ತನು ತುಂಬಿದಳು, ಮನ ತುಂಬಿದಳು,

ಮನೆ ತುಂಬಿದಳು ಮಡದಿ

ತನ್ನುಸಿರ ಅಂತ್ಯದೊರೆಗಿನ ಪಥದಿ

ನನ್ನೆರಳ ಜೊತೆಯಾಗಿ ನನ್ನ ಮಡದಿ...

ನನ್ನ ಮನದಿ

ಅಂಜಿಕೆಯ ಪರದೆಯ ಜೊತೆಗುಟ್ಟ ಸೀರೆಯಲೆ

ಮನೆ ತುಂಬಿದಳು...

ದುಗುಡಕ್ಕೊಂದರ್ಥವಿತ್ತು, ಮೌನ ಜೊತೆಯಾಗಿತ್ತು...

ತನ್ನೂರ, ತನ್ನವರ, ತನ್ನತನಗಳ ತೊರೆದು

ಪರಊರ, ಪರಜನರ ನಡುವಲೊಂದಾಗಿ

ಪರರನ್ನೆ ಚಿರವೆಂದು ಪರಿಗಣಿಸಿ, ಪರಿಚಯಿಸಿ

ಮಾಸ ಕಳೆಯಲು, ಅಂಜಿಕೆಯದು ಇನ್ನೆಲ್ಲಿ?!

ಪರದೆ ಕಳಚಿತ್ತು, ಬರೀ ಸೀರೆಯುಳಿದಿತ್ತು

ಅಲ್ಲೊಂದು, ಇಲ್ಲೊಂದು, ಮತ್ತೊಂದು, ಮಗದೊಂದು

ತಪ್ಪು, ಒಪ್ಪುಗಳ ಮಧ್ಯೆ ಸಾಗತೊಡಗಿತು ಪಯಣ

ಇಚ್ಛೆ, ಸ್ವೇಚ್ಛೆಗಳಲ್ಲಿ, ಮುನಿಸು, ಸೊಗಸು ಜೊತೆಯಾಗಿ

ಸಂಸಾರ ಸೊಗಸಾಗಿತ್ತು, ಕನಸು ಹೆಚ್ಚಿತ್ತು

ನಡು ನಡುವೆ ಕನಸಾಗಿ, ಮನೆಯವರಾಸೆಗೆ ಬಲಿಯಾಗಿ

ಪುಟಕ್ಕಿಟ್ಟ ಅಪರಂಜಿ, ಕೊರೆದಿಟ್ಟ ಬಿಳಿರತ್ನ (ವಜ್ರ)

ಚಂದನದ ಕಿರುಗೊಂಬೆ, ಜನ್ಮ ತಾಳಿತು ಪುಟ್ಟ ಕಂದಮ್ಮ

ಮನೆಯಲ್ಲಿ ಕಂಪಿತ್ತು, ಮನ ತಂಪಾಗಿತ್ತು