ಜೀವನದ ಪ್ರತಿ ಹಂತದಲ್ಲೂ ಒಂದಲ್ಲ ಒಂದು ಅಡೆತಡೆಗಳನ್ನು  ನಾವು ದಿನ ನಿತ್ಯ ಕಾಣುತ್ತೇವೆ. ಈ ಕಾಲವೆಂಬ  ಕ್ಷಣಿಕ ಮಾಂತ್ರಿಕನ ಜೊತೆಗೆ ಕಳೆಯುವ ಪ್ರತಿ ಕ್ಷಣ, ಘಳಿಗೆ ಅದೆಷ್ಟು ಬೇಗ ನಮ್ಮಿಂದ ಸರಿದು ದೂರ ಸಾಗುವುದು.ಕಳೆದು ಹೋದ ಕಾಲ ಮತ್ತೆ ಬಾರದು ಎಂಬ ಸತ್ಯ ಅರಿವಾಗುವುದರ ಒಳಗಾಗಿ ನಮ್ಮನ್ನು ನಾವು ಪ್ರೀತಿಸುವುದನ್ನು ಮರೆತೇ ಬಿಡುತ್ತೇವೆ.ನಮ್ಮ ಸಮಯ,ಪ್ರೀತಿ,ಕಾಳಜಿಯನ್ನು ನಾವು ಅತಿಯಾಗಿ ಪ್ರೀತಿಸುವ ಜೀವಕ್ಕೆ ಮೀಸಲಾಗಿಡುತ್ತೇವೆ ಯಾರಿಗಾಗಿ ಈ ಬದುಕು? ಹೀಗೊಂದು ಸಾಮಾನ್ಯ ಪ್ರಶ್ನೆ ನಮ್ಮನ್ನು ನಾವು ಕೇಳಿಕೊಂಡಾಗ ಒಬ್ಬೊಬ್ಬರಿಂದ ಒಂದೊಂದು ಉತ್ತರ ನಿರೀಕ್ಷಿಸಬಹುದು. ತನ್ನ ಪತಿಗಾಗಿ,ಮಕ್ಕಳಿಗಾಗಿ, ತನ್ನ ತಂದೆ ತಾಯಿಗಾಗಿ ಹೀಗೆ ಹಲವಾರು ಉತ್ತರ ಬರುವುದು. ಜೀವನದ ಮುಸ್ಸಂಜೆ ಬರುವವರೆಗೂ ತನಗಾಗಿ ತಾನು ಬದುಕಬೇಕು ಎಂಬುವುದು ಅರಿವಾಗುವುದೇ ಇಲ್ಲ. 

ಕಾಲದೊಂದಿಗೆ ಬದಲಾಗುವ ಆದ್ಯತೆಗಳು: ಒಂದು ಪುಟ್ಟ ಮಗುವನ್ನು ನಿನಗೆ ಯಾರು ಇಷ್ಟ? ಎಂದು ಕೇಳಿದರೆ ಮಗು ಅಪ್ಪ, ಅಮ್ಮ ಎಂದು ಹೇಳಬಹುದು.ಮುಂದೆ ದೊಡ್ಡವರಾಗಿ ತನ್ನ ಜೀವನ ಕಟ್ಟಿಕೊಂಡ  ಬಳಿಕ ಇದೇ ಪ್ರಶ್ನೆ ಕೇಳಿದರೆ ಆಗ ಉತ್ತರ ಬದಲಾಗಬಹುದು. ಆ ಸ್ಥಾನ ಬೇರೊಬ್ಬರ ಪಾಲಾಗುತ್ತದೆ. ತನ್ನ ಪತಿ, ತನ್ನ ಮಗು ಎನ್ನುವ ಉತ್ತರ.ನಮ್ಮ ಪ್ರೀತಿ, ನಮ್ಮ ಆದ್ಯತೆಗಳು, ನಮ್ಮ ನಿರೀಕ್ಷೆಗಳು, ನಮ್ಮ ಆಯ್ಕೆಗಳು ಆಗಾಗ ಬದಲಾಗುವ ಪಾತ್ರಗಳು. ನಮ್ಮ ಖುಷಿಗಿಂತ ನಮ್ಮವರ ಖುಷಿ, ಪ್ರೀತಿ ದೊಡ್ಡದಾಗಿ ಕಾಣಿಸುತ್ತದೆ. ಅಂದರೆ ನಮ್ಮ ಖುಷಿ, ನಮ್ಮಿಷ್ಟದ ವಸ್ತುಗಳು ನಿಧಾನವಾಗಿ ನಮ್ಮಿಂದ ದೂರ ಸರಿದು ಹೋಗುತ್ತಿರುವುದು ನಮ್ಮ ಗಮನಕ್ಕೆ ಬರುವುದೇ ಇಲ್ಲ. 

ದೂರವಾದಂತೆ ಹಿಂದೆ ಸರಿಯುವ ನೆನಪುಗಳು: ಸಮಯ ಹಾಗೂ ಪರಿಸ್ಥಿತಿಗಳಿಗೆ ಅನುಗುಣವಾಗಿ ನಮ್ಮ ಜೀವನದಲ್ಲಿ ನಮ್ಮ ಇಷ್ಟದ ವಸ್ತುಗಳು ಹೇಗೆ ಮೂಲೆ ಸೇರುತ್ತದೆ ಎನ್ನುವುದಕ್ಕೆ ಹೀಗೊಂದು ಪುಟ್ಟ ಹುಡುಗನ ಕಥೆ ನೆನಪಾಗುತ್ತದೆ. ಆತನಿಗೆ ಕ್ಯಾಮರಾ ಅಂದರೆ ಅಚ್ಚುಮೆಚ್ಚು. ತನ್ನ ಎದುರೇ ಕಾಣುವಂತೆ ಮೇಜಿನ ಮೇಲೆ ಇರಿಸಿ, ದಿನಕ್ಕೆ ಹತ್ತಾರು ಬಾರಿ ಅದನ್ನು ಸವರಿ ಕೆಲವು ಫೋಟೋ ತೆಗೆದು ಅದನ್ನು ನೋಡುವುದೇ ಒಂದು ರೀತಿಯ ಖುಷಿ ಕೊಡುತ್ತಿತ್ತು. ಹೀಗೆ ದಿನಕಳೆದಂತೆ ಆ ಕ್ಯಾಮರ ಬಹಳ ಆಪ್ತವಾಯಿತು, ಅದೇ ಜಗತ್ತಾಯಿತು. ಕೆಲವು ವರ್ಷಗಳ ಬಳಿಕ ಆತನಿಗೆ ಮದುವೆಯಾಯಿತು. ತನ್ನ ಕ್ಯಾಮರ ಇಡುವ ಜಾಗ ಪತ್ನಿಯ ಅಲಂಕಾರಿಕ ವಸ್ತುಗಳನ್ನು ಇಡುವ ತಾಣವಾಯಿತು. ನಿಧಾನವಾಗಿ ಕ್ಯಾಮರಾ ಕಪಾಟಿನ ಒಂದು ಮೂಲೆ ಸೇರಿಕೊಂಡಿತು. ತನ್ನ ಮೊದಲ ಆಯ್ಕೆಯೂ ಬದಲಾಯಿತು. ಇನ್ನಷ್ಟು ದಿನಗಳ ಬಳಿಕ ತನ್ನ ಮಕ್ಕಳ ಆಟಿಕೆ, ಬಟ್ಟೆಗಳು ಆ ಜಾಗವನ್ನು ಆಕ್ರಮಿಸಿ ಕಪಾಟಿನ ಮೂಲೆಯಲ್ಲಿರುವ ಕ್ಯಾಮರ ಈಗ ಪೆಟ್ಟಿಗೆ ಸೇರಿ ಅಟ್ಟವನ್ನು ಸೇರಿತು. ಆದ್ಯತೆಗಳು ಮತ್ತೆ ಬದಲಾಯಿತು. ನನ್ನ ಇಷ್ಟವಾದ ಅಪ್ಪ, ಅಮ್ಮನ ಹೆಸರು ಈಗ  ಬದಲಾಗಿ ಪತ್ನಿ ಮಕ್ಕಳಿಗಾಗಿ ಎಂದು ಬದಲಾಯಿತು. ತನ್ನ ಅತ್ಯಂತ ಆಪ್ತವಾದ ಕ್ಯಾಮರಾ ಸದ್ದಿಲ್ಲದೇ ಮೂಲೆ ಸೇರಿತು. ಇದು ಕೇವಲ ಈ ಹುಡುಗನೊಬ್ಬನ ಕಥೆಯಲ್ಲ. ನಮ್ಮ, ನಿಮ್ಮ ಜೀವನದ ಕಥೆಯೂ ಹೌದು. ಪ್ರತಿಯೊಬ್ಬರ ಬದುಕಿನ ನಿತ್ಯ ಸತ್ಯವೂ ಹೌದು. ನಮ್ಮ ಇಷ್ಟದ ವ್ಯಕ್ತಿ, ವಸ್ತು ನಿಧಾನವಾಗಿ ದೂರವಾಗುವುದು. ಇವತ್ತು ಯಾರು ನಮ್ಮ ಜೊತೆಗಿದ್ದಾರೆ ಅಂದು ಕೊಳ್ಳುತ್ತೇವೋ ನಾಳೆ ಅದು ಬದಲಾಗಬಹುದು. ಈ ಕ್ಷಣ, ಈ ದಿನ ಬದಲಾಗುವ ಗಡಿಯಾರದ ಮುಳ್ಳಿನಂತೆ, ತಿರುವು ಹಾಕುವ ಕ್ಯಾಲೆಂಡರ್ ನ ಹಾಳೆಗಳಂತೆ. ಬದಲಾವಣೆಗೆ ನಾವು ಒಗ್ಗಿಕೊಳ್ಳಬೇಕು ಅಥವಾ ನಾವೇ ಬದಲಾಗಬೇಕು. ಕಾಲ ಸರಿದಂತೆ ಆದ್ಯತೆಗಳು ಆಯ್ಕೆಗಳಾಗಿ ಬದಲಾಗಬಹುದು. ಹೀಗಾಗಿ ಮೊದಲು ನಮ್ಮನ್ನು ನಾವು ಪ್ರೀತಿಸಲು ಕಲಿಯಬೇಕು. ಮುಂದೆ ಯಾರ ಮುಂದೆಯೂ ಕೈ ಚಾಚದೇ ಇರಲು ನಮ್ಮ ಭವಿಷ್ಯಕ್ಕಾಗಿ ಕೂಡಿಡಲು ಕಲಿಯಬೇಕು.

ನಮಗಾಗಿ ನಾವು: ತನ್ನನ್ನು ತಾನು ಪ್ರೀತಿಸಲು ಕಲಿತವನು ಇಡೀ ಜಗತ್ತನ್ನೇ ಪ್ರೀತಿಸಲು ಕಲಿಯುವನು. ಆದರೆ ತನ್ನ ಕಣ್ಣನ್ನು ತಾನೇ ಮುಚ್ಚಿ ತನಗೇನೂ ಕಾಣಿಸದು ಎನ್ನುವ ಕುರುಡು ಮನಸ್ಥಿತಿ ನಮ್ಮದು. ತನ್ನಿಂದ ಏನು ತಾನೇ ಮಾಡಲು ಸಾಧ್ಯ? ತನಗಿಂತ ಶಕ್ತಿಶಾಲಿಗಳು, ಸಿರಿವಂತರು, ಧೈರ್ಯಶಾಲಿಗಳು ಇರುವಾಗ ತಾನೇನೇ ಮಾಡಿದರೂ ವ್ಯರ್ಥ ಎನ್ನುವ ಸಂಕುಚಿತ ಮನಸ್ಥಿತಿಯಿಂದಲೇ ನಾವು ಸೋಲುವುದು. ಕೆಲವೊಮ್ಮೆ ನಮ್ಮೊಳಗಿನ ಅಗಾಧ ಶಕ್ತಿಯ ಅರಿವು ನಮಗಿರುವುದಿಲ್ಲ. ನಮ್ಮ ಸಾಮರ್ಥ್ಯದ ಮೇಲೆ ನಂಬಿಕೆಯೂ ಇರುವುದಿಲ್ಲ. ನಮ್ಮ ಕನಸುಗಳಿಗೆ ನಾವೇ ರೆಕ್ಕೆಯಾದಾಗ, ನಮ್ಮ ನಿರೀಕ್ಷೆಗಳಿಗೆ ನಾವೇ ಉತ್ತರ ಕಂಡುಕೊಂಡಾಗ, ನಮಗೆ ನಾವೇ ಬೆಳಕಾದಾಗ, ನಮಗೆ ನಾವೇ ಪ್ರೇರಣೆಯಾದಾಗ ಈ ಬದುಕು ಸುಂದರ. ಬದುಕಿನ ಕಟ್ಟ ಕಡೆಯ ಘಟ್ಟ ಸಾವಿನಲ್ಲೂ ನಮಗೆ ನಾವೇ ಜೊತೆಗಾರರು ಎನ್ನುವ ಸತ್ಯ ನಮ್ಮ ಅರಿವಿಗೆ ಬಂದರೆ ನಮಗೆ ನಾವೇ ಶಕ್ತಿ ಯಾಗಬೇಕು ಎನ್ನುವ ಅರಿವು ಮೂಡುವುದು. ಜಗತ್ತನ್ನು ಪ್ರೀತಿಸುವ ಮೊದಲು ನಮ್ಮನ್ನು  ನಾವು ಪ್ರೀತಿಸುವುದನ್ನು ಕಲಿಯೋಣ.ಅಲ್ಲವೇ?

-ಪ್ರಜ್ವಲಾ ಶೆಣೈ, ಕಾರ್ಕಳ

ಚಿತ್ರ ಕೃಪೆ: ಇಂಟರ್ನೆಟ್ ತಾಣ