ಒಬ್ಬ ಪರ್ಷಿಯನ್ ರಾಜನ ಬಳಿ ಜಗತ್ತಿನಲ್ಲೇ ಅತ್ಯಂತ ಬೆಲೆಬಾಳುವ ಮುತ್ತು ಇತ್ತು. ಒಂದು ದಿನ ಅದನ್ನು ತನ್ನೆದುರು ಇಟ್ಟು, ರಾಜ ತನ್ನ ಮೂವರು ಮಗಂದಿರನ್ನು ಕರೆದ.
ಆಗ ರಾಜ ಹೇಳಿದ, “ಇಲ್ಲಿದೆ ನೋಡಿ, ಜಗತ್ತಿನಲ್ಲೆ ಅತ್ಯಂತ ಶ್ರೇಷ್ಠ ಮುತ್ತು. ಇದನ್ನು ನಾನು ಉಡುಗೊರೆಯಾಗಿ ಕೊಡ್ತೇನೆ. ಆದರೆ, ನೀವು ಮೂವರು ಇದ್ದೀರಿ; ಮುತ್ತು ಒಂದೇ ಇದೆ. ಹಾಗಾಗಿ ನಿಮ್ಮಲ್ಲಿ ಅತ್ಯಂತ ಯೋಗ್ಯನಿಗೆ ಇದನ್ನು ಕೊಡ್ತೇನೆ. ಅದಕ್ಕಾಗಿ ನಿಮಗೊಂದು ಪರೀಕ್ಷೆ ಮಾಡಲಿಕ್ಕಿದೆ. ನೀವು ಒಂದು ವರುಷ ಹೊರ ಜಗತ್ತಿನಲ್ಲಿ ಪ್ರತ್ಯೇಕವಾಗಿ ಸುತ್ತಾಡಿ. ಎಲ್ಲಿಗೆ ಬೇಕಾದರೂ ಹೋಗಿ; ಏನು ಬೇಕಾದರೂ ಮಾಡಿ. ಅನಂತರ ವಾಪಾಸು ಬಂದು, ನೀವು ಮಾಡಿದ ಅತ್ಯಂತ ಉದಾತ್ತ ಕೆಲಸ ಯಾವುದೆಂದು ನನಗೆ ಹೇಳಿ. ನಿಮ್ಮ ಕೆಲಸದ ಆಧಾರದಿಂದ ಯಾರಿಗೆ ಈ ಮುತ್ತು ಕೊಡಬೇಕೆಂದು ನಿರ್ಧರಿಸುತ್ತೇನೆ.”
ರಾಜನ ಅರಮನೆಯಿಂದ ಹೊರಟ ಮೂವರೂ ಬೇರೆಬೇರೆ ದಿಕ್ಕಿನಲ್ಲಿ ಸಾಗಿದರು. ಒಂದು ವರುಷವಾಗುತ್ತಲೇ ಅರಮನೆಗೆ ವಾಪಾಸು ಬಂದರು. ಅವರನ್ನು ಸ್ವಾಗತಿಸಿದ ರಾಜ, ಮೊದಲನೆಯ ಮಗನಿಗೆ ತನ್ನ ಉದಾತ್ತ ಕೆಲಸವನ್ನು ತಿಳಿಸಲು ಹೇಳಿದ. ಆತ ಹೀಗೆಂದ: “ಅಪ್ಪಾ, ನಾನು ಬಹಳ ದೂರ ಸುತ್ತಾಡಿದೆ. ಒಂದು ದಿನ ಶ್ರೀಮಂತ ವರ್ತಕನೊಬ್ಬನನ್ನು ಭೇಟಿಯಾದೆ. ಅವನು ನನ್ನನ್ನು ಕೆಲಸಕ್ಕಾಗಿ ನೇಮಿಸಿಕೊಂಡ. ಒಮ್ಮೆ ಬಹಳ ಬೆಲೆಬಾಳುವ ಆಭರಣಗಳನ್ನು ನನಗೆ ಕೊಟ್ಟು, ಅವನ್ನು ಪಕ್ಕದ ಊರಿನ ತನ್ನ ತಮ್ಮನಿಗೆ ತಲಪಿಸಬೇಕೆಂದ.
ಅವನು ಒಂದು ದೊಡ್ಡ ಪೆಟ್ಟಿಗೆಯಿಂದ ಆಭರಣಗಳನ್ನು ತೆಗೆದು, ಒಂದು ಚೀಲಕ್ಕೆ ಹಾಕಿದ. ಅವನ್ನೆಲ್ಲ ಅವನು ಲೆಕ್ಕ ಮಾಡಲೂ ಇಲ್ಲ. ನಾನು ಒಂದೆರಡು ಆಭರಣಗಳನ್ನು ಸುಲಭವಾಗಿ ಅದರಿಂದ ನನಗಾಗಿ ತೆಗೆದುಕೊಳ್ಳ ಬಹುದಾಗಿತ್ತು. ಯಾರಿಗೂ ಗೊತ್ತಾಗುತ್ತಿರಲಿಲ್ಲ. ಆದರೆ ನಾನು ಎಲ್ಲ ಆಭರಣಗಳನ್ನೂ ವರ್ತಕನ ತಮ್ಮನಿಗೆ ನಿಯತ್ತಿನಿಂದ ಒಯ್ದು ಕೊಟ್ಟೆ. ಅವನು ನನಗೆ ಕೆಲವು ಚಿನ್ನದ ನಾಣ್ಯಗಳನ್ನು ಕೊಟ್ಟ.”
ಇದನ್ನು ಕೇಳಿದ ರಾಜ ಹೇಳಿದ, “ಇದರಿಂದ ನೀನು ಪ್ರಾಮಾಣಿಕ ಎಂದು ಸಾಬೀತಾಗುತ್ತದೆ. ಆದರೆ, ಸರಿಯಾಗಿ ಯೋಚಿಸಿದರೆ ನೀನು ಬೇರೇನು ಮಾಡಿದ್ದರೂ ನಿನ್ನ ಗೌರವ ಕಳೆದುಕೊಳ್ಳುತ್ತಿದ್ದೆ. ಒಂದು ಆಭರಣವನ್ನು ನೀನು ತೆಗೆದುಕೊಂಡಿದ್ದರೂ ನೀನು ಕಳ್ಳನಾಗುತ್ತಿದ್ದೆ. ಯಾರೇ ಪ್ರಾಮಾಣಿಕ ಮನುಷ್ಯ ಆಭರಣಗಳ ಚೀಲವನ್ನು ವರ್ತಕನ ತಮ್ಮನಿಗೆ ನಿನ್ನಂತೆಯೇ ಒಯ್ದು ಕೊಡುತ್ತಿದ್ದ.”
ನಂತರ ಎರಡನೆಯ ಮಗ ಹೀಗೆಂದ: “ನಾನೂ ಬಹಳ ದೂರ ಪ್ರಯಾಣಿಸಿದೆ. ಒಮ್ಮೆ ಒಂದು ಸರೋವರದ ಪಕ್ಕದಲ್ಲಿ ನಡೆದುಕೊಂಡು ಹೋಗ್ತಿದ್ದೆ. ಆಗ ಸಣ್ಣ ಹುಡುಗನೊಬ್ಬ ಸರೋವರದ ದಡದಲ್ಲಿ ಆಟವಾಡ್ತಿದ್ದ. ಅಚಾನಕ್ ಅವನು ಸರೋವರದ ನೀರಿಗೆ ಬಿದ್ದು ಮುಳುಗಿದ. ನಾನು ತಕ್ಷಣವೇ ಸರೋವರಕ್ಕೆ ಧುಮುಕಿದೆ. ಅದರ ನೀರು ಬಹಳ ಆಳವಾಗಿತ್ತು. ನನ್ನ ಜೀವಕ್ಕೆ ಅಪಾಯವಿದ್ದರೂ ಅದನ್ನು ಲೆಕ್ಕಿಸದೆ, ಆ ಹುಡುಗನನ್ನು ಪಾರು ಮಾಡಿದೆ. ಅವನನ್ನು ಅವನ ತಾಯಿಗೆ ಒಪ್ಪಿಸಿದೆ.”
ರಾಜ ಇದನ್ನು ಕೇಳಿ ಹೇಳಿದ, “ನೀನು ನಿನ್ನ ಕರ್ತವ್ಯ ಮಾಡಿದೆ. ನಿನಗೆ ಅಭಿನಂದನೆಗಳು. ಆದರೆ ಸರಿಯಾಗಿ ಯೋಚಿಸಿದರೆ, ಯಾವುದೇ ಗೌರವಾರ್ಹ ಮನುಷ್ಯ ಅದನ್ನೇ ಮಾಡಬೇಕಾಗಿತ್ತು. ಒಬ್ಬ ಸಣ್ಣ ಹುಡುಗ ನೀರಿನಲ್ಲಿ ಮುಳುಗುತ್ತಿರುವಾಗ ಅವನ ಜೀವ ಉಳಿಸಲು ಸಹಾಯ ಮಾಡದೆ ಇರುವುದು ಹೇಡಿತನ.”
ಅನಂತರ ಮೂರನೆಯ ಮಗ ಮಾತನಾಡಿದ: "ನಾನೂ ದೂರದೂರದ ಊರುಗಳಿಗೆ ಪ್ರಯಾಣಿಸಿದೆ. ಹಿಂತಿರುಗುವ ಸಮಯ ಬಂದಾಗ ಯಾವುದೇ ಉದಾತ್ತ ಕೆಲಸ ಮಾಡಿರಲಿಲ್ಲ. ಪರ್ವತದ ಹಾದಿಯಲ್ಲಿ ಅರಮನೆಗೆ ಮರಳುತ್ತಿರುವಾಗ, ಒಂದು ಕಡೆ ಒಬ್ಬ ಮನುಷ್ಯ ಮಲಗಿರುವುದನ್ನು ಕಂಡೆ. ಅವನು ಅಲ್ಲೇ ನಿದ್ದೆ ಮಾಡಿದ್ದ. ಆದರೆ ಅವನು ಸ್ವಲ್ಪ ಜರಗಿದ್ದರೂ ನೂರಾರು ಅಡಿ ಆಳದ ಪಕ್ಕದ ಪ್ರಪಾತಕ್ಕೆ ಬೀಳುತ್ತಿದ್ದ. ಅವನನ್ನು ಎಬ್ಬಿಸಲಿಕ್ಕಾಗಿ ಹತ್ತಿರ ಹೋದಾಗ, ಅವನು ನನ್ನ ಹಳೆಯ ವೈರಿ ಎಂದು ಗೊತ್ತಾಯಿತು. ಅವನು ಹಲವಾರು ಸಲ ನನಗೆ ಹಾನಿ ಮಾಡಿದ್ದಾನೆ. ಅವನನ್ನು ಅಲ್ಲಿ ಹಾಗೇ ಬಿಟ್ಟು ಬರೋಣ ಎನ್ನಿಸಿತು.
ಆದರೆ, ಅದು ಸರಿಯಲ್ಲ ಎಂದು ನಾನು ಯೋಚಿಸಿದೆ. ಯಾಕೆಂದರೆ, ಅವನು ಕೆಲವೇ ಇಂಚು ಸರಿದರೂ ಪ್ರಪಾತಕ್ಕೆ ಬಿದ್ದು ಸತ್ತೇ ಹೋಗುತ್ತಾನೆ. ಆದ್ದರಿಂದ ಅವನು ನನಗೆ ಮಾಡಿದ್ದ ಎಲ್ಲ ಅನ್ಯಾಯಗಳನ್ನು ಮರೆತು, ಅವನ ಭುಜವನ್ನು ಜೋರಾಗಿ ಅಲುಗಾಡಿಸಿ ಎಬ್ಬಿಸಿದೆ. “ಎಂತಹ ಅಪಾಯದ ಸ್ಥಳದಲ್ಲಿ ಮಲಗಿದ್ದಿ? ಇದು ಮಲಗುವ ಸ್ಥಳವೇ ಅಲ್ಲ” ಎಂದೆ.
ಆ ಮನುಷ್ಯ ಎದ್ದು ಸುತ್ತಲೂ ನೋಡಿದ. ತಾನು ಮಲಗಿದ್ದ ಜಾಗದ ಅಪಾಯ ಕಂಡೊಡನೆ ಅಲ್ಲಿಂದ ಜಿಗಿದು ಇತ್ತ ಬಂದ. ಅನಂತರ ನನ್ನನ್ನು ಗುರುತು ಹಿಡಿದ. ನನಗೆ ಕೃತಜ್ನತೆ ಹೇಳುವ ಬದಲಾಗಿ ನನ್ನನ್ನು ನಿಂದಿಸಿದ, "ನನ್ನ ಜೀವ ಉಳಿಸಿದೆ ಎಂದು ನನಗೆ ತೋರಿಸುವ ಮೂಲಕ ನನಗೆ ಅವಮಾನ ಮಾಡಲು ನೀನು ಪ್ರಯತ್ನಿಸಿದ್ದಿ. ನೀನು ಇದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ. ನೀನೇನೂ ನನ್ನ ಮೇಲಿನ ಕರುಣೆಯಿಂದ ನನ್ನನ್ನು ನಿದ್ದೆಯಿಂದ ಎಬ್ಬಿಸಿಲ್ಲ ಎಂದು ನನಗೆ ಗೊತ್ತಿದೆ.” ಅನಂತರ ಆ ಮನುಷ್ಯ ನನ್ನತ್ತ ತಿರುಗಿ ನೋಡದೆ, ಅಲ್ಲಿಂದ ಹೊರಟು ಹೋದ. ಇಷ್ಟೆಲ್ಲ ಆದರೂ ಅವನನ್ನು ಹಾಗೆಯೇ ಬಿಟ್ಟು ಬಂದಿದ್ದರೆ ನನಗೆ ಸಂತೋಷ ಆಗುತ್ತಿರಲಿಲ್ಲ."
ಇದನ್ನು ಕೇಳಿದ ರಾಜ ಒಂದು ನಿಮಿಷ ಯೋಚಿಸುತ್ತಾ ಮೌನವಾಗಿದ್ದ. ಅನಂತರ ರಾಜ ಘೋಷಿಸಿದ, “ಖಂಡಿತವಾಗಿ ನನ್ನ ಖಜಾನೆಯಲ್ಲಿರುವ ಅತ್ಯಂತ ಬೆಲೆಬಾಳುವ ಮುತ್ತನ್ನು ನಿನಗೆ ಕೊಡಬೇಕಾಗಿದೆ.”
ತದನಂತರ ರಾಜ ತನ್ನ ಇನ್ನಿಬ್ಬರು ಮಗಂದಿರು ಮತ್ತು ಆಸ್ಥಾನದ ಮಂತ್ರಿಮಾಗಧರತ್ತ ತಿರುಗಿ ಹೇಳಿದ, "ನನ್ನ ಮೊದಲನೆಯ ಮಗ ತಾನು ಪ್ರಾಮಾಣಿಕ ಎಂದು ಸಾಬಿತು ಮಾಡಿದ್ದಾನೆ. ಎರಡನೆಯ ಮಗ ತಾನು ಧೈರ್ಯವಂತ ಎಂದು ಸಾಬೀತು ಮಾಡಿದ್ದಾನೆ. ಇಬ್ಬರಿಗೂ ಉಡುಗೊರೆಗಳು ಸಿಕ್ಕಿವೆ. ಮೊದಲನೆಯ ಮಗನಿಗೆ ಚಿನ್ನದ ನಾಣ್ಯಗಳನ್ನು ಕೊಡಲಾಗಿದೆ. ಎರಡನೆಯ ಮಗನಿಗೆ ಅವನು ರಕ್ಷಿಸಿದ ಹುಡುಗನ ಕುಟುಂಬದ ಕೃತಜ್ನತೆ ಸಿಕ್ಕಿದೆ. ಆದರೆ ನನ್ನ ಮೂರನೆಯ ಮಗ ಇವರಿಬ್ಬರು ಮಾಡಿದ್ದಕ್ಕಿಂತ ಉದಾತ್ತವಾದ ಕೆಲಸ ಮಾಡಿದ್ದಾನೆ. ತನಗೆ ಯಾವುದೇ ಕೃತಜ್ನತೆ ಸಿಗೋದಿಲ್ಲ; ಬದಲಾಗಿ ನಿಂದನೆ ಸಿಗುತ್ತದೆ ಎಂದು ತಿಳಿದಿದ್ದರೂ ಅವನು ಯಾವುದೇ ಉಡುಗೊರೆಯ ನಿರೀಕ್ಷೆಯಿಲ್ಲದೆ ಒಂದು ಒಳ್ಳೆಯ ಕೆಲಸ ಮಾಡಿದ್ದಾನೆ. ಅವನು ನನ್ನ ಖಜಾನೆಯಲ್ಲಿರುವ ಎಲ್ಲ ಬೆಲೆಬಾಳುವ ಮುತ್ತುಗಳಿಗಿಂತ ಜಾಸ್ತಿ ಬೆಲೆಯುಳ್ಳವನು. ಯಾಕೆಂದರೆ ತನಗೆ ಹಾನಿ ಮಾಡಿದವರಿಗೂ ಒಳ್ಳೆಯದನ್ನು ಮಾಡುವುದು ಪರಿಶುದ್ಧ ಹೃದಯವನ್ನು ತೋರಿಸುತ್ತದೆ.”
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!