ಗಾಲ್ಭ್ ಬಾಲ್
ಇಬ್ಬರು ಉದ್ಯೋಗಪತಿಗಳು ಅಂದಿನ ಗಾಲ್ಫ್ ಪ್ರಾಕ್ಟೀಸ್ ಗೆ ತಯಾರಾಗುತ್ತಿದ್ದರು. ಗಾಂಪ ಅದೇ ಕ್ರೀಡಾಂಗಣದ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ಇವರಿಬ್ಬರೂ ಆಡೋಕೆ ತಯಾರು ಮಾಡುತ್ತಿರುವುದನ್ನು ನೋಡಿ, ಅವರ ಬಳಿ ಬಂದು ಸರ್, ನನ್ನ ಬಳಿ ಒಂದು ವಿಶೇಷವಾದ ಬಾಲ್ ಇದೆ. ಬೇಕಾ ಅಂತ ಕೇಳಿದ. ಅದಕ್ಕೆ ಅವರು ಗಾಲ್ಭ್ ಬಾಲ್ ನಲ್ಲಿ ಏನು ವಿಶೇಷ ಇರುತ್ತದೆ? ಅಂತ ಆಶ್ಚರ್ಯ ಪಟ್ಟುಕೊಂಡೇ ಗಾಂಪನಿಂದ ಬಾಲ್ ತೆಗೆದುಕೊಂಡು ನೋಡಿದರು. ಅದರಲ್ಲಿ ಅವರಿಗೆ ವಿಶೇಷ ಏನೂ ಕಾಣಿಸಲಿಲ್ಲ. ಮಾಮೂಲಿ ಬಾಲ್ ತರಹನೇ ಇತ್ತು. ಅದಕ್ಕೆ ಇಬ್ಬರೂ ಮುಖ ಮುಖ ನೋಡಿಕೊಂಡು ಮತ್ತೆ ಗಾಂಪ ಮುಖ ನೋಡಿ ಕೇಳಿದರು. ‘ಎಲ್ಲಾ ಬಾಲ್ ಥರಾನೇ ಇದೆಯಲ್ಲಪ್ಪಾ, ಇದರಲ್ಲಿ ವಿಶೇಷ ಏನು ಬಂತು?’ ಅದಕ್ಕೆ ಗಾಂಪ ಹೇಳಿದ ‘ಸರ್, ನೋಡೋಕೆ, ಮಾಮೂಲಾಗಿಯೇ ಇದೆ. ಆದರೆ ಇದರ ವಿಶೇಷ ಏನು ಅಂದ್ರೆ, ಇದು ಏನು ಮಾಡಿದರೂ ಕಳೆದೇ ಹೋಗದ ಬಾಲ್ ಅಂದ. ಇಬ್ಬರೂ ಅದು ಹೆಂಗೆ ಅಂತ ಕೇಳಿದ್ರು. ಅದಕ್ಕೆ ಮುಂದುವರಿದ ಗಾಂಪ, ನೋಡಿ ಸರ್, ಇದು ಎಲ್ಲಾದರೂ ಪೊದೆಯೊಳಗೆ ಬಿದ್ದರೆ ಬೀಪ್ ಬೀಪ್ ಅಂದ ಸದ್ದು ಮಾಡುತ್ತೆ, ನೀರಿನಲ್ಲಿ ಬಿದ್ದರೆ ಗುಳ್ಳೆಗಳನ್ನು ಹೊರಡಿಸುತ್ತೆ. ಬೆಂಕಿಯಲ್ಲಿ ಬಿದ್ದರೆ ಸುಡೋದಿಲ್ಲ, ಅಲ್ಲಿಂದಲೇ ಬೇರೆ ಬೇರೆ ಬಣ್ಣದ ಬೆಂಕಿಯನ್ನು ಹೊರಡಿಸುತ್ತೆ. ಹಾಗಾಗಿ ಬಾಲ್ ಹುಡುಕಿಕೊಂಡು ಹೋಗೋದು ಸುಲಭ ಆಗುತ್ತೆ. ಕಳೆದು ಹೋಗೋ ಚಾನ್ಸೇ ಇಲ್ಲ’ ಅಂದ. ಈ ಮಾತನ್ನು ಕೇಳಿ ಇಬ್ಬರೂ ತುಂಬಾ ಖುಷಿ ಪಟ್ಟು, ಆ ಬಾಲ್ ಅನ್ನು ದೊಡ್ದ ಮೊತ್ತದ ಹಣ ನೀಡಿ ಖರೀದಿ ಮಾಡಿದರು. ಬಾಲ್ ಕೊಟ್ಟು ಹಣ ತೆಗೆದುಕೊಂಡು ಹೊರಟ ಗಾಂಪನನ್ನು ಇನ್ನೊಬ್ಬ ಉದ್ಯೋಗಪತಿ ದೂರದಿಂದಲೇ ಕೇಳಿದ, ಅಲ್ಲಾ, ಗಾಂಪ ಈ ಬಾಲ್ ನಿಂಗೆ ಎಲ್ಲಿ ಸಿಕ್ಕಿತು? ಅದಕ್ಕೆ ಗಾಂಪ ಅಲ್ಲಿಂದಲೇ ತಿರುಗಿ ನೋಡಿ ಕೂಲಾಗಿ ಹೇಳಿದ, ಯಾರೋ ಕಳೆದುಕೊಂಡಿದ್ರು ಅನಿಸುತ್ತೆ. ಹೀಗೇ ಎಲ್ಲೋ ಸಿಕ್ತು ಸರ್!
***
ಮರಣದ ದಿನಾಂಕ
ಹಿಟ್ಲರ್ ಧಾರ್ಮಿಕ ಮನುಷ್ಯ ಆಗಿರದೇ ಇದ್ದರೂ ಜ್ಯೋತಿಷಿಗಳ ಮಾತನ್ನು ನಂಬುತ್ತಿದ್ದ. ಅದೊಂದು ದಿನ ಅವನು ತನ್ನ ನಂಬಿಕಸ್ಥ ಜ್ಯೋತಿಷಿಗಳ ಎದುರು ಕೂತು ಪ್ರಶ್ನೆಗಳನ್ನು ಎಸೆಯುತ್ತಿದ್ದ. “ಸ್ವಾಮಿ, ನಾನು ಈ ಯುದ್ಧದಲ್ಲಿ ಸೋಲುವ ಸಾಧ್ಯತೆ ಇದೆಯಾ?” ಕೇಳಿದ ಹಿಟ್ಲರ್. “ಹೌದು" ಎಂಬ ಉತ್ತರ ಬಂತು.
ತುಸು ಹೊತ್ತಿನ ಮೌನದ ಬಳಿಕ ಎರಡನೇ ಪ್ರಶ್ನೆಯನ್ನು ಕೇಳಿದ “ಈ ಯುದ್ಧದಲ್ಲಿ ನಾನು ಸಾಯುವ ಸಂಭವ ಉಂಟಾ?” ಅದಕ್ಕೂ ಹೌದೆಂಬ ಉತ್ತರವೇ ಬಂದಾಗ ಆತ ಸ್ವಲ್ಪ ವಿಚಲಿತನಾದಂತೆ ಕಂಡು ಬಂತು.
ಮತ್ತಷ್ಟು ಮೌನದ ಬಳಿಕ ಮೂರನೇ ಪ್ರಶ್ನೆ ಕೇಳಿದ. “ನಾನು ಯಾವ ದಿನ ಸಾಯುತ್ತೇನೆ ಜ್ಯೋತಿಷಿಗಳೇ?”
ನೀನು ಯಹೂದಿಗಳ ರಜಾದಿನದಂದು ಸಾಯುವೆ ಹಿಟ್ಲರ್ !” ಜ್ಯೋತಿಷಿಗಳು ಉತ್ತರ ಕೊಟ್ಟರು.
“ಆದರೆ, ಯಾವ ರಜಾದಿನ? ಸರಿಯಾಗಿ ಹೇಳಿ" ಹಿಟ್ಲರ್ ಒತ್ತಾಯಿಸಿದ. ಜ್ಯೋತಿಷಿಗಳು ಹೇಳಿದರು “ ಯಾವ ರಜಾದಿನ ಎಂಬ ಚಿಂತೆ ನಿನಗೆ ಬೇಡ ಹಿಟ್ಲರ್. ನೀನು ಯಾವಾಗ ಸತ್ತರೂ ಅದು ಯಹೂದಿಗಳಿಗೆ ರಜಾದಿನವೇ!”
***
ಟೀಚರ್ ಪಾಸಾಗಿಲ್ಲ !
ಶಿಕ್ಷಕರು: ಗಾಂಪ, ಯಾಕೋ ಮುಖ ಸಪ್ಪಗೆ ಮಾಡಿಕೊಂಡು ಹೋಗುತ್ತಿದ್ದೀಯಾ? ನಾಲ್ಕನೇ ತರಗತಿ ಫಲಿತಾಂಶ ಬಂದಿದೆಯಲ್ಲಾ? ಪಾಸಾಗಿರುವೆಯಲ್ಲಾ?
ಗಾಂಪ: ಪಾಸ್ ಆಗಿದ್ದೀನಿ ಸರ್, ಆದರೂ ಬೇಜಾರಾಗುತ್ತಿದೆ.
ಶಿಕ್ಷಕರು: ಪಾಸ್ ಆದ ಮೇಲೆ ಬೇಜಾರ್ ಯಾಕೋ?
ಗಾಂಪ: ಅದಕ್ಕಲ್ಲ ಸರ್, ನಮ್ಮ ಗುರುಗಳು ಪಾಸಾಗಿಲ್ಲ.
ಶಿಕ್ಷಕರು: ಏನೋ ಹಾಗಂದ್ರೆ?
ಗಾಂಪ: ನಾನು ನಾಲ್ಕನೇ ತರಗತಿ ಪಾಸ್ ಆಗಿ ಐದನೇ ತರಗತಿಗೆ ಬಂದ್ರೂ ನಮ್ಮ ಗುರುಗಳು ಮಾತ್ರ ಇನ್ನೂ ನಾಲ್ಕನೇ ತರಗತಿಯಲ್ಲೇ ಪಾಠ ಹೇಳ್ತಾ ಇದ್ದಾರೆ ಸರ್ !
***
ಏನು ನೋಡಿ ಹೇಳಿದೆ?
ಶಿಕ್ಷಕರು: ಇಂದು ಇಂಗ್ಲೀಷ್ ನಲ್ಲಿ ಕೇಳುವ ಪದಗಳಿಗೆ ಕನ್ನಡದಲ್ಲಿ ಅರ್ಥ ಹೇಳಬೇಕು.
ವಿದ್ಯಾರ್ಥಿಗಳು: ಆಗಲಿ ಸರ್
ಶಿಕ್ಷಕರು: ಮಂಕಿ ಇದು ಇಂಗ್ಲೀಷ್ ಪದ. ಇದಕ್ಕೆ ಕನ್ನಡದಲ್ಲಿ ಏನಂತಾರೆ?
ಗಾಂಪ: ಮಂಗ ಸರ್!
ಶಿಕ್ಷಕರು: ಗಾಂಪ, ನೀನು ಪುಸ್ತಕ ನೋಡಿ ಹೇಳಿದ್ದಾ?
ಗಾಂಪ: ಇಲ್ಲ ಸರ್, ಪುಸ್ತಕ ನೋಡಿಲ್ಲ ಸರ್
ಶಿಕ್ಷಕರು: ಮತ್ತೆ ಏನು ನೋಡಿ ಹೇಳಿದೆ? ಬೇಗ ಹೇಳು
ಗಾಂಪ: ನಿಮ್ಮ ಮುಖ ನೋಡಿ ಹೇಳಿದೆ ಸರ್ !
***
ನೀತಿ !
ಗಾಂಪ ಮತ್ತು ಶ್ರೀಮತಿ ಜಗಳ ತಾರಕಕ್ಕೇರಿತ್ತು…
ಶ್ರೀಮತಿ: ನಿಮ್ಮನ್ನು ಕಟ್ಟಿಕೊಂಡು ದೊಡ್ಡ ತಪ್ಪು ಮಾಡಿದೆ. ಒಂದು ದಿನವೂ ಸುಖ ಕಾಣಲಿಲ್ಲ.
ಗಾಂಪ: ನೀನು ತುಂಬಾ ಸುಂದರವಾಗಿದ್ದೀಯ.. ಅದಕ್ಕೇ ನಿನಗೆ ಜಂಬ.
ಜಗಳವನ್ನು ಕೂಡಲೇ ನಿಲ್ಲಿಸಿದ ಶ್ರೀಮತಿ ಒಳಗೆ ಹೋಗಿ ಎರಡು ಮೂರು ಬಾರಿ ಕನ್ನಡಿ ನೋಡಿ ಬಂದಳು. ಗಂಡನಿಗೆ ಕಾಫಿ ಜೊತೆ ಮಸಾಲೆ ದೋಸೆ, ಕೇಸರಿ ಬಾತ್ ಸಹ ಮಾಡಿ ತಿನ್ನಿಸಿದಳು.
ನೀತಿ: ರೋಗದ ವಿರುದ್ಧ ಹೋರಾಡಬೇಕೇ ಹೊರತು ರೋಗಿಯ ವಿರುದ್ಧ ಅಲ್ಲ. !
(ಸಂಗ್ರಹ)
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!