ಸವಾಲುಗಳ ಮೆಟ್ಟಿ ನಿಂತ ಧೀರೆಯಿವಳು

ಹಾದಿಯ ಕಲ್ಲುಮುಳ್ಳುಗಳ

ಕ್ರಮಿಸಿದವಳು

ಕೆಣಕಿದ ಬಾಯಿಗಳಿಗೆ ಉತ್ತರ ನೀಡಿದವಳು

 ಹೀಯಾಳಿಸಿ ವ್ಯಂಗ್ಯವಾಡಿದ ಮುಖಗಳ ಬೆವರಿಳಿಸಿದವಳು

 

ಸಂಸಾರ ಬಂಧನದಲಿ ಸಿಲುಕಿ ನಲುಗಿದವಳು

ಬೆದರದೆ ಬೆಚ್ಚದೆ ಸೆಟೆದು ನಿಂತವಳು

ಹಿರಿಯರನು ಗೌರವಿಸಿ ಉಪಚರಿಸಿದವಳು

ಕರುಳ ಕುಡಿಗಳಿಗೆ ಸನ್ಮಾರ್ಗ ತೋರಿದವಳು

 

ತನ್ನ ಮನವ ಅರಿಯದವರ ನಡುವೆಯೇ ಬದುಕುವವಳು

ಹಿಡಿ ಪ್ರೀತಿಗಾಗಿ ಹಾತೊರೆಯುತಿರುವವಳು

ಎದೆಗಟ್ಟಿ ಮಾಡಿದ ಭಾರತದ ನಾರಿಯಿವಳು

ಮಗಳು ಸೋದರಿ ಮಮತೆಯ ತಾಯಾಗಿ ಬೆಳಗುವವಳು

 

ಮನೆಯ ಒಳಹೊರಗಿನ ಜವಾಬ್ದಾರಿ ಹೊತ್ತವಳು

ಮನೆಯ ಬೆಳಕಿನ ಆನಂದ ಜ್ಯೋತಿಯಿವಳು

ಆಕೆ ಕೇವಲ ‌ಸರಕಲ್ಲ ಜನ್ಮ ನೀಡಿದವಳು

ಎದೆಯ ಅಮೃತ ನೀಡಿ ಪೊರೆದ ದೇವತೆಯಿವಳು

 

ಬುವಿಯಿಂದ ಬಾನಿಗೆ ಹಾರಲು ಅಂಜದವಳು

ಯಂತ್ರಗಳ ನಡುವೆ  ಯಂತ್ರವಾದವಳು

ನಾಲ್ಕುಗೋಡೆಯ ಸೀಳಿ ಹೊರಬಂದವಳು

ಪುರುಷನ ಬಾಳಿನ ಹೊನ್ನು ಹಾಸಿನ ರತ್ನದಂಥವಳು

-ರತ್ನಾ ಕೆ.ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ