ಸೌದೆ ಅಡುಗೆಯ ಹೊಗೆಯಿಂದ ಮಹಿಳೆಯರು ಆರೋಗ್ಯ ಕೆಡಿಸಿಕೊಳ್ಳಬಾರದೆಂಬ ಉದ್ದೇಶದಿಂದ ಕೇಂದ್ರ ಸರಕಾರವು ಉಜ್ವಲ ಯೋಜನೆಯಡಿ ಸಿಲಿಂಡರ್ ಮತ್ತು ಒಲೆಗಳನ್ನು ವಿತರಣೆ ಮಾಡಿದೆ. ಆದರೆ ಕಳೆದೊಂದು ವರ್ಷದಿಂದ ಸಿಲಿಂಡರ್ ಬೆಲೆ ಏರುಗತಿಯಲ್ಲಿದ್ದು ಇದರಿಂದ ಗ್ರಾಮೀಣ ಜನರು ಸಿಲಿಂಡರ್ ಬಳಕೆಯಿಂದ ದೂರವಾಗುತ್ತಿದ್ದಾರೆ. ಕೂಲಿ ಮಾಡುವ ಜನರು ರೂ ೧,೧೫೦.೦೦ ಕೊಟ್ಟು ಸಿಲಿಂಡರ್ ಖರೀದಿಸುವ ಸಾಮರ್ಥ್ಯವಿಲ್ಲದಿರುವುದರಿಂದ ಮತ್ತೆ ಹಳೆ ಪದ್ಧತಿಯಲ್ಲೇ ಅಡುಗೆ ಮಾಡಲು ಆರಂಭಿಸುವ ಸಾಧ್ಯತೆ ಇದೆ. ಕಳೆದ ೧೨ ತಿಂಗಳಲ್ಲಿ ಸಿಲಿಂಡರ್ ಬೆಲೆಯನ್ನು ೬ನೇ ಬಾರಿ ಏರಿಕೆ ಮಾಡಲಾಗಿದೆ. ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ಈಗಾಗಲೇ ತತ್ತರಿಸಿರುವ ಜನಸಾಮಾನ್ಯರಿಗೆ ಕೇಂದ್ರ ಸರಕಾರವು ಮೇಲಿಂದ ಮೇಲೆ ಅಡುಗೆ ಅನಿಲ ದರವನ್ನು ಹೆಚ್ಚಿಸುವ ಮೂಲಕ ಗಾಯದ ಮೇಲೆ ಬರೆ ಎಳೆಯುತ್ತಿದೆ. ಕೇಂದ್ರ ಸರಕಾರ ಈ ಬಾರಿಯ ಬಜೆಟ್ ನಲ್ಲಿ ಅಡುಗೆ ಅನಿಲದ ಸಬ್ಸಿಡಿಯನ್ನು ಶೇ ೭೫ ರಷ್ಟು ಕಡಿತ ಮಾಡಿದ್ದು, ಬೆಲೆ ಏರಿಕೆಗೆ ಕಾರಣವಾಗಿದೆ. ಜಾಗತಿಕವಾಗಿ ಕಚ್ಚಾ ತೈಲದ ದರ ಇಳಿಕೆಯಾಗಿದೆ. ರಷ್ಯಾದಿಂದ ಕಡಿಮೆ ಬೆಲೆಗೆ ಕಚ್ಚಾ ತೈಲ ಆಮದು ಮಾಡಿಕೊಳ್ಳಲಾಗುತ್ತಿದೆ. ಆದ್ರೂ ಬೆಲೆ ಹೆಚ್ಚಳ ಮಾಡಲಾಗಿದೆ. ಬಡವರಿಗೆ ‘ಉಜ್ವಲ' ಯೋಜನೆಯಡಿ ಉಚಿತವಾಗಿ ಅನಿಲ ಸಂಪರ್ಕ ನೀಡಲಾಗಿದೆ ಎಂದು ಪ್ರಧಾನಿ ಮೋದಿ ಹೇಳುತ್ತಿದ್ದಾರೆ. ಆದರೆ ಉಜ್ವಲ ಯೋಜನೆ ಫಲಾನುಭವಿಗಳು ಕೂಡ ಮಾರುಕಟ್ಟೆ ದರ ಕೊಟ್ಟು ಸಿಲಿಂಡರ್ ಖರೀದಿಸಬೇಕಾಗಿದ್ದು, ಇದು ಹೊರೆಯಾಗಿ ಪರಿಣಮಿಸಿದೆ. ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯನ್ನೂ ರೂ ೩೫೩.೦೦ ಏರಿಕೆ ಮಾಡಲಾಗಿದ್ದು, ಈ ದರ ಹೆಚ್ಚಳದ ಹೊರೆಯನ್ನು ಹೋಟೆಲ್ ಮತ್ತಿತರ ಉದ್ಯಮಗಳ ಮಾಲೀಕರು ಜನರಿಗೆ ವರ್ಗಾಯಿಸುತ್ತಿದ್ದಾರೆ. ಇದರಿಂದಾಗಿ ಸಹಜವಾಗಿಯೇ ಜನರ ಜೇಬು ಖಾಲಿಯಾಗುತ್ತಿದೆ. ಒಂದೆಡೆ ನಿರುದ್ಯೋಗ ಸಮಸ್ಯೆ, ಇನ್ನೊಂದೆಡೆ ವ್ಯಾಪಾರ ಇಲ್ಲದೆ ಜನ ಕಂಗಾಲಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಜನರ ಅತ್ಯಗತ್ಯ ವಸ್ತುವಾದ ಸಿಲಿಂಡರ್ ಬೆಲೆಯನ್ನು ಹೆಚ್ಚಿಸಿರುವುದು ಸರಿಯಲ್ಲ. ಆದ್ದರಿಂದ ಕೇಂದ್ರ ಸರಕಾರ ಕೂಡಲೇ ಸಿಲಿಂಡರ್ ಬೆಲೆಯನ್ನು ಇಳಿಕೆ ಮಾಡಬೇಕು. ಆ ಮೂಲಕ ಬಡವರ, ಮಧ್ಯಮ ವರ್ಗದವರ ಜೀವನ ಸುಲಭವಾಗುವಂತೆ ಮಾಡಬೇಕು.
ಕೃಪೆ: ವಿಶ್ವವಾಣಿ, ಸಂಪಾದಕೀಯ, ದಿ: ೦೩-೦೩-೨೦೨೩
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!