ಬದುಕು ಭಾವದ ಬಂಧ ಕಳಚುತ

ದೂರ ತೀರವ ಸೇರು ನೀ

ಕಂಡ ಕನಸಿನ ಬೆನ್ನು ಹತ್ತಿ

ಸುಕೃತ ಫಲವನು ಕಾಣು ನೀ

 

ಅಂಧಕಾರದ ಹಾದಿ ತುಂಬಿದೆ

ಜ್ಞಾನ ಕರ್ಣದ ಬೆಳಕಲಿ

ಪರಮ ಸುಜ್ಞಾನ ಫಲಿಸಿದೆ

ಎದೆಯ ಮಿಡಿತದ ನುಡಿಯಲಿ

 

ಆತ್ಮವೆಲ್ಲಿದೆ ಜೀವವೆಲ್ಲಿದೆ

ಆತ್ಮಜ್ಯೋತಿಯ ಅರಸಿದೆ

ಹೆಜ್ಜೆ ಹೆಜ್ಜೆಯ ಏರುತಗ್ಗಲಿ

ಆತ್ಮದುನ್ನತಿ ಲಭಿಸಿದೆ

 

ಗಂಧ ತೇಯುತ ಘಮವು ತುಂಬಿದೆ

ಫಲಿತ ಕದಲಿಗೆ ಸವಿಯಿದೆ

ತೇಲಿ ಸಾಗುವ ಹಾಯಿ ದೋಣಿಯ

ಬಲಕೆ ಜೀವನ ತೆರೆದಿದೆ

- ಜನಾರ್ದನ ದುರ್ಗ