ಪ್ರಪಂಚದ ಸಕಲ ಸಂಗತಿಗಳ ಮೇಲೆ ಇಂದು ತಂತ್ರಜ್ಞಾನದ ನೆರಳು ಬಿದ್ದಿದೆ. ದೈನಂದಿನ ಬದುಕಿನಲ್ಲಿ ನಾವು ನಿರ್ವಹಿಸಿದ ಕೆಲಸಗಳನ್ನು ಒಮ್ಮೆ ಹಿಂತಿರುಗಿ ನೋಡಿದಾಗ, ಅವುಗಳಲ್ಲಿ ಬಹುಪಾಲು ತಂತ್ರಜ್ಞಾನದ ನೆರವಿನಿಂದಲೇ ಸರಾಗವಾಗಿ ನಡೆಯುತ್ತಿರುವುದನ್ನು ಕಾಣಬಹುದು. ಯಾವುದೇ ರಾಷ್ಟ್ರವನ್ನು ಸಶಕ್ತಗೊಳಿಸುವ ಸೂತ್ರ ಈ ತಂತ್ರಜ್ಞಾನವೇ ಆಗಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಭಾರತದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಬಳಕೆಗೆ ಆದ್ಯತೆ ಹೆಚ್ಚಿಸಲು ಕರೆಕೊಟ್ಟಿರುವುದು, ಆ ಮೂಲಕ ಸಾಮಾಜಿಕ ಸಮಸ್ಯೆಗಳ ಪರಿಹಾರ ಕಂಡುಕೊಳ್ಳಲು ಸೂಚಿಸಿರುವುದು ಸ್ವಾಗತಾರ್ಹ ಬೆಳವಣಿಗೆ.
ವಿಶ್ವದ ನಂ ೧ ಜನಸಂಖ್ಯಾ ರಾಷ್ಟ್ರವಾಗಲು ದಿನಗಣನೆ ಮಾಡುತ್ತಿರುವ ಭಾರತದಲ್ಲಿ ೩೫ ವರ್ಷದೊಳಗಿನವರ ಸಂಖ್ಯೆ ಶೇ.೬೫ಕ್ಕೂ ಅಧಿಕವಿರುವ ಕಾರಣಕ್ಕೆ ಭಾರತವನ್ನು ಯುವಕರ ರಾಷ್ಟ್ರ ಎಂದೇ ಗುರುತಿಸುತ್ತಾರೆ. ಭವಿಷ್ಯದ ಕನಸು, ವರ್ತಮಾನದ ಬೆಳವಣಿಗೆಯ ಜತೆಜತೆಗೆ ಹೆಜ್ಜೆ ಹಾಕುವುದು ಯುವಜನಾಂಗಕ್ಕೆ ಸಿದ್ಧಿಸಿರುವ ಒಂದು ಮಹತ್ತರವಾದ ಕಲೆ. ಈ ಕಾರಣಕ್ಕಾಗಿಯೇ ಭಾರತ ಅತ್ಯಂತ ಅಲ್ಪಾವಧಿಯಲ್ಲಿ ತಂತ್ರಜ್ಞಾನವನ್ನು ಹಾಸುಹೊಕ್ಕು ಮಾಡಿಕೊಂಡಿದ್ದು, ಆರೋಗ್ಯ, ಕೈಗಾರಿಕೆ, ಔಷಧ, ಶಿಕ್ಷಣ ಹಾಗೂ ಕೃಷಿ ಸೇರಿದಂತೆ ಹಲವು ರಂಗಗಳಲ್ಲಿ ತಾಂತ್ರಿಕ ನಾವೀನ್ಯತೆಯನ್ನು ಅಪ್ಪಿಕೊಂಡಿದೆ. ತಂತ್ರಜ್ಞಾನ ಕೇಂದ್ರೀತವಾದ ನಮ್ಮ ಈ ಹೊಸ ಹಾದಿಗಳು ಮಾನವೀಯ ಮೌಲ್ಯದಿಂದ ಕೂಡಿರಬೇಕು ಎಂದು ಪ್ರಧಾನಿಗಳು ಆಶಿಸಿರುವುದು ಔಚಿತ್ಯಪೂರ್ಣವೂ ಹೌದು.
ದೇಶದ ಜನರಲ್ಲಿ ಭವಿಷ್ಯ ಕುರಿತ ಆಕಾಂಕ್ಷೆ ಬಿತ್ತುವುದು ಯಾವುದೇ ನಾಯಕನ ಮುಖ್ಯ ಲಕ್ಷಣ. ನಮ್ಮ ವಿಜ್ಞಾನಿಗಳು ಕೃಷಿಯಿಂದ ಬಾಹ್ಯಾಕಾಶದವರೆಗೂ ಮಹತ್ವದ ಆವಿಷ್ಕಾರಗಳನ್ನು ಸಾಧಿಸುತ್ತಲೇ ಇದ್ದಾರೆ. ಅಪಾರ ಪ್ರಮಾಣದ ನವೋದ್ಯಮಗಳು ವರ್ತಮಾನದ ಬದುಕಿಗೆ ಹೊಳಪು ತುಂಬಲು ಪ್ರಯತ್ನಿಸುತ್ತಲೇ ಇವೆ. ಯುವಜನತೆಯ ಈ ಉತ್ಸಾಹ, ಜಾಣ್ಮೆಯನ್ನು ಗಮನದಲ್ಲಿಟ್ಟುಕೊಂಡು, ಅವರನ್ನು ಹುರಿದುಂಬಿಸುವ ಕಾರ್ಯವನ್ನು ಪ್ರಧಾನಿ ಮಾಡಿದ್ದಾರೆ.
“ಯಂತ್ರಗಳು ಸಮಾನತೆಯನ್ನು ಹೇಳುತ್ತವೆ" ಎಂದಿದ್ದರು ಸಾಮಾಜಿಕ ಚಿಂತಕ ರಾಮಮನೋಹರ ಲೋಹಿಯಾ. ಅಂದರೆ, ಯಂತ್ರಗಳು ಬದವ-ಶ್ರೀಮಂತ, ಮೇಲು-ಕೀಳು ಎಂಬ ಭೇದವೆಣಿಸದೆ ಕಾರ್ಯನಿರ್ವಹಿಸುವುದನ್ನು ನಮಗೆ ಬೋಧಿಸುತ್ತವೆ. ಅವುಗಳನ್ನು ಪಳಗಿಸುವ ಮಟ್ಟಕ್ಕೆ ನಾವು ಕೌಶಲ್ಯ ರೂಪಿಸಿಕೊಂಡಿದ್ದೇ ಆದಲ್ಲಿ ಅಸಾಧ್ಯಗಳನ್ನೆಲ್ಲ ಸುಲಲಿತ ಮಾಡಿಕೊಳ್ಳುವ ನೂರಾರು ದಾರಿಗಳು ನಮ್ಮ ಮುಂದೆ ತೆರೆದುಕೊಳ್ಳುತ್ತವೆ. ಕೈಗಾರೀಕರಣದಿಂದ ಉದಾರೀಕರಣದ ದಿನಗಳವರೆಗೂ ಮನುಷ್ಯ ಈ ಸತ್ಯವನ್ನು ಕಂಡುಕೊಂಡಿದ್ದಾನೆ ಕೂಡ.
ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಇಂದು ಹಲವು ಬಗೆಯಲ್ಲಿ ಅಚ್ಚರಿ ಹುಟ್ಟಿಸುತ್ತಿದೆ. ಮನುಷ್ಯ ಭೇದಿಸದ ರಹಸ್ಯದಿಂದ ಹಿಡಿದು ಕಾರ್ಯಾವಧಿ ತಗ್ಗಿಸುವ ಇದರ ಜಾಣ್ಮೆ ಜನೋಪಯೋಗಿಯಾಗುತ್ತಿದೆ. ಈ ತಾಂತ್ರಿಕ ವಿಸ್ಮಯಗಳು, ಪರಿಕರಗಳು ನಮ್ಮ ಉದ್ಯೋಗವನ್ನು ಕಸಿದುಕೊಳ್ಳುತ್ತವೆ ಎಂಬ ಯಾವ ಆತಂಕವನ್ನೂ ಇಟ್ಟುಕೊಳ್ಳದೆ, ಅವುಗಳೊಟ್ಟಿಗೆ ಬದುಕು ಕಂಡುಕೊಳ್ಳುವ ಹೊಸತನವೂ ನಮಗೆ ಸಿದ್ಧಿಸಿದೆ. ಈ ವರದಾನವನ್ನು ಬಳಸಿಕೊಂಡು ಮುಂಚೂಣಿಗೆ ಬರೋಣ ಎನ್ನುವುದಷ್ಟೇ ಪ್ರಧಾನಿ ಅವರ ಮಾತುಗಳ ಆಶಯ. ಡಿಜಿಟಲ್ ಕ್ರಾಂತಿಗೆ ಎಲ್ಲರೂ ಕೈಜೋಡಿಸೋಣ.
ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೦೧-೦೩-೨೦೨೩
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!