ಕಾಲ ಸರಿದಂತೆ ಮಾನವನ ಬೇಡಿಕೆ ಮತ್ತು ಆಸೆ ಅಧಿಕವಾಗುತ್ತಾ ಹೋಗುತ್ತಿದೆ. ದಶಕಗಳ ಹಿಂದೆ ಅಡಿಗೆ ಮನೆಯಲ್ಲಿ ಕಾಣ ಸಿಗುತ್ತಿದ್ದ ಪಿಂಗಾಣಿಯ ಭರಣಿಗಳು, ಗಾಜಿನ ಜಾಡಿಗಳು, ಸ್ಟೀಲ್ ಡಬ್ಬಿಗಳು ಎಲ್ಲವೂ ಈಗ ಪ್ಲಾಸ್ಟಿಕ್ ಆಗಿ ಪರಿವರ್ತನೆಯಾಗಿವೆ. ಪ್ರತೀ ಮನೆಯೂ ಪ್ಲಾಸ್ಟಿಕ್ ಎಂಬ ಪೆಡಂಭೂತದ ವಶವಾಗಿದೆ. ನಾವು ಮಾರುಕಟ್ಟೆಯಿಂದ ಸಾಮಾಗ್ರಿಗಳನ್ನು ತರಲು ಬಳಸುವ ಪ್ಲಾಸ್ಟಿಕ್ ಕೈಚೀಲದಿಂದ ಹಿಡಿದು ಸಾಮಾನು ಸಂಗ್ರಹಿಸಿ ಇಡುವ ಜಾಡಿಗಳೂ ಪ್ಲಾಸ್ಟಿಕ್ ಆಗಿವೆ. ಟೂತ್ ಬ್ರಷ್ ಗಳು, ಪೇಸ್ಟ್ ನ ಟ್ಯೂಬ್, ಬಕೆಟ್, ಮಗ್, ನೀರಿನ ಬಾಟಲಿ, ತಿನ್ನುವ ತಿಂಡಿಯ ಪ್ಯಾಕೇಟ್, ಕೂತುಕೊಳ್ಳುವ ಕುರ್ಚಿ, ಊಟಕ್ಕೆ ಬಳಸುವ ಟೇಬಲ್ ಎಲ್ಲವೂ ಪ್ಲಾಸ್ಟಿಕ್ ಪ್ಲಾಸ್ಟಿಕ್ ಮತ್ತು ಪ್ಲಾಸ್ಟಿಕ್.
ಪ್ಲಾಸ್ಟಿಕ್ ನಿಂದ ತಯಾರಾಗುವ ಶೇಕಡಾ ೯೯ ವಸ್ತುಗಳು ಮಣ್ಣಿನಲ್ಲಿ ಬೇಗನೇ ಕರಗುವುದಿಲ್ಲ. ನೀವು ಮೊತ್ತ ಮೊದಲು ಬಳಸಿದ ಪ್ಲಾಸ್ಟಿಕ್ ಟೂತ್ ಬ್ರಷ್ ಇನ್ನೂ ಕರಗದೇ ಭೂಮಿಯ ಯಾವುದೋ ಮೂಲೆಯಲ್ಲಿರಬಹುದು. ಹೀಗೆ ಭೂಮಿಯ ಮೇಲಿನ ತ್ಯಾಜ್ಯ ವಸ್ತುಗಳು ಹೆಚ್ಚುತ್ತಲೇ ಇವೆ. ಗಾಜಿನ ಜಾಡಿಗಳ ಬಳಕೆ ಉತ್ತಮ ಎನ್ನುತ್ತಾರೆ. ಆದರೆ ಗಾಜಿನ ವಸ್ತುಗಳನ್ನು ಒಡೆಯದೇ ಬಳಸುವುದೇ ಒಂದು ಸವಾಲಿನ ಕೆಲಸ ಎನ್ನುತ್ತಾರೆ ಎಲ್ಲರೂ. ಮೊದಲಾದರೆ ಕುಡಿಯುವ ನೀರಿಗೆ, ದಿನ ಬಳಕೆಯ ಸಾಮಾಗ್ರಿಗಳನ್ನು ಸಂಗ್ರಹಿಸಲು ಗಾಜಿನ ವಸ್ತುಗಳನ್ನೇ ಬಳಸುತ್ತಿದ್ದೆವು. ಈಗ ಅವೆಲ್ಲಾ ಪ್ಲಾಸ್ಟಿಕ್ ಗೆ ಬದಲಾಗಿದೆ. ಗಾಜು ಹಾಗೂ ಪ್ಲಾಸ್ಟಿಕ್ ಇವುಗಳಲ್ಲಿ ಉತ್ತಮ ಯಾವುದು ಎಂಬುವುದನ್ನು ತಿಳಿದುಕೊಳ್ಳೋಣವೇ?
ಕಚ್ಚಾ ವಸ್ತುಗಳು: ಗಾಜಿನ ತಯಾರಿಕೆಯಲ್ಲಿ ಬಳಕೆಯಾಗುವ ಕಚ್ಚಾ ವಸ್ತುಗಳೆಂದರೆ ಮರಳು, ಸೋಡಾ ಆಶ್, ಲೈಮ್ ಸ್ಟೋನ್. ಇವೆಲ್ಲವೂ ನೈಸರ್ಗಿಕವಾಗಿ ದೊರಕುವ ಪರಿಸರಕ್ಕೆ ಹಾನಿ ಮಾಡದ ಸಾಮಾಗ್ರಿಗಳು. ಅದೇ ಪ್ಲಾಸ್ಟಿಕ್ ತಯಾರಿಕೆಗೆ ಬಳಕೆಯಾಗುವ ಕಚ್ಚಾ ತೈಲ, ಕೆಲವು ಅನಿಲಗಳು, ಪೆಟ್ರೋಲಿಯಂ ಉತ್ಪನ್ನಗಳು ಇವೆಲ್ಲಾ ಪರಿಸರಕ್ಕೆ ಹಾನಿ ಮಾಡುವ ವಸ್ತುಗಳು. ಇವುಗಳಿಂದ ತಯಾರಾಗುವ ಪ್ಲಾಸ್ಟಿಕ್ ನಿಂದ ನಮ್ಮ ಆರೋಗ್ಯಕ್ಕೂ ಹಾನಿ. ಈ ಕಚ್ಚಾ ವಸ್ತುಗಳ ಕಾರಣದಿಂದ ಗಾಜಿನ ಸಾಮಾನುಗಳು ಉತ್ತಮ ಎಂದು ಹೇಳ ಬಹುದು.
ಪುನರ್ಬಳಕೆ: ಗಾಜನ್ನು ೧೦೦ ಶೇಕಡಾ ಮರುಬಳಕೆ ಮಾಡಬಹುದು. ಗಾಜಿನ ತ್ಯಾಜ್ಯಗಳನ್ನು ಸಂಸ್ಕರಿಸಿ ಮತ್ತೆ ಗಾಜಿನ ವಸ್ತುಗಳನ್ನು ತಯಾರಿಸಬಹುದು. ಅದೂ ಯಾವುದೇ ಗುಣಮಟ್ಟದ ಕೊರತೆ ಇಲ್ಲದೇ. ಅದೇ ಪ್ಲಾಸ್ಟಿಕ್ ವಸ್ತುಗಳನ್ನು ಮರು ಬಳಕೆ ಮಾಡುವುದರಿಂದ ನಿಮಗೆ ಕಡಿಮೆ ಗುಣಮಟ್ಟದ ವಸ್ತುಗಳು ದೊರೆಯುತ್ತವೆ. ಈ ಕಾರಣದಿಂದ ಪುನರ್ಬಳಕೆಯ ದೃಷ್ಟಿಯಿಂದ ಗಾಜಿನ ವಸ್ತುಗಳು ಉತ್ತಮ.
ಕಡಿಮೆ ವೆಚ್ಚ: ಗಾಜಿನ ವಸ್ತುಗಳನ್ನು ತಯಾರಿಸಲು ತುಂಬಾ ಖರ್ಚು ತಗಲುತ್ತದೆ. ದ್ರವರೂಪದಲ್ಲಿರುವ ಗಾಜಿಗೆ ಯಾವುದಾದರೂ ಆಕಾರ ನೀಡುವ ಪ್ರಕ್ರಿಯೆಗೆ ಅಧಿಕ ಸಮಯ ಹಾಗೂ ವೆಚ್ಚ ತಗಲುತ್ತದೆ. ಅಧಿಕ ಶಾಖದ ಅಗತ್ಯವಿರುವುದರಿಂದ ತಯಾರಿಕಾ ವೆಚ್ಚವೂ ಹೆಚ್ಚಾಗುತ್ತದೆ. ಆದರೆ ಪ್ಲಾಸ್ಟಿಕ್ ವಸ್ತುಗಳನ್ನು ತಯಾರಿಸುವುದು ಹಾಗೂ ಅವುಗಳಿಗೆ ಬೇಕಾದ ಆಕಾರ ನೀಡುವುದು ಸುಲಭದ ಕೆಲಸ. ಈ ತಯಾರಿಕಾ ವೆಚ್ಚವನ್ನು ಗಮನದಲ್ಲಿಸಿಕೊಂಡಾಗ ಪ್ಲಾಸ್ಟಿಕ್ ಗಾಜಿಗಿಂತ ಅಗ್ಗ ಎಂದೇ ಹೇಳಬೇಕಾಗುತ್ತದೆ.
ಆರೋಗ್ಯದ ಮೇಲೆ ಪರಿಣಾಮ: ನಿಮಗೆಲ್ಲರಿಗೂ ತಿಳಿದಿರುವಂತೆ ಗಾಜಿನ ಜಾಡಿಯಲ್ಲಿರಿಸಿದ ಆಹಾರ ವಸ್ತುಗಳು ಬೇಗನೇ ಹಾಳಾಗುವುದಿಲ್ಲ ಹಾಗೂ ಅವುಗಳು ನಮ್ಮ ಆರೋಗ್ಯವನ್ನೂ ಕೆಡಿಸುವುದಿಲ್ಲ. ಕೆಲವು ಪದಾರ್ಥಗಳು ಕಾಲ ಕ್ರಮೇಣ ಪ್ಲಾಸ್ಟಿಕ್ ಬಾಟಲಿಗಳನ್ನು ಕರಗಿಸುತ್ತದೆ. ಇದರಿಂದಾಗಿ ನಾವು ತಿನ್ನುವ ಆಹಾರದ ಜೊತೆ ಪ್ಲಾಸ್ಟಿಕ್ ಅಂಶ ಬೆರೆಯುವ ಸಾಧ್ಯತೆ ಇದೆ. ಈ ಕಾರಣದಿಂದಲೇ ಜೇನು ತುಪ್ಪ, ತುಪ್ಪ, ಉಪ್ಪಿನ ಕಾಯಿಗಳನ್ನು ಗಾಜಿನ ಬಾಟಲಿಯಲ್ಲಿ ಹಾಕಿಡಲು ಶಿಫಾರಸು ಮಾಡುತ್ತಾರೆ.
ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ಪ್ಲಾಸ್ಟಿಕ್ ಡಬ್ಬಗಳು ಆಹಾರ ಉತ್ಪನ್ನಗಳ ಸಂಗ್ರಹಕ್ಕೆ ಯೋಗ್ಯವಾಗಿರುವುದಿಲ್ಲ. ಆದುದರಿಂದ ಈ ಡಬ್ಬಗಳಲ್ಲಿ ಸಂಗ್ರಹಿಸಿದ ವಸ್ತುಗಳಿಗೆ ಪ್ಲಾಸ್ಟಿಕ್ ನ ಅಂಶ ನಿಧಾನವಾಗಿ ಸೇರ ಬಹುದು. ಆದರೆ ಗಾಜು ಯಾವತ್ತೂ ಈ ರೀತಿಯಾಗಿ ವರ್ತಿಸುವುದಿಲ್ಲ. ಬಹುಬೇಗನೇ ಕರಗುವುದೂ ಇಲ್ಲ. ಆಹಾರ ವಸ್ತುಗಳ ಗುಣಮಟ್ಟವನ್ನು ಕಾಪಾಡುತ್ತವೆ. ಆರೋಗ್ಯದ ದೃಷ್ಟಿಯಿಂದ ಗಾಜಿನ ವಸ್ತುಗಳು ಪ್ಲಾಸ್ಟಿಕ್ ವಸ್ತುಗಳಿಗಿಂತ ಉತ್ತಮ.
ಗುಣಮಟ್ಟ ಹಾಗೂ ಬಾಳ್ವಿಕೆ : ಗುಣ ಮಟ್ಟದ ದೃಷ್ಟಿಯಿಂದ ಗಾಜು ಉತ್ತಮವಾದರೂ ಕೆಳಗೆ ಬಿದ್ದರೆ ಒಡೆದು ಹೋಗುತ್ತದೆ. ಇದನ್ನು ನಿರ್ವಹಣೆ ಮಾಡುವುದು ತ್ರಾಸದಾಯಕ. ಈ ಕಾರಣದಿಂದಲೇ ಇಂದು ಗಾಜಿನ ಸಾಮಾಗ್ರಿ ಬಳಕೆಯಾಗುವಲ್ಲೆಲ್ಲಾ
ಪ್ಲಾಸ್ಟಿಕ್ ಹೊಕ್ಕಿದೆ. ಪ್ಲಾಸ್ಟಿಕ್ ವಸ್ತುಗಳು ಕೆಳಗೆ ಬಿದ್ದರೆ ಒಡೆದು ಹೋಗುವುದಿಲ್ಲ. ಗಾಜಿನ ಚೂರುಗಳನ್ನು ಸ್ವಚ್ಛಗೊಳಿಸುವುದೇ ಬಹಳ ತ್ರಾಸದಾಯಕ ವಿಷಯ. ಈ ಸುರಕ್ಷತೆಯ ದೃಷ್ಟಿಯಲ್ಲಿ ನೋಡುವುದಾದರೆ ಪ್ಲಾಸ್ಟಿಕ್ ಗಾಜಿಗಿಂತಲೂ ಉತ್ತಮ ಎನ್ನಬಹುದು.
ಪರಿಸರ ಸ್ನೇಹಿ: ಗಾಜಿನ ವಸ್ತುಗಳನ್ನು ಎಷ್ಟು ಸಲ ಬೇಕಾದರೂ, ಎಷ್ಟು ಸಮಯದ ತನಕ ಬೇಕಾದರೂ ಬಳಸ ಬಹುದು. ಬಿದ್ದು ಒಡೆದು ಹೋಗದಂತೆ ಜಾಗ್ರತೆ ವಹಿಸಿದರಾಯಿತು. ಒಡೆದು ಚೂರಾದರೂ ಆ ತುಂಡುಗಳನ್ನು ಮತ್ತೆ ಮರು ಬಳಕೆ ಮಾಡಿ ಅದೇ ರೀತಿಯ ವಸ್ತುಗಳನ್ನು ತಯಾರಿಸಬಹುದು. ವೆಚ್ಚ ಸ್ವಲ್ಪ ಅಧಿಕವಾದರೂ ಪರಿಸರಕ್ಕೆ ಯಾವುದೇ ಹಾನಿಯಿಲ್ಲ. ಆದರೆ ಪ್ಲಾಸ್ಟಿಕ್ ಹಾಗಲ್ಲ. ನಿರಂತರವಾಗಿ ಪ್ಲಾಸ್ಟಿಕ್ ಬಳಕೆಯಿಂದ ನಮ್ಮ ಆರೋಗ್ಯ ಹಾಳಾಗುವುದರ ಜೊತೆಗೆ ಪರಿಸರದಲ್ಲೂ ಆ ತ್ಯಾಜ್ಯಗಳು ಅಧಿಕವಾಗುತ್ತವೆ. ಇವುಗಳು ಮಣ್ಣಿನಲ್ಲಿ ಕರಗುವುದಿಲ್ಲ. ಇವುಗಳನ್ನು ಒಂದು ಹಂತದವರೆಗೆ ಮರು ಬಳಕೆ ಮಾಡಬಹುದಾದರೂ ಅದರಿಂದ ತಯಾರಾಗುವ ವಸ್ತುಗಳ ಗುಣಮಟ್ಟ ಅಷ್ಟೇನೂ ಚೆನ್ನಾಗಿರುವುದಿಲ್ಲ. ಪರಿಸರದ ದೃಷ್ಟಿಯಿಂದ ಗಾಜು, ಪ್ಲಾಸ್ಟಿಕ್ ಗಿಂತ ಉತ್ತಮ.
ಮೇಲಿನ ಎಲ್ಲಾ ಕಾರಣಗಳಿಂದ ಗಾಜು ಪ್ಲಾಸ್ಟಿಕ್ ವಸ್ತುಗಳಿಗಿಂತ ಉತ್ತಮ ಆಯ್ಕೆ ಎನ್ನಬಹುದು. ಆದುದರಿಂದ ಭವಿಷ್ಯದಲ್ಲಿ ನೀವು ಮನೆ ಬಳಕೆಯ ಸಾಮಾಗ್ರಿಗಳನ್ನು ಖರೀದಿಸುವಾಗ ಗಾಜಿನ ಬಾಟಲಿಯಲ್ಲಿರುವ ವಸ್ತುಗಳನ್ನೇ ಆಯ್ಕೆ ಮಾಡಿ. ಖಾಲಿಯಾದ ಬಳಿಕ ಅವುಗಳನ್ನು ಬಿಸಾಕದೇ ಇತರೆ ವಸ್ತುಗಳನ್ನು ತುಂಬಿಡಲು ಬಳಸಿ. ಅಗತ್ಯವೇ ಬೀಳದ ಗಾಜಿನ ಸಾಮಾಗ್ರಿಗಳನ್ನು, ಚೂರಾದ ಗಾಜಿನ ವಸ್ತುಗಳನ್ನು ಹಳೇ ಸಾಮಾಗ್ರಿಗಳ ವ್ಯಾಪಾರಿಗೆ ನೀಡಿ. ಇದರಿಂದ ಗಾಜು ಮರುಬಳಕೆಯಾಗುತ್ತದೆ. ಗಾಜಿನ ಚೂರುಗಳನ್ನು ಆಹಾರ ತ್ಯಾಜ್ಯದೊಡನೆ ಬೆರೆಸಬೇಡಿ. ಏಕೆಂದರೆ ಈ ಆಹಾರ ವಸ್ತುಗಳನ್ನು ತಿನ್ನುವ ನಾಯಿ, ಬೆಕ್ಕು, ಹಂದಿ ಮುಂತಾದ ಪ್ರಾಣಿಗಳು ಅಥವಾ ಪಕ್ಷಿಗಳು ಅನಾರೋಗ್ಯಕ್ಕೀಡಾಗಬಹುದು. ಪರಿಸರದ ದೃಷ್ಟಿಯಿಂದ ಹಾಗೂ ನಮ್ಮ ವೈಯಕ್ತಿಕ ಆರೋಗ್ಯದ ಬಗೆಗಿನ ಕಾಳಜಿಯಿಂದ ನಾವು ಪ್ಲಾಸ್ಟಿಕ್ ಬಳಕೆಯನ್ನು ಕಮ್ಮಿ ಮಾಡೋಣ, ಗಾಜಿನ ವಸ್ತುಗಳನ್ನು ಎಲ್ಲೆಲ್ಲಿ ಬಳಸಲು ಸಾಧ್ಯವಿದೆಯೋ ಅಲ್ಲಲ್ಲಿ ಬಳಕೆ ಮಾಡೋಣ…
(ಮಾಹಿತಿ: ಅಂತರ್ಜಾಲದಲ್ಲಿ ಸಿಕ್ಕ ಒಂದು ವಿಡಿಯೋದ ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!