ಕಳೆದ ದಿನ ಕೆಲವು ವಾರ್ತಾ ಪತ್ರಿಕೆಗಳಲ್ಲಿ ಮೀನು ಮಾರಿ ಕೋಟ್ಯಾಂತರ ರೂಪಾಯಿ ಗಳಿಸಿದ ಮೀನುಗಾರ ಎಂಬ ಲೇಖನ ನೋಡಿ ದಂಗಾದೆ. ಅವನು ಮಾರಿದ್ದು ಕೇವಲ ೧೫೭ ಮೀನುಗಳನ್ನು ಮಾತ್ರ. ಅದೂ ಶಾರ್ಕ್ ಗಳಂತೆ ಬಹಳ ದೊಡ್ದ ಗಾತ್ರದ ಮೀನುಗಳನ್ನಲ್ಲ. ಆದರೆ ಆ ಮೀನಿನ ಬೆಲೆ ಮಾತ್ರ ಬಹಳ ದೊಡ್ಡದಾಗಿತ್ತು. ಮಹಾರಾಷ್ಟ್ರ ರಾಜ್ಯದ ಪಾಲ್ಘರ್ ಜಿಲ್ಲೆಯ ಚಂದ್ರಕಾಂತ ತಾರೆ ಎಂಬ ಮೀನುಗಾರ ಬಹುಷಃ ಆ ದಿನ ಮೀನು ಹಿಡಿಯಲು ಹೋದಾಗ ನರಿಯ ಮುಖವನ್ನೇ ನೋಡಿದ್ದ ಎಂದು ಅನಿಸುತ್ತದೆ. ಆ ದಿನ ಅವನ ಪಾಲಿನ ಅದೃಷ್ಟದ ದಿನವಾಗಿತ್ತು.
ಮಳೆಗಾಲದ ಸಮಯದಲ್ಲಿ ಮೀನುಗಾರಿಕೆಗೆ ನಿರ್ಭಂಧವಿರುತ್ತದೆ. ಕಳೆದ ವಾರವಷ್ಟೇ ಮಹಾರಾಷ್ಟ್ರದಲ್ಲಿ ಮೀನುಗಾರಿಕೆಗೆ ಇದ್ದ ನಿರ್ಭಂಧವನ್ನು ತೆರವುಗೊಳಿಸಲಾಗಿತ್ತು. ಅಂದು ಮೀನಿನ ಬೇಟೆಗೆ ತೆರಳಿದ ಚಂದ್ರಕಾಂತ ಹಾಗೂ ಅವನ ತಂಡದವರ ಬಲೆಗೆ ಸಿಕ್ಕಿದ್ದು ಈ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ‘ಘೋಲ್' ಎಂಬ ತಳಿಯ ಮೀನು. ಮಾರುಕಟ್ಟೆಯಲ್ಲಿ 'ಸಿ ಗೋಲ್ಡ್' (Sea Gold) ಅಥವಾ ಸಮುದ್ರದ ಚಿನ್ನ ಎಂದು ಕರೆಯಲಾಗುವ ಈ ಮೀನು ಅವರಿಗೆ ಬರೋಬ್ಬರಿ ೧.೩೩ ಕೋಟಿ ರೂಪಾಯಿಗಳನ್ನು ಒದಗಿಸಿಕೊಟ್ಟಿದೆ. ಇವರ ಬಲೆಗೆ ಬಿದ್ದ ಎಲ್ಲಾ ೧೫೭ ಮೀನುಗಳನ್ನು ಉತ್ತರ ಪ್ರದೇಶ ಹಾಗೂ ಬಿಹಾರದ ವ್ಯಾಪಾರಿಗಳು ಖರೀದಿಸಿದ್ದಾರೆ.
ಇವರಿಗೆ ಸಿಕ್ಕಿದ ಒಂದೊಂದು ಮೀನು ಸರಾಸರಿ ೩೦ ಕೆಜಿ ಇತ್ತಂತೆ. ಈ ಮೀನುಗಳಲ್ಲಿ ಗಂಡು ಮೀನಿಗೆ ಅಧಿಕ ಕ್ರಯ ದೊರೆಯುತ್ತದೆ. ೩೦ ಕೆಜಿ ಇರುವ ಗಂಡು ಮೀನಿಗೆ ೪-೫ ಲಕ್ಷ ಹಾಗೂ ಹೆಣ್ಣು ಮೀನಿಗೆ ೧-೨ ಲಕ್ಷ ಮಾರುಕಟ್ಟೆ ಬೆಲೆ ಇದೆ. ಈ ಹಿಂದೆ ಒರಿಸ್ಸಾದಲ್ಲೂ ಘೋಲ್ ಜಾತಿಯ ಮೀನುಗಳು ಸಿಕ್ಕಿದ್ದವಂತೆ. ೨೦೧೯ರಲ್ಲಿ ಸಿಕ್ಕಿದ ೧೦ ಕೆಜಿ ಮೀನನ್ನು ಕೆಜಿಗೆ ೧೦,೦೦೦ ರೂಪಾಯಿಯಂತೆ ಮಾರಿದ ಸುದ್ದಿ ಇದೆ.
ಹೀಗೆ ದಿನಬೆಳಗಾಗುವುದರಲ್ಲಿ ಕೋಟ್ಯಾಧಿಪತಿಯಾದ ಚಂದ್ರಕಾಂತ ತಾರೆಯವರ ಬಲೆಗೆ ಬಿದ್ದ ಈ ಮೀನಿನ ಅಸಲಿ ಸಂಗತಿಯಾದರೂ ಏನು? ಏಕೆ ಈ ಮೀನಿಗೆ ಇಷ್ಟು ಬೆಲೆ? ಈ ಮೀನು ವೈದ್ಯಕೀಯ ಹಾಗೂ ಔಷಧ ತಯಾರಿಕೆಗೆ ಅತೀ ಅಗತ್ಯವಾಗಿದೆಯಂತೆ. ಇವುಗಳಿಗೆ ವಿದೇಶಗಳಲ್ಲಿ ಬಹಳ ಬೆಲೆ ಇದೆ. ಹಾಂಕಾಂಗ್, ಮಲೇಷ್ಯಾ, ಸಿಂಗಾಪುರ, ಥಾಯಿಲ್ಯಾಂಡ್ ಹಾಗೂ ಜಪಾನ್ ದೇಶಗಳಲ್ಲಿ ಬಹಳ ಬೇಡಿಕೆ ಇದೆ. ಸಮುದ್ರ ಮಾಲಿನ್ಯದ ಕಾರಣದಿಂದ ಈ ಮೀನಿನ ಲಭ್ಯತೆಯ ಪ್ರಮಾಣ ಸಮುದ್ರದಲ್ಲಿ ಕಮ್ಮಿಯಾಗಿದೆ.
ಘೋಲ್ ಮೀನಿನ ವೈಜ್ಞಾನಿಕ ಹೆಸರು ‘ಪ್ರೊಟೋನಿಬಿಯ ದಯಾಕ್ಯಾಂತಸ್’ (Protonibea Diacanthus). ಈ ಮೀನಿನ ಚರ್ಮದಿಂದ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಸ್ವಯಂ ಕರಗಿ ಹೋಗುವ ಸಾಧನವನ್ನು ತಯಾರಿಸುತ್ತಾರೆ. ಈ ಮೀನನ್ನು ಸಾಮಾನ್ಯವಾಗಿ ‘ಬ್ಲಾಕ್ ಸ್ಪೋಟೆಡ್ ಕ್ರೋಕರ್’ (Black Spotted Croaker) ಎಂಬ ಹೆಸರಿನಿಂದ ಕರೆಯುತ್ತಾರೆ. ಆಸ್ಟ್ರೇಲಿಯಾದಲ್ಲಿ ಇದನ್ನು ‘ಕಪ್ಪು ಬಂಗಾರದ ಮೀನು' (Black Jewfish) ಎಂದು ಕರೆಯುತ್ತಾರೆ. ಇದರ ಹೃದಯವನ್ನು ‘ಸಮುದ್ರದ ಸ್ವರ್ಣ' ಎಂದು ಕರೆಯುತ್ತಾರೆ. ಇದನ್ನು ವೈದ್ಯಕೀಯ ಸಾಮಾಗ್ರಿಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಹಲವಾರು ಔಷಧಿಗಳ ತಯಾರಿಕೆಯಲ್ಲಿ ಇದರ ಬಳಕೆ ಇದೆ.
ಚಿತ್ರದಲ್ಲಿ: ಮಹಾರಾಷ್ಟ್ರದಲ್ಲಿ ಸಿಕ್ಕಿದ ಮೀನುಗಳು
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!