ಮನುಜನಲಿ ಮನುಜನಿಗೆ ನಂಬಿಕೆಯು ಮುಖ್ಯ

ಅದರಿಂದಲಾಗುವುದು ಜೀವನವು ಸೌಖ್ಯ

ಕತ್ತಲೆಯ ಕಂಡ ಬದುಕಿಗಿರಬೇಕು

ಬರುವುದು ಬೆಳಕೆಂಬ ಕನಸಿನಲಿ ನಂಬಿಕೆಯು

 

ಮೋಸದಿಂ ಕಪಟದಿಂ ತುಂಬಿದೆ ಲೋಕವು

ಸಜ್ಜನರ ಪಾಲಿಗೆ ನಿಂತಿದೆ ನಂಬಿಕೆಯು

ಸೂರ್ಯಾಸ್ತವಾದೊಡನೆ ಕತ್ತಲಾವರಿಸುವುದು

ಮತ್ತೆ ಸೂರ್ಯೋದಯದ ನಂಬಿಕೆಯು ನಮಗಿಹುದು

 

ಕಳೆದ ಕ್ಷಣವೆಲ್ಲವು ವ್ಯರ್ಥವಾಗಿರಬಹುದು

ಕಳೆವ ಕ್ಷಣ ಸಾರ್ಥಕ್ಯವಾಗಿರಿಸಬೇಕು

ಸೋಲಿನ ಸರದಿಯ ಯೋಚನೆಯೆ ವ್ಯರ್ಥವು

ಗೆಲ್ಲುವೆನು ನಾನೆಂಬ ನಂಬಿಕೆ ಅವಶ್ಯವು

 

ನವಜಾತ ಶಿಶುವಿಂಗೆ, ಕಣ್ದೆರೆದ ಕೂಸಿಂಗೆ

ಕಾಣುವುದು ತಾಯಿಯ ನಗುವಿನಲಿ ನಂಬಿಕೆಯು

ಮತ್ತೊಮ್ಮೆ ಮಗದೊಮ್ಮೆ ಬಿದ್ದೆದ್ದಮೇಲೂ

ಗೆದ್ದೇಳುವೆನೆಂಬ ನಂಬಿಕೆಯು ಮೇಲು

 

ಇನ್ನಾದರೂ ತಿಳಿದರೊಳ್ಳೆಯದು ನಾವು

ಜಯಕಾಣಲು ಬೇಕು ನಂಬಿಕೆಯ ಕಾವು

ಗುರುಕಾಯ್ವನೆಂಬ ನಂಬಿಕೆಯು ಬೇಕು

ಗುರುಕಾಯ್ವನೆಂಬ ನಂಬಿಕೆಯೇ ಸಾಕು