ಕಂಡು ವಿಸ್ಮಿತನಾದೆ ಜೀವದೊಳಿನ್ನೋರ್ವ ಜೀವವ

ಗರ್ಭದಿ ಬೆಳೆಸಿಹಳು ಧಾರೆಯೆರೆದು ತನ್ನುಸಿರು-ರಕ್ತವ

'ಅಮ್ಮ-ಕಂದಮ್ಮ'ನ ನಾಮವ ಪಡೆದಿದೆ ಬಾಂಧವ್ಯದಿ

ಶಿರಸಾನಮಿತವೀ ಮಹೋನ್ನತ ಸಂಬಂಧವು ಸಕಲಜಗದಿ

ಅರಳಿತಾ ಕಂದಮ್ಮನು ಅಮ್ಮನ ಕರುಳತಾವರೆಯಾಗಿ

ಬೆಳೆಯುತಾ ಸಮೃದ್ಧಿಸಿತಿನ್ನಷ್ಟು ತಾಯ್ತನವ ಸೊಗಸಾಗಿ

ಬೆಚ್ಚನೆಯ ಕವಚವಾಗಿದೆ ಕಂದಮ್ಮನಿಗೆ ಅಮ್ಮನೊಡಲದು

ಅಮ್ಮನಿಗೆ ಅಮೃತಸಿರಿಯು ಕಂದಮ್ಮನ ಮೊದಲಕೂಗದು

© ರಾಘವ ಹರಿವಾಣಂ