ದೀಪಾವಳಿ ಕಳೆದು ೧೨ ದಿನಗಳ ನಂತರ ಬರುವ ದ್ವಾದಶಿಯಂದು ತುಳಸಿ ಪೂಜೆ (ನವೆಂಬರ್ ೫, ೨೦೨೨) ಆಚರಣೆ ಮಾಡುತ್ತಾರೆ. ತುಳಸಿ ಸಸ್ಯ ಪೂಜನೀಯವೇ, ಅದರ ಜತೆಗೆ ತನ್ನ ಆರೋಗ್ಯಕರ ಗುಣಗಳಿಂದ ಬಹು ಉಪಯೋಗಿ ಗಿಡವೆಂದೂ ಉಲ್ಲೇಖಿಸಲಾಗಿದೆ. ತುಳಸಿ ಪೂಜೆಯ ಮುನ್ನಾ ದಿನವಾದ ಇಂದು ನಾವು ತುಳಸಿ ಬಗ್ಗೆ ಇರುವ ಪೌರಾಣಿಕ ಕಥೆ ಹಾಗೂ ಈ ಸಸ್ಯದ ಉಪಯೋಗಗಳ ಬಗ್ಗೆ ಒಂದಿಷ್ಟು ಗಮನ ಹರಿಸೋಣ. 

ಪೌರಾಣಿಕವಾಗಿ ತುಳಸಿಯು ಲಕ್ಷ್ಮೀ ದೇವಿಯ ಕೃಪೆಯಿಂದ ಧರ್ಮಧ್ವಜ ಹಾಗೂ ಮಾಧವಿ ದಂಪತಿಗಳಿಗೆ ಜನಿಸಿದ ಸುಪುತ್ರಿ. ಬಾಲ್ಯದಿಂದಲೂ ಶ್ರೀಹರಿಯನ್ನೇ ತನ್ನ ಪತಿ ಎಂದು ಭಾವಿಸಿ ಪೂಜೆ ಮಾಡುತ್ತಿದ್ದಳು ತುಳಸಿ. ಆದರೆ ನಾರದರ ಪ್ರೇರೇಪಣೆಯಿಂದಾಗಿ ತುಳಸಿ ಶಂಖಚೂಡನೆಂದ ವಿಷ್ಣುಭಕ್ತನಾದ ಅಸುರನ ಜೊತೆ ವಿವಾಹವಾದಳು. ದೇವದಾನವರ ಯುದ್ಧದಲ್ಲಿ ಶಂಖಚೂಡನು ಮೃತ ಪಟ್ಟಾಗ ತುಳಸಿಯು ಸಸ್ಯದ ರೂಪ ತಾಳಿದಳು. ಆಕೆಯ ಅದಮ್ಯ ಭಕ್ತಿಗೆ ಮೆಚ್ಚಿದ ವಿಷ್ಣು ಆಕೆಗೆ ಮೋಕ್ಷವನ್ನು ಕರುಣಿಸಿ ತನ್ನ ಕೊರಳಿನ ಮಾಲೆಯಾಗಿ ಧರಿಸಿಕೊಂಡನು. ಈ ಕಾರಣದಿಂದ ತುಳಸಿ ಸಸ್ಯವು ಬಹಳ ಪೂಜನೀಯ ಎಂದು ಹಿಂದೂಗಳು ನಂಬುತ್ತಾರೆ. ವಿಷ್ಣುಭಕ್ತರಾದ ವೈಷ್ಣವರಿಗಂತೂ ತುಳಸಿ ಬಹಳ ಪವಿತ್ರ. ದೇವತಾ ಪೂಜೆ, ಜನನ-ಮರಣ, ವಿವಿಧ ಪೂಜಾ ವಿಧಿಗಳು, ದಾನ ಧರ್ಮಾದಿಗಳು, ತೀರ್ಥ ಪ್ರಸಾದ, ನೈವೇದ್ಯ ಮೊದಲಾದುವುಗಳಿಗೆ ತುಳಸಿಯನ್ನು ಬಳಸುತ್ತಾರೆ. ತುಳಸೀ ಮಾಲೆಯನ್ನು ವಿಷ್ಣು ಕೊರಳಿನಲ್ಲಿ ಧರಿಸಿರುವುದರಿಂದ ಆತನನ್ನು ‘ತುಳಸಿ ವನಮಾಲಿ' ಎಂದೂ ಕರೆಯುತ್ತಾರೆ. 

ವಿಷ್ಣುವಿನ ಅವತಾರವೆಂದೇ ನಂಬಲಾಗುವ ಒಡಿಸ್ಸಾದ ಪುರಿಯಲ್ಲಿರುವ ಸ್ವಾಮಿ ಜಗನ್ನಾಥ ದೇವಸ್ಥಾನದಲ್ಲಿ ಜಗನ್ನಾಥನ ವಿಗ್ರಹಕ್ಕೆ ಪ್ರತೀ ದಿನ ತುಳಸಿ ಮಾಲೆಯನ್ನು ಹಾಕಿ ಅಲಂಕಾರ ಮಾಡುತ್ತಾರೆ. ಜಗನ್ನಾಥ ಸ್ವಾಮಿಗೆ ಅರ್ಪಿಸುವ ನೈವೇದ್ಯಕ್ಕೆ ತುಳಸೀ ಬೀಜದ ಒಗ್ಗರಣೆಯನ್ನು ಹಾಕುತ್ತಾರಂತೆ. ವೈಷ್ಣವರ ಪಾರ್ಥಿವ ಶರೀರಕ್ಕೆ ತುಳಸಿ ಮೃತ್ತಿಕೆಯನ್ನು ಲೇಪಿಸಿ, ಚಿತೆಯ ಮೇಲೆ ತುಳಸಿ ಗಿಡದ ಗೆಲ್ಲುಗಳನ್ನು (ಒಣ) ಇರಿಸಿ ದಹಿಸುತ್ತಾರೆ. ಉಪವಾಸದ ದಿನಗಳಂದು ಒಂದು ದಳ ತುಳಸಿಯನ್ನು ಗಂಗೋಧಕದ ಜೊತೆ ಕೃಷ್ಣಾರ್ಪಣ ಎಂದು ದೇವರಿಗೆ ಅರ್ಪಿಸಿದಾಗ ನಿಮ್ಮ ಬದುಕು ಸಾರ್ಥಕವಾಗುತ್ತದೆ. ತುಳಸಿ ಪೂಜನೀಯ ಸಸ್ಯವಾದುದರಿಂದ ದೇವಸ್ಥಾನದ ಆವರಣದಲ್ಲಿ, ಆಸ್ತಿಕರ ಮನೆಗಳಲ್ಲಿ ತುಳಸಿಯ ಸಸ್ಯಗಳು ಸಾಮಾನ್ಯವಾಗಿ ಕಂಡು ಬರುತ್ತವೆ. ತುಳಸಿ ಗಿಡದ ಮೂಲಕ ಬರುವ ಗಾಳಿ ಆರೋಗ್ಯಕ್ಕೆ ಉತ್ತಮವೆಂದು ನಂಬಲಾಗಿದೆ.

ನಾವು ನಮ್ಮ ಸುತ್ತಮುತ್ತ ಕಾಣುವ ತುಳಸಿಯಲ್ಲಿ ಸಾಧಾರಣವಾಗಿ ಮೂರು-ನಾಲ್ಕು ಬಗೆಗಳಿರುತ್ತವೆ. ಕೃಷ್ಣ ತುಳಸಿ, ಶ್ವೇತ ತುಳಸಿ, ರಾಮ ತುಳಸಿ, ನಾಯಿ ತುಳಸಿ ಹೀಗೆಲ್ಲಾ ವಿಧಗಳನ್ನು ಕಾಣಬಹುದಾಗಿದೆ. ಇವುಗಳಲ್ಲದೇ ಇನ್ನೂ ಹಲವಾರು ವಿಧದ ತುಳಸಿಗಳು ದೇಶಾದ್ಯಂತ ಕಾಣಲು ಸಿಗುತ್ತವೆ. ಪ್ರಾಚೀನ ವೈದ್ಯಕೀಯ ಶಾಸ್ತ್ರದಲ್ಲಿ ತುಳಸಿ ಸಸ್ಯದ ಉಲ್ಲೇಖಗಳಿವೆ. ತುಳಸೀ ದಳಗಳು ಬಾಯಾರಿಕೆಯನ್ನು ನಿವಾರಿಸುತ್ತವೆ ಎಂಬ ನಂಬಿಕೆ ಪುರಾತನ ಕಾಲದಲ್ಲಿತ್ತು. ಈ ಕಾರಣದಿಂದ ದೂರದ ಪ್ರಯಾಣ ಮಾಡುವವರು ಒಂದೆರಡು ತುಳಸೀ ದಳಗಳನ್ನು ತಮ್ಮ ನಾಲಗೆಯ ಅಡಿಭಾಗದಲ್ಲಿ ಇರಿಸಿ ಪ್ರಯಾಣ ಮಾಡುತ್ತಿದ್ದರಂತೆ. ಈಗಲೂ ಭಾರತದ ಕೆಲವೆಡೆ ಈ ರೀತಿಯ ಪ್ರಯಾಣ ಮಾಡುವವರು ಸಿಗುತ್ತಾರೆ.

ಪ್ರಾಚೀನ ಗ್ರಂಥಗಳಲ್ಲಿ ತುಳಸಿಯ ಎಲೆಯ ಮೂಲಕ ತೆಗೆದ ರಸವನ್ನು ಜೀರ್ಣಕಾರಿ, ಕ್ಷಯ ರೋಗ ನಿವಾರಕ, ಹೇನುಗಳ ನಾಶಕ, ಸೋಂಕು ಪರಿಹಾರಕ, ಚರ್ಮರೋಗ ನಿವಾರಕ ಎಂದು ಹೇಳಲಾಗುತ್ತದೆ. ತುಳಸಿ ಸಸ್ಯದ ಪ್ರತಿಯೊಂದು ಭಾಗವೂ ಒಂದು ರೀತಿಯಲ್ಲಿ ಔಷಧೀಯ ಗುಣಗಳನ್ನು ಹೊಂದಿದೆ. ಆಯುರ್ವೇದ ಪಂಡಿತರು ಬಹಳ ಕಾಲದಿಂದ ಕಾಡುವ ಕೆಮ್ಮಿಗೆ ತುಳಸಿಯ ಕಷಾಯವನ್ನು ಮಾಡಿಕೊಡುತ್ತಿದ್ದರು. ಈಗಲೂ ತುಳಸಿಯುಕ್ತ ಕೆಮ್ಮಿನ ಸಿರಪ್ ಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಕೆಮ್ಮು ಮಾತ್ರವಲ್ಲ ತಲೆನೋವು, ನೆಗಡಿ, ಅಜೀರ್ಣ, ನರದೌರ್ಬಲ್ಯ, ಮರೆಗುಳಿತನ ಮೊದಲಾದ ಸಮಸ್ಯೆಗಳಿಗೆ ತುಳಸೀ ರಸವು ರಾಮಬಾಣವೆಂದು ನಂಬಲಾಗಿದೆ. 

ಕುದಿಯುವ ನೀರಿನಲ್ಲಿ ತುಳಸಿಯ ಎಲೆಗಳನ್ನು ಹಾಕಿದರೆ ಅದರಿಂದ ಹೊರಹೊಮ್ಮುವ ಸುಗಂಧವು ಆರೋಗ್ಯಕ್ಕೆ ಹಿತಕರ, ಇದರಿಂದ ಶೀತ, ಕೆಮ್ಮು, ಮೂಗು ಕಟ್ಟುವುದು, ಗಂಟಲಿನಲ್ಲಿ ಕಿರಿಕಿರಿ ಆಗುತ್ತಿರುವುದು ಬಹಳಷ್ಟು ಮಟ್ಟಿಗೆ ನಿವಾರಣೆಯಾಗುತ್ತದೆ. ನೀರಿಗೆ ತುಳಸಿ, ಶುಂಠಿ ಹಾಗೂ ವೀಳ್ಯದೆಲೆಗಳ ರಸವನ್ನು ಬೆರೆಸಿ ಬಾಯಿಯನ್ನು ಮುಕ್ಕಳಿಸಿದರೆ ಬಾಯಿಯು ಶುಚಿಯಾಗುತ್ತದೆ ಹಾಗೂ ದುರ್ವಾಸನೆ ನಿವಾರಣೆಯಾಗುತ್ತದೆ. ತುಳಸಿ ಎಲೆಯನ್ನು ಬಳಸಿ ಚಹಾ ಸಹಾ ತಯಾರಿಸಬಹುದು. ತುಳಸಿ ಎಲೆಯ ರಸಕ್ಕೆ ಸ್ವಲ್ಪ ಲಿಂಬೆ ರಸವನ್ನು ಬೆರೆಸಿ ಚರ್ಮದ ಕಜ್ಜಿ, ಗಜಕರ್ಣ, ಹುಳುಕಡ್ಡಿ ಮೊದಲಾದುವುಗಳಿಗೆ ಲೇಪಿಸುತ್ತಾ ಬಂದರೆ ಬಹಳಷ್ಟು ಶಮನವಾಗುತ್ತದೆ.

ತುಳಸಿಯ ವೈಜ್ಞಾನಿಕ ಹೆಸರು ಓಸಿಯಂ ಟೆನುಫ್ಲೊರಮ್ (Ocimum tenuiflorum) ಆಗಿದ್ದು, ಇದನ್ನು ಸೇಕ್ರೆಡ್ ಬೇಸಿಲ್ ಎಂದೂ ಕರೆಯುತ್ತಾರೆ.ಪವಿತ್ರ ಸಸ್ಯಗಳ ರಾಜ ಎಂಬ ಅನ್ವರ್ಥನಾಮವನ್ನು ಹೊಂದಿರುವ ಈ ತುಳಸಿಯ ಗಿಡವು ನಿಜಕ್ಕೂ ಒಂದು ಬಹು ಉಪಯೋಗಿ ಗಿಡ. ತುಳಸಿಯ ಗಿಡದಲ್ಲಿ ಯೂಜಿನಾಲ್, ಕರ್ಪಕ್ರಾಲ್, ಮೆಸಿಲ್ ಯೂಜಿನಾಲ್ ಎಂಬ ರಾಸಾಯನಿಕಗಳಿದ್ದು, ಇವು ನೋವು ಶಮನಕಾರಿಯಾಗಿಯೂ ಕೆಲಸ ಮಾಡಬಲ್ಲವು ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಆದುದರಿಂದ ಮನೆಯ ಆವರಣದಲ್ಲಿ ಸ್ವಲ್ಪ ತುಳಸಿ ಗಿಡಗಳಿರಲಿ. ಅದರಿಂದ ಬರುವ ಆಹ್ಲಾದಕರ ಗಾಳಿಯನ್ನು ಸೇವಿಸುತ್ತಿರಿ. ನಿಮ್ಮ ಆರೋಗ್ಯ ವೃದ್ಧಿಯ ಜೊತೆಗೆ ಕಾಯಿಲೆಗಳಿಂದಲೂ ದೂರವಿರಬಹುದು. ನಿಮಗೆಲ್ಲರಿಗೂ ತುಳಸೀ ಹಬ್ಬದ ಹಾರ್ದಿಕ ಶುಭಾಶಯಗಳು.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ