದ ನಿರೀಕ್ಷಿಸುವರು?

ಸಕಲವನು ಬಲ್ಲ ಸರ್ವಜ್ಞ ನಾನು. ಕಾಲಕ್ಕೂ ಜನನ ಮರಣಕ್ಕು ಅತೀತನು ನಾನು. ಪ್ರಶ್ನೆ ಮತ್ತು ಉತ್ತರ ಈ ಎರಡಕ್ಕು ಸಲ್ಲದ ಅಜಾತ ಶತ್ರು ನಾನು. ಆದರೆ ಈ ಮಾನವರು ನನಗೇ ಒಂದು ಯಕ್ಷ ಪ್ರಶ್ನೆಯಾದರಲ್ಲ!?