ನಾವು ಪ್ರಾಥಮಿಕ, ಪ್ರೌಢ ಶಾಲಾ ವಿದ್ಯಾರ್ಥಿಗಳಾಗಿದ್ದ ಸಮಯದಿಂದ ನಮ್ಮ ವಿಜ್ಞಾನ ಟೀಚರ್ ಗಳು ಮಾನವನ ಹೊಟ್ಟೆಯಲ್ಲಿ ಆಮ್ಲವಿರುತ್ತದೆ ಎಂಬ ವಿಷಯವನ್ನು ಹೇಳುತ್ತಾ ಬಂದಿದ್ದಾರೆ. ಆದರೆ ಈ ಆಮ್ಲಕ್ಕೆ ಹೊಟ್ಟೆಯಲ್ಲೇನು ಕೆಲಸ? ಎಂದು ನೀವು ಯೋಚನೆ ಮಾಡಿರುವಿರಾ? ಹೊಟ್ಟೆಯಲ್ಲಿರುವ ಆ ಆಮ್ಲ ಯಾವುದು? ಹೊಟ್ಟೆಯಲ್ಲಿರುವ ಆಮ್ಲದಿಂದ (ಆಸಿಡ್) ನಮ್ಮ ಜೀವಕ್ಕೆ ಏಕೆ ಅಪಾಯವಾಗುತ್ತಿಲ್ಲ? ಎಷ್ಟೊಂದು ಪ್ರಶ್ನೆಗಳಿವೆ ಅಲ್ಲವೇ? ಉತ್ತರಗಳನ್ನು ಒಮ್ಮೆ ಗಮನಿಸುವ…

ನಮ್ಮ ಹೊಟ್ಟೆಯಲ್ಲಿರುವ ಆಮ್ಲ ಹೈಡ್ರೋಕ್ಲೋರಿಕ್ ಆಮ್ಲ. ಇದು ನಾವು ತಿಂದ ಆಹಾರವನ್ನು ವಿಭಜಿಸಿ ಜೀರ್ಣಗೊಳ್ಳಲು ಮತ್ತು ಪ್ರೋಟೀನ್ ನಂತಹ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತವೆ. ಅಷ್ಟೇ ಅಲ್ಲ, ಇದು ಹೊಟ್ಟೆಯಲ್ಲಿರುವ ಬ್ಯಾಕ್ಟೀರಿಯಾ ಮತ್ತು ವೈರಸ್ ಗಳನ್ನು ನಿವಾರಿಸಿ, ನಮ್ಮ ದೇಹವನ್ನು ಸೋಂಕಿನಿಂದ ರಕ್ಷಿಸುತ್ತದೆ. ಇನ್ನೊಂದು ವಿಚಿತ್ರ ಸಂಗತಿಯೇನೆಂದರೆ ಹೊಟ್ಟೆಯು ಲೋಳೆಯ ದಪ್ಪ ಪದರದಿಂದ ತನ್ನನ್ನು ತಾನು ಈ ಆಮ್ಲದಿಂದ ರಕ್ಷಿಸಿಕೊಳ್ಳುತ್ತದೆ. ಈ ದಪ್ಪದ ಲೋಳೆಯ ಪದರವು ಇಲ್ಲದೇ ಇದ್ದಲ್ಲಿ ಆಮ್ಲವು ನಮ್ಮ ಹೊಟ್ಟೆಯನ್ನೇ ಜೀರ್ಣಿಸಿಕೊಳ್ಳುತ್ತಿತ್ತೇನೋ? 

ನಿಖರವಾಗಿ ಆಮ್ಲ ಎಂದರೇನು? ಆಮ್ಲವೆಂದರೆ ಜಲಜನಕದ (ಹೈಡ್ರೋಜನ್) ಅಯಾನನ್ನು ಬಿಡುಗಡೆ ಮಾಡುವ ಒಂದು ವಸ್ತು. ಜಲಜನಕ ಒಂದು ಪ್ರೋಟಾನ್ ಮತ್ತು ಒಂದು ಇಲೆಕ್ಟ್ರಾನ್ ಹೊಂದಿರುವ ಮೂಲ ವಸ್ತು ಎಂದು ನಿಮಗೆ ಗೊತ್ತೇ ಇದೆ. ಇದು ತನ್ನ ಇಲೆಕ್ಟ್ರಾನನ್ನು ಸುಲಭವಾಗಿ ಬಿಟ್ಟು ಬಿಡುತ್ತದೆ ಮತ್ತು ಧನ ಆವೇಶ ಹೊಂದಿರುವ ಅಯಾನು (H+) ಆಗುತ್ತದೆ. ಆದ್ದರಿಂದ ಹೈಡ್ರೋಜನ್ ನ ಅಯಾನು ಪ್ರೋಟೀನ್ ನಂತೆಯೇ ಇರುತ್ತದೆ. ಹೀಗಾಗಿ ಆಮ್ಲವು ಪ್ರೋಟಾನನ್ನು ಬಿಡುಗಡೆ ಮಾಡುವ ವಸ್ತುವಾಗಿದೆ ಎಂಬುದನ್ನು ನೀವು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು.

ಆದರೆ ಪ್ರತ್ಯಾಮ್ಲವು ಆಮ್ಲಕ್ಕೆ ವಿರುದ್ಧವಾಗಿ ಪ್ರತಿಕ್ರಿಯಿಸುವುದರಿಂದ ಹೈಡ್ರೋಜನ್ ನ ಅಯಾನು ಅಥವಾ ಪ್ರೋಟಾನನ್ನು ಸ್ವೀಕರಿಸುವ ಯಾವುದೇ ವಸ್ತುವನ್ನು ಪ್ರತ್ಯಾಮ್ಲ ಎನ್ನಬಹುದು. ಪ್ರತ್ಯಾಮ್ಲವನ್ನು ಸಾಮಾನ್ಯವಾಗಿ ಹೈಡ್ರಾಕ್ಸಿಲ್ ಗುಂಪು ಅಥವಾ (OH-) ಇರುವ ವಸ್ತು ಎಂದು ಕರೆಯಬಹುದು. ಏಕೆಂದರೆ ಹೈಡ್ರಾಕ್ಸಿಲ್ ಗುಂಪು ನೀರನ್ನು ರೂಪಿಸಲು ಜಲಜನಕದ ಅಯಾನುಗಳ ಜೊತೆ ಸುಲಭವಾಗಿ ಪ್ರತಿಕ್ರಿಯಿಸುತ್ತದೆ.

ಆಮ್ಲಗಳಲ್ಲಿ ದುರ್ಬಲ ಮತ್ತು ಪ್ರಬಲ ಎಂಬ ವಿಧಗಳಿವೆ. ಎಲ್ಲಾ ಆಮ್ಲಗಳು ಪ್ರಬಲ ಆಮ್ಲವೇ ಆಗಿರುತ್ತಿದ್ದರೆ, ನಾವು ಆರೆಂಜ್, ಲಿಂಬೆ, ದ್ರಾಕ್ಷಿ ಮೊದಲಾವುಗಳನ್ನು ಬಳಸಲೇ ಆಗುತ್ತಿರಲಿಲ್ಲ. ಏಕೆಂದರೆ ಬಹಳಷ್ಟು ಹಣ್ಣುಗಳಲ್ಲಿ ಹುಳಿ ನೀಡುವ ಆಮ್ಲೀಯ ವಸ್ತುಗಳು ಇವೆ. ಆ ಆಮ್ಲಗಳು ಯಾವುದೇ ಜೀವಹಾನಿಯನ್ನು ಮಾಡುವುದಿಲ್ಲವಾದರೂ ಖಾಲಿ ಹೊಟ್ಟೆಯಲ್ಲಿ ಆಮ್ಲ ಇರುವ ಹಣ್ಣುಗಳನ್ನು ತಿನ್ನುವುದು ಒಳ್ಳೆಯದಲ್ಲ ಎನ್ನುತ್ತಾರೆ. ಕೆಲವು ಆಮ್ಲಗಳು ನಾವು ತಿನ್ನುವ ಆಹಾರಕ್ಕೆ ವಿಶೇಷ ಸುಗಂಧವನ್ನು ನೀಡುತ್ತವೆ. ವಾಹನದ ಬ್ಯಾಟರಿಗಳಲ್ಲಿರುವ ಆಮ್ಲಗಳು ಮಾತ್ರ ತುಂಬಾ ಪ್ರಬಲವಾದುವುಗಳು. ಇವುಗಳ ತಂಟೆಗೆ ಮಾತ್ರ ಹೋಗಬೇಡಿ. ನಿಮ್ಮ ಚರ್ಮವನ್ನೇ ಸುಟ್ಟು ಬಿಡುವಂತಹ ಪ್ರಬಲ ಗಂಧಕಾಮ್ಲದಂತಹ ವಸ್ತುಗಳನ್ನು ಅವುಗಳು ಹೊಂದಿವೆ. 

(ಮಾಹಿತಿ ಕೃಪೆ: ಸುಮನಾ ಕೃಷ್ಣ ಗಾಂವ್ಕರ್)

ಚಿತ್ರ ಕೃಪೆ: ಅಂತರ್ಜಾಲ ತಾಣ