‘ಸುವರ್ಣ ಸಂಪುಟ' ಕೃತಿಯಿಂದ ಈ ವಾರ ನಾವು ಆಯ್ದುಕೊಂಡ ಕವಿ ರಾಜಶೇಖರಯ್ಯ ಟಿ ಆರ್ (ರಾಜಶೇಖರ). ಇವರ ಬಗ್ಗೆ ಹೆಚ್ಚಿನ ಮಾಹಿತಿಗಳು ಎಲ್ಲಿಯೂ ದೊರೆಯುತ್ತಿಲ್ಲ. ಇವರು ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎ., (೧೯೪೬) ನಾಗಪುರ ವಿಶ್ವವಿದ್ಯಾನಿಲಯದಿಂದ ಎಂ.ಎ. (೧೯೫೬) ಪದವೀಧರರಾಗಿದ್ದರು. ೧೯೪೬ ರಿಂದ ೧೯೫೮ ವರೆಗೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿದ್ದರು. ನಂತರ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರೂ, ವಿಭಾಗದ ಮುಖ್ಯಸ್ಥರೂ ಆಗಿದ್ದರು. ಸ್ವಪ್ನಮಂಗಳ ಮತ್ತು ಇತರೆ ಕತೆಗಳು ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೬೧) ದೊರೆತಿದೆ. ‘ರುದ್ರಾಕ್ಷಿ’ ಇವರ ಕವಿತಾ ಸಂಕಲನ.
‘ಸುವರ್ಣ ಸಂಪುಟ' ಕೃತಿಯಲ್ಲಿ ರಾಜಶೇಖರ ಇವರ ಎರಡು ಕವನಗಳು ಪ್ರಕಟವಾಗಿದೆ. ಅವುಗಳನ್ನು ನಿಮ್ಮ ಓದಿಗಾಗಿ ಇಲ್ಲಿ ಪ್ರಕಟಿಸಿದ್ದೇವೆ.
ಭಕ್ತಿ
ನನ್ನ ಮೌನವೆ ನಿನಗೆ ಪ್ರಿಯವಾದ ಪಕ್ಷದಲಿ
ಒಪ್ಪಿಸಿಕೊ ಅದನೆ ನೀನು.
ಹಾಡಬೇಕೆನ್ನುವೀ ಮೂಕ ನಾಲಗೆಯನು
ಅರ್ಪಿಸುವೆನು ಹರಿದು ನಾನು.
ನನ್ನ ದುಃಖವೆ ನಿನಗೆ ಪ್ರಿಯವಾದ ಪಕ್ಷದಲಿ
ಒಪ್ಪಿಸಿಕೊ ಅದನೆ ನೀನು.
ನಗೆಯ ಕಂದನ ಕೊರಳ ಕಡಿದು ನಿನ್ನಡಿಗಳಿಗೆ
ಅರ್ಪಿಸುವೆನು ಅಳುತ ನಾನು.
ನನ್ನ ನಾಶವೇ ನಿನಗೆ ಪ್ರಿಯವಾದ ಪಕ್ಷದಲಿ
ಬಂದು ಸಿಡಿಲಾಗಿ ಎರಗು
ನನ್ನ ಹೃದಯದ ಹಸಿರು ವನವೆಲ್ಲ ಒಡ್ಡುವೆನು
ನಿನ್ನ ಕಣ್ಣಿರುವವರೆಗು
ನನ್ನ ಮಸಣದ ಬೂದಿಯೇ ನಿನಗೆ ಪ್ರಿಯವಾಗೆ
ಬಂದು ಕುಣಿದಾಡು ಶಿವನೆ.
ಶ್ರೀಮಂತ ಆತ್ಮದೀ ಕನಸಿನೈಶ್ಚರ್ಯಗಳ
ಸುಟ್ಟುಕೋ ವಿಭೂತಿಯನೆ.
ನೀನೊಲಿದು ಹೂ ನಲಿದು ನಕ್ಕರದು ನಿನ್ನ ಮುಡಿಗೆ;
ನೀ ಮುನಿದು ನೆಲವುರಿದು ಸುಟ್ಟರದು ನಿನ್ನ ಹಣೆಗೆ.
***
ಯಾವ ದುಃಖಕೆ ಯಾವ ಅನುಕಂಪ?
ಕ್ರೋಧಾಗ್ನಿ ಕೆಂಪು ನೆತ್ತರು ಚೆಲ್ಲಿ, ಅವಮಾನ-
ದುರಿಮೋಡಗಳು ಕಾದು ಕೈ ಸೆಟೆದು ಹಾದಿಯಲಿ
ಪಾಪ ದೊಡ್ದಲನು ಹೊತ್ತು ಪಿತೃಗೃಹವನೆ ಅರಸಿ
ಬಹ ಸಂಜೆ ವೆಣ್ಣಿನಾಗಮನಕ್ಕೆ ಅಪಹಾಸ್ಯ-
ದೋಲಗವನೂದುವುವು ಗೋ ಕೊರಳ ಗಂಟೆಗಳು.
ಮನೆಯ ಸೂರಿನ ನೇರದೆದುರು ಕೊಂಬೆಯ ಮೇಲೆ,
ಕರಿಮುಗಿಲ ಕಂಬಳಿಯ ಹೊದ್ದಂತೆ ಚಳಿಗೆ,
ಕುಳಿತೊಂದೆ ತಾರೆ, ಮುದಿಯೌವನದ ಹುಚ್ಚಿನಲಿ
ಚೆಲುವೆಯೋರ್ವಳ ಕಂಡು ದಿಟ್ಟಿಸುವ ಕಾಮಿಯೊಲು,
ರೆಪ್ಪೆಯಿಕ್ಕದೆ ನೋಡುತಿದೆ ;
ಇರುಳೆಲ್ಲ ಅಲ್ಲಿ
ನೂರು ಸಾವಿರ ಭಗ್ನ ಹೃದಯಗಳ ಬೆಂಕಿಯಲಿ
ಪ್ರಜ್ವಲಿಸುತದೆ ಒಂದೊಂದು ಉರಿವ ಮನೆ ಕಂಡು
ಅಂಗಳದೊಳಾಡುತಿಹ ಮಗು, ಹತ್ತಿದುವು ದೀಪ,
ಎನ್ನುತ್ತದೆ. ಯಾವ ದುಃಖಕೆ ಯಾವ ಅನುಕಂಪ.
(‘ಸುವರ್ಣ ಸಂಪುಟ' ಕೃತಿಯಿಂದ ಆಯ್ದ ಕವನಗಳು)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!