ನಾವು ಯಾರನ್ನಾದರೂ ಅಪರೂಪಕ್ಕೆ ಭೇಟಿಯಾದಾಗ ‘ಏನು ಮಾರಾಯಾ, ನೀನಂತೂ ಅತ್ತಿಯ ಹೂವಿನಂತೆ ಆಗಿಬಿಟ್ಟೆ..' ಎಂದು ತಮಾಷೆ ಮಾಡುವುದಿದೆ. ಏಕೆಂದರೆ ಅತ್ತಿ ಮರದ ಹೂವು ಕಾಣಿಸುವುದೇ ಇಲ್ಲ, ಕಂಡರೂ ಅದನ್ನು ಹೂವೆಂದು ಗುರುತಿಸುವುದು ಕಷ್ಟ. ಹಲವರಂತೂ ಅತ್ತಿ ಮರ ಹೂವನ್ನೇ ಬಿಡುವುದಿಲ್ಲ ಎಂದು ವಾದ ಮಾಡುವುದೂ ಇದೆ. ಆದರೆ ಅತ್ತಿ ಮರ ಹೂವು ಬಿಡುತ್ತದೆ. ಆದರೆ ಹೂವುಗಳು ಇತರ ಹೂವುಗಳಂತೆ ಕಣ್ಣಿಗೆ ಕಾಣಿಸುವುದಿಲ್ಲ. ಏಕೆಂದರೆ ಈ ಹೂವುಗಳು ಕಾಯಿಯಂತೆಯೇ ಇರುತ್ತವೆ. ನೀವು ಪಿಯರ್ಸ್ ಹಣ್ಣನ್ನು ನೋಡಿರುವಿರಾದರೆ ಈ ಆಕಾರದಲ್ಲಿ ಅತ್ತಿಯ ಹೂವುಗಳಿರುತ್ತವೆ.
ಅತ್ತಿ ಮರ (Cluster Fig) ಇದು ಅಂಜೂರ ಜಾತಿಗೆ ಸೇರಿದ ಮರ. ಅತ್ತಿ ಮರವನ್ನು ಔದುಂಬರ ವೃಕ್ಷವೆಂದೂ ಕರೆಯುತ್ತಾರೆ. ಇದರ ಸಸ್ಯ ಶಾಸ್ತ್ರೀಯ ಹೆಸರು ಫೈಕಸ್ ರೆಸೆಮೊಸಾ (Ficus Racemosa). ಈ ಮರ ಸಾಧಾರಣವಾಗಿ ೧೦-೧೫ ಮೀಟರುಗಳಷ್ಟು ಎತ್ತರಕ್ಕೆ ಬೆಳೆಯುತ್ತದೆ. ಮರದಲ್ಲಿ ಗೊಂಚಲು ಗೊಂಚಲು ಕಾಯಿಗಳಾಗುತ್ತವೆ. ಕಾಯಿಗಳು ಹಸುರು ವರ್ಣದಿಂದ ಹಣ್ಣಾಗುವಾಗ ತುಸು ಹಳದಿಯಾಗಿ ನಂತರ ಕೆಂಪು ಬಣ್ಣಕ್ಕೆ ತಿರುಗುತ್ತವೆ. ಕಾಯಿಗಳನ್ನು ತುಂಡರಿಸಿದಾಗ ಅದರ ಒಳಗೆ ಅಸಂಖ್ಯಾತ ಪುಟ್ಟ ಪುಟ್ಟ ಜೀವಂತ ಕೀಟಗಳು ಕಂಡು ಬರುತ್ತವೆ. ಪುಟ್ಟ ಪುಟ್ಟ ಬೀಜಗಳೂ ಇರುತ್ತವೆ. ನಾವಿಲ್ಲಿ ಗಮನಿಸಬೇಕಾದದ್ದು ಈ ಅತ್ತಿ ಹೂವಿನ ಪರಾಗಸ್ವರ್ಶ ಹೇಗೆ ನಡೆಯುತ್ತದೆ? ಎಂಬ ಸಂಗತಿ. ಏಕೆಂದರೆ ಇದರ ಹೂವು ಅರಳಿರುವುದಿಲ್ಲವಾದುದರಿಂದ ನೇರವಾಗಿ ಬೇರೆ ಹೂವುಗಳಲ್ಲಿ ನಡೆಯುವಂತೆ ಯಾವುದೇ ನೊಣ, ಚಿಟ್ಟೆ ಅಥವಾ ಹಕ್ಕಿಗಳಿಂದ ಪರಾಗಸ್ವರ್ಶ ನಡೆಯುವುದು ಕಷ್ಟ ಸಾಧ್ಯ.
ಒಂದು ರೀತಿಯಲ್ಲಿ ಹೇಳುವುದಾದರೆ ಇದರ ಹಣ್ಣು ನಿಜವಾದ ಹಣ್ಣಲ್ಲ. ನಾವು ಕಾಣುವ ಇತರೆ ನಿಜವಾದ ಹಣ್ಣುಗಳು ಹೂವಿನಿಂದ ನೇರವಾಗಿ ಬೆಳೆದುಬಿಡುತ್ತದೆ. ಆದರೆ ಅತ್ತಿಯ ಹಣ್ಣು ಪುಷ್ಪ ಮಂಜರಿ (Inflorescence) ಯಿಂದ ಬೆಳೆದದ್ದು. ಆಲದ ಮರದಲ್ಲೂ ಈ ರೀತಿಯ ಹೂವುಗಳು ಕಂಡು ಬರುತ್ತವೆ. ಅದರಲ್ಲಿ ದೇಟು ಮಾರ್ಪಾಡಾಗಿ ಈಗಿರುವ ಕಾಯಿಯಂತೆ ಆಕಾರವನ್ನು ತಳೆಯುತ್ತದೆ. ಹೊರಮೈಯ ಹಸುರು ಬಣ್ಣವಾಗಲೀ, ಹಣ್ಣಾಗುವಾಗ ಆಗುವ ಕೆಂಪು ಬಣ್ಣವಾಗಲೀ ಆ ದೇಟಿನ ಬಣ್ಣವೇ ಹೊರತು ನಿಜವಾದ ಹಣ್ಣಿನ ತೊಗಟೆ ಅಥವಾ ಸಿಪ್ಪೆಯ ಬಣ್ಣವಲ್ಲ.
ನಾವು ಈ ಪುಷ್ಪ ಮಂಜರಿಯನ್ನು ಲಂಬವಾಗಿ ಕತ್ತರಿಸಿದಾಗ (ಚಿತ್ರ ೨ ಗಮನಿಸಿ) ಒಳಗೆ ಹೋಗಲು ಹಾಗೂ ಹೊರಗೆ ಬರಲು ಒಂದು ದಾರಿ ಕಾಣಿಸುತ್ತದೆ. ಈ ದಾರಿ ಪುಷ್ಪ ಪತ್ರಗಳಿಂದ (bracts) ಆವೃತ್ತವಾಗಿರುತ್ತದೆ. ಈ ದಾರಿ ಸಣ್ಣದಾದ ಕೊಳವೆಯ (osteole) ಆಕಾರದಲ್ಲಿರುತ್ತದೆ. ಆ ಕೊಳವೆಯ ಸುತ್ತ ಹೂವುಗಳು ಬೆಳೆದಿರುತ್ತವೆ. ಪುಷ್ಪ ಮಂಜರಿಯ ದೇಟಿನ ಮಾರ್ಪಾಡಿಗೆ ಕಾರಣ, ಒಳಗೆ ಪೊಳ್ಳಾಗಿ ಹೂವುಗಳು ಬೆಳೆದಿರುತ್ತವೆ. ಈ ಹೂವುಗಳಲ್ಲಿ ಗಂಡು ಹೂವುಗಳು, ಹೆಣ್ಣು ಹೂವುಗಳು (gall flowers) ಹಾಗೂ ಸಪುಂಸಕ ಹೂವುಗಳಿರುತ್ತವೆ. ಒಂದು ಪುಷ್ಪ ಮಂಜರಿಯಲ್ಲಿ ಈ ಎಲ್ಲಾ ತರಹದ ಹೂವುಗಳು ಇರಬೇಕೆಂದಿಲ್ಲ. ಕೆಲವು ಪುಷ್ಪ ಮಂಜರಿಯಲ್ಲಿ ಕೇವಲ ಗಂಡು, ಹೆಣ್ಣು ಮತ್ತು ಕೋಶಾವಸ್ಥೆಯ ಕೀಟವನ್ನೊಳಗೊಂಡ ಹೆಣ್ಣು ಹೂವುಗಳಿರಬಹುದು. ಇಲ್ಲವೇ, ಕೇವಲ ಗಂಡು ಕೀಟ ಹಾಗೂ ಕೋಶಾವಸ್ಥೆಯ ಕೀಟವನ್ನು ಹೊಂದಿರುವ ಹೆಣ್ಣು ಹೂವುಗಳಿರಬಹುದು. ಅಥವಾ ಕೇವಲ ಹೆಣ್ಣು ಹೂವುಗಳು ಹಾಗೂ ನಪುಂಸಕ ಹೂವುಗಳು ಮಾತ್ರ ಇರಬಹುದು. ಎಲ್ಲಾ ಹೂವುಗಳಿಗೂ ಪುಷ್ಪ ಉಪಪತ್ರ (bracteoles) ಗಳಿರುತ್ತವೆ.
ಮೊದಲೇ ತಿಳಿಸಿದಂತೆ ಅತ್ತಿ ಹಣ್ಣಿನ ಒಳಗಡೆ ಅಸಂಖ್ಯಾತ ಕೀಟಗಳಿರುವ ಸಾಧ್ಯತೆಗಳಿವೆ. ಏಕೆಂದರೆ ಕೀಟವು ಈ ಹೂವಿನ ಒಳಗೆ ಹೋಗಿ ಅಲ್ಲಿ ತನ್ನ ತತ್ತಿಗಳನ್ನು ಇಡುತ್ತದೆ. ಕೋಶಾವಸ್ಥೆಯಲ್ಲಿರುವ ಈ ಕೀಟಗಳು ಕ್ರಮೇಣ ಹೂವು ಕಾಯಿಯಾದಾಗ, ಕಾಯಿಯ ಒಳಭಾಗಕ್ಕೆ ಸೇರಿಕೊಳ್ಳುತ್ತವೆ. ಕಾಯಿಯು ಬೆಳೆದು ಹಣ್ಣಾಗುವ ಸಮಯಕ್ಕೆ ಕೀಟಗಳು ರೆಕ್ಕೆ ಬಲಿತು ಪ್ರೌಢಾವಸ್ಥೆಗೆ ಬಂದಿರುತ್ತವೆ. ಇದರಿಂದ ನಾವು ಹಣ್ಣನ್ನು ಕತ್ತರಿಸಿದ ಕೂಡಲೇ ಅಸಂಖ್ಯಾತ ಪುಟ್ಟ ಪುಟ್ಟ ಕೀಟಗಳು ಹಾರಿ ಹೋಗುತ್ತವೆ.
ಪರಾಗಸ್ಪರ್ಶ ಕ್ರಿಯೆ: ಸಾಮಾನ್ಯವಾಗಿ ಗಂಡು ಹೂವುಗಳು ಮೇಲ್ಭಾಗದ ದಾರಿಯ ಬಳಿ ಹಾಗೂ ಹೆಣ್ಣು ಹೂವುಗಳು ಕೆಳಭಾಗದಲ್ಲಿರುತ್ತವೆ. ಅತ್ತಿ ಹೂವುಗಳಲ್ಲಿ ಪರಕೀಯ ಪರಾಗಸ್ಪರ್ಶ ನಡೆಯುತ್ತದೆ. ಒಂದು ಜಾತಿಯ ಕಣಜ ಕೀಟ, ಹೆಣ್ಣು ಹೂವಿನ ಅಂಡಾಶಯದಲ್ಲಿ ಬೆಳೆದ ತನ್ನ ಕೋಶಾವಸ್ಥೆಯಿಂದ ಪೂರ್ಣವಾಗಿ ಬೆಳೆದು ಪುಷ್ಪಮಂಜರಿಯ ದಾರಿಯ ಮುಖಾಂತರ ಹೊರಗೆ ಹೋಗಲು ಯತ್ನಿಸುವಾಗ ಗಂಡು ಹೂವುಗಳ ಮಧ್ಯದಿಂದ ಹಾಯ್ದು ಹೋಗಬೇಕಾಗುತ್ತದೆ. ಆಗ ಅದರ ಮೈಭಾಗಕ್ಕೆ ಪರಾಗವು ಮೆತ್ತಿಕೊಳ್ಳುತ್ತದೆ. ಈ ಕೀಟವು ಮತ್ತೊಂದು ಪುಷ್ಪ ಮಂಜರಿಯೊಳಗೆ ಹೋಗಿ ಆಹಾರ ಅರಸುವಾಗ ಅಥವಾ ಹೆಣ್ಣು ಹೂವುಗಳ ಅಂಡಾಶಯದಲ್ಲಿ (overy) ತನ್ನ ಗರ್ಭ ಧಾರಿತ ತತ್ತಿಗಳನ್ನು ಇಡುವುದಕ್ಕಾಗಿ ಪೊಳ್ಳು ಭಾಗದಲ್ಲಿ ಹರಿದಾಡುತ್ತಿರುವಾಗ ಅದರ ಮೈಮೇಲೆ ಮೆತ್ತಿಕೊಂಡ ಪರಾಗವು ಹೆಣ್ಣು ಹೂವುಗಳ ಮೇಲೆ ಬೀಳುತ್ತದೆ. ಹೀಗೆ ಅತ್ತಿ ಮರದ ಹೂವುಗಳಲ್ಲಿ ಪರಾಗಸ್ವರ್ಶವಾಗುತ್ತದೆ.
ಮಾಹಿತಿ ಕೃಪೆ: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಪ್ರಕಟಿಸಿದ ‘ಅರವತ್ತು ಪ್ರಶ್ನೆಗಳು' ಪುಸ್ತಕ
ಚಿತ್ರ ಕೃಪೆ: ಅಂತರ್ಜಾಲ ತಾಣ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!