ಎಂ ವಿ ರಾಜಮ್ಮ ಇವರು ೪೦ರ ದಶಕದಲ್ಲಿ ಚಿತ್ರರಂಗವನ್ನಾಳಿದ ಅಪರೂಪದ ಮಹಿಳೆಯರಲ್ಲಿ ಓರ್ವಳು. ಏಕೆ ಅಪರೂಪದ್ದು ಎಂದರೆ ಆ ಕಾಲದಲ್ಲಿ ಮಹಿಳೆಯರು ಹೆಚ್ಚಾಗಿ ಚಿತ್ರರಂಗಕ್ಕೆ ಕಾಲಿಡುತ್ತಿರಲಿಲ್ಲ. ಸಭ್ಯ ಮಹಿಳೆಗೆ ಚಿತ್ರರಂಗದ ಸಹವಾಸ ಇರಬಾರದು, ಕೇವಲ ರಂಗಭೂಮಿಯಲ್ಲಿ ನಾಟಕಗಳಲ್ಲಿ ನಟಿಸುತ್ತಿದ್ದ ಹುಡುಗಿಯರಿಗೆ ಮಾತ್ರ ಈ ಅವಕಾಶ ಎನ್ನುವ ಮಾತು ಇತ್ತು. ಆದರೆ ಎಂ ವಿ ರಾಜಮ್ಮ ನಟನಾ ರಂಗದಿಂದ ಬಂದಿದ್ದರೂ ಅವರು ಚಿತ್ರರಂಗದಲ್ಲಿ ಬೆಳೆದು ನಿಂತ ಪರಿ ಅಮೋಘವಾದದ್ದು. ಕನ್ನಡ ಮಾತ್ರವಲ್ಲ ತಮಿಳು, ತೆಲುಗು ಭಾಷೆಗಳಲ್ಲೂ ತಮ್ಮ ನಟನಾ ಸಾಮರ್ಥ್ಯವನ್ನು ನಿರೂಪಿಸಿದ್ದಾರೆ. ಅವರು ಕೇವಲ ನಟಿ ಮಾತ್ರ ಆಗಿದ್ದಿದ್ದರೆ ಈ ಲೇಖನ ಬರೆಯುವ ಅಗತ್ಯತೆಯೇ ಇರಲಿಲ್ಲ. ಅವರು ಕನ್ನಡದ ಪ್ರಥಮ ಚಿತ್ರ ನಿರ್ಮಾಪಕಿಯೂ ಹೌದು. ಇವರು ಸಾಹಸ ಪ್ರವೃತ್ತಿಯ ಅಸಾಮಾನ್ಯ ಮಹಿಳೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.

೧೯೪೪ರಲ್ಲಿ ತೆರೆಕಂಡ ‘ರಾಧಾ ರಮಣ’ ಎನ್ನುವ ಪೌರಾಣಿಕ ಚಿತ್ರವನ್ನು ನಿರ್ಮಿಸಿದ್ದು ಎಂ ವಿ ರಾಜಮ್ಮ ಇವರು. ಈ ಚಿತ್ರದಲ್ಲಿ ಇವರು ಪ್ರಮುಖ ಪಾತ್ರದಲ್ಲಿಯೂ ನಟಿಸಿದ್ದಾರೆ. ‘ರಾಧಾ ರಮಣ' ಚಿತ್ರ ಪೌರಾಣಿಕವಾದರೂ ಇದರ ಕಥಾ ವಸ್ತು ಅಂದಿನ ಸಾಮಾಜಿಕ ಜೀವನಕ್ಕೆ ಬಹಳ ಹತ್ತಿರವಾಗಿತ್ತು. ಚಿತ್ರದ ಹೆಸರೇ ಹೇಳುವಂತೆ ರಾಧಾ ರಮಣ ಚಿತ್ರ ರಾಧೆ ಮತ್ತು ಕೃಷ್ಣರ ನಿಷ್ಕಳಂಕ ಪ್ರೇಮದ ಕುರಿತಾದದ್ದು. ರಾಧೆಯ ಪತಿ ಅನಯನನಿಗೆ ತನ್ನ ಪತ್ನಿಯ ಮೇಲೆ ಯಾವಾಗಲೂ ಸಂಶಯ. ಆಕೆ ಸದಾ ಕೃಷ್ಣನ ಧ್ಯಾನದಲ್ಲಿರುತ್ತಾಳೆ ಎಂಬುದೇ ಆತನ ತಕರಾರು. ಕೃಷ್ಣನ ಜನ್ಮ ರಹಸ್ಯವನ್ನು ಅರಿತ ಆತ ಕಂಸನಿಂದ ಕೃಷ್ಣನ ಹತ್ಯೆಯಾದರೆ ಉತ್ತಮ ಎಂಬ ನಿಲುವಿನೊಂದಿಗೆ ಕಂಸನನ್ನು ಬೆಂಬಲಿಸುತ್ತಾನೆ. ಆದರೆ ಒಂದು ದಿನ ಕೃಷ್ಣನೇ ರಾಧೆಯನ್ನು ಕಂಸನಿಂದ ರಕ್ಷಿಸುತ್ತಾನೆ. ಇದನ್ನು ಅರಿತ ಅನಯನನ ಸಂಶಯ ಪಿಶಾಚಿ ದೂರವಾಗುತ್ತದೆ. ಇದು ಕೇವಲ ಪೌರಾಣಿಕ ಚಿತ್ರದ ಕಥೆ ಮಾತ್ರವಲ್ಲ ನಮ್ಮ ನಿಮ್ಮೆಲ್ಲರ ಮನೆ ಮನೆಯ ಕಥೆ ಎಂಬ ಭಾವನೆ ಬರುವುದು ‘ರಾಧಾ ರಮಣ' ಚಿತ್ರ ನೋಡಿದ ಬಳಿಕ. ಯಾವುದೇ ಪವಾಡಗಳನ್ನು ತೋರಿಸದೇ ಮಾನವೀಯ ನೆಲೆಯಲ್ಲಿ ಈ ಚಿತ್ರದ ಕಥೆಯನ್ನು ಹೆಣೆಯಲಾಗಿದೆ. ಶೃಂಗಾರದ ಸಭ್ಯತೆಯೂ ಎಲ್ಲೆ ಮೀರಿಲ್ಲ ಎನ್ನುವುದೇ ಈ ಚಿತ್ರದ ವಿಶೇಷ.

ಇಂತಹ ಮನೋ ವಿಶ್ಲೇಷಕ ಚಿತ್ರದ ಕಥೆಯನ್ನು ಬರೆದವರು ಖ್ಯಾತ ಚಿತ್ರ ಸಾಹಿತಿ ಮೈಸೂರಿನ ಸೋರಟ್ ಅಶ್ವಥ್ ಇವರು. ಈ ಚಿತ್ರದ ನಾಯಕಿಯಾಗಿ, ನಿರ್ಮಾಪಕಿಯಾಗಿ ದಾಖಲೆ ಬರೆದದ್ದು ಎಂ ವಿ ರಾಜಮ್ಮ. ರಾಜಮ್ಮ ಆಗಲೇ ಕನ್ನಡದ ಮೊದಲ ಸಾಮಾಜಿಕ ಚಿತ್ರವೆಂದು ಹೆಸರಾದ ‘ಸಂಸಾರ ನೌಕೆ'ಯಲ್ಲಿ ನಾಯಕಿಯಾಗಿ ನಟಿಸಿದ್ದರು. ಚಂದ್ರಕಲಾ ನಾಟಕ ಮಂಡಳಿ ಮೂಲಕ ರಂಗಭೂಮಿಯನ್ನು ಪ್ರವೇಶಿಸಿದ ರಾಜಮ್ಮ ನಂತರ ಮದರಾಸಿನಲ್ಲಿ ತನ್ನ ಚಿತ್ರ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ೧೯೪೪ರಲ್ಲಿ ತೆರೆಕಂಡ ಈ ಚಿತ್ರ ರಾಜಮ್ಮನವರ ಜೀವನದ ಅತ್ಯುತ್ತಮ ಚಿತ್ರಗಳಲ್ಲಿ ಒಂದು.

ಕನ್ನಡ ಚಿತ್ರರಂಗದಲ್ಲಿ ಅಮೂಲ್ಯ ರತ್ನಗಳಂತೆ ಬೆಳಗಿದ ಜಿ ವಿ ಅಯ್ಯರ್ ಮತ್ತು ಟಿ ಎನ್ ಬಾಲಕೃಷ್ಣ ಇವರು ಈ ಚಿತ್ರದ ಮುಖಾಂತರವೇ ಬೆಳಕಿಗೆ ಬಂದವರು. ಚಿತ್ರ ಸಾಹಿತಿ ಸೋರಟ್ ಅಶ್ವಥ್ ಅವರ ಮೇಲೆ ನಿರ್ಮಾಪಕಿಯಾಗಿದ್ದ ರಾಜಮ್ಮ ಅವರಿಗೆ ಏನೋ ಭರವಸೆ. ಈ ಕಾರಣದಿಂದಲೇ ಅವರು ಹೇಳಿದ ಪಾತ್ರವರ್ಗಕ್ಕೆ ರಾಜಮ್ಮ ಅವರು ಸೈ ಹೇಳಿದ್ದರು. 

ಈ ಚಿತ್ರದ ನಿರ್ದೇಶಕರದ್ದು ಮತ್ತೊಂದು ಕಥೆ. ಇದರ ನಿರ್ದೇಶಕಿ ಜ್ಯೋತಿ ಸಿನ್ಹಾ ಎಂಬವರು. ಇವರು ದೂರದ ಬಂಗಾಳದವರು. ಮೂಲತಃ ಧ್ವನಿಗ್ರಾಹಕರಾದ ಜ್ಯೋತಿ ಸಿನ್ಹಾ ಅವರು ಈ ಚಿತ್ರದ ನಿರ್ದೇಶಕರಾದುದೇ ಒಂದು ವಿಶೇಷ ಸಂಗತಿ. ಆದರೆ ಇವರಿಗೆ ಈ ಚಿತ್ರವನ್ನು ಪೂರ್ತಿಗೊಳಿಸುವ ಅದೃಷ್ಟ ಮಾತ್ರ ಇರಲಿಲ್ಲ. ಸಹ ನಿರ್ಮಾಪಕರಾಗಿದ್ದ ಕಾಶಿ ಚೆಟ್ಟಿಯಾರ್ ಜೊತೆಗಿನ ಭಿನ್ನಾಭಿಪ್ರಾಯದಿಂದಾಗಿ ಜ್ಯೋತಿ ಸಿನ್ಹಾ ಅವರು ಚಿತ್ರವನ್ನು ಅರ್ಧಕ್ಕೇ ಬಿಟ್ಟು ಹೋದರು. ಉಳಿದ ಭಾಗಗಳನ್ನು ನಿರ್ಮಾಪಕಿ ರಾಜಮ್ಮ ನವರೇ ಪೂರ್ತಿಗೊಳಿಸಿದರು ಎನ್ನುವ ಗುಟ್ಟಾದ ಮಾತೊಂದು ಚಿತ್ರರಂಗದಲ್ಲಿದೆ. ರಾಜಮ್ಮನವರಿಗೂ ಕಾಶಿ ಚೆಟ್ಟಿಯಾರ್ ಜೊತೆ ಭಿನ್ನಾಭಿಪ್ರಾಯಗಳಿದ್ದವು. ಆದರೂ ಇವೆಲ್ಲವನ್ನೂ ಬದಿಗಿಟ್ಟು ರಾಜಮ್ಮನವರು ಚಿತ್ರವನ್ನು ಪೂರ್ತಿಗೊಳಿಸಿದರು. 

‘ರಾಧಾ ರಮಣ' ಚಿತ್ರ ಪಾತ್ರವರ್ಗದಲ್ಲಿ ಬಿ ಆರ್ ಪಂತುಲು, ಎಂ ವಿ ರಾಜಮ್ಮ, ಜಿ ವಿ ಅಯ್ಯರ್, ಟಿ ಎನ್ ಬಾಲಕೃಷ್ಣ, ಪಿ. ಕಾಳಿಂಗ ರಾವ್, ಮೋಹನ ಕುಮಾರಿ, ಸೋಹನ್ ಕುಮಾರಿ, ಭಾನುಮತಿ, ಸೋರಟ್ ಅಶ್ವಥ್ ಮೊದಲಾದವರು ಇದ್ದರು. ಸಂಗೀತ ನೀಡಿದ್ದು ಪದ್ಮನಾಭ ಶಾಸ್ತ್ರಿಗಳು. ಈ ಚಿತ್ರದಲ್ಲಿ ಒಟ್ಟಿಗೆ ಐದು ಹಾಡುಗಳಿವೆ. ಚಿತ್ರೀಕರಣ ಮುಗಿಸಿ ೧೯೪೪ರ ಫೆಬ್ರವರಿ ೨೬ರಂದು ಸೆನ್ಸಾರ್ ಸರ್ಟಿಫಿಕೇಟ್ ಪಡೆದುಕೊಂಡು ಬಿಡುಗಡೆಯಾದ ಈ ಚಿತ್ರವು ಜನರ ಮೆಚ್ಚುಗೆಗೆ ಪಾತ್ರವಾಯಿತು. 

ಈ ಚಿತ್ರ ಬಿಡುಗಡೆಯಾಗಿ ಈಗಾಗಲೇ ಸುಮಾರು ೮೦ ವರ್ಷಗಳು ಕಳೆದಿವೆ. ಆದರೂ ಈ ಚಿತ್ರದಂತಹ ಕಥಾ ಹಂದರವನ್ನು ಹೊಂದಿದ ಚಿತ್ರಗಳು ನಂತರ ಬರಲಿಲ್ಲ, ಈಗಲೂ ಬಂದಿಲ್ಲ ಎನ್ನುವುದೇ ವಿಶೇಷ. ರಾಜಮ್ಮನವರ ಸಿನೆಮಾ ಸೇವೆಯನ್ನು ಗುರುತಿಸಿ ರಾಜ್ಯ ಸರಕಾರ ೧೯೯೭-೯೮ರ ಸಾಲಿನ ಡಾ ರಾಜಕುಮಾರ್ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಕನ್ನಡ ಚಿತ್ರರಂಗದ ಬಹಳಷ್ಟು ಪ್ರಥಮಗಳನ್ನು ಕಂಡ ‘ರಾಧಾ ರಮಣ' ಚಿತ್ರವು ಒಂದು ಮೈಲಿಗಲ್ಲಾಗಿ ಶಾಶ್ವತ ಉಳಿಯಲಿದೆ ಎನ್ನುವುದು ಚಿತ್ರ ವಿಶ್ಲೇಷಕರ ಮಾತು.

(ಆಧಾರ) 

ಚಿತ್ರ ಕೃಪೆ: ಅಂತರ್ಜಾಲ ತಾಣ