ಸ್ಮರಣಾದರುಣಾಚಲ…
“...ಕಾಶ್ಯಾಂತು ಮರಣಾನ್ಮುಕ್ತಿಃ
ಸ್ಮರಣಾದರುಣಾಚಲ…”
‘ಮುಕ್ತಿ’ಯೆಂದರೆ ಜನನ-ಮರಣಗಳ ಶೃಂಖಲೆಯ
ಕಡಿದು ಹಾಕುವ ದಿವ್ಯವಾದ ಅಸ್ತ್ರ
‘ಮುಕ್ತಿ’ಯೆಂದರೆ ಮನದ ಕಾಮನೆಗಳನು ತುಳಿದು
ಮೆಟ್ಟಿ ಹಾಕುವ ಭವ್ಯವಾದ ಶಸ್ತ್ರ !
ಹಲವು ಯೋಚನೆಗಳನು ಮೆಲಕು ಹಾಕುವ ಮನಕೆ
ನಿಲುಗಡೆಯ ಪಥವೊಂದು ಇರಬೇಡವೇ?
ಒಂದು ಯೋಚನೆಯ ಬಿಡಲಿನ್ನೊಂದು ಯೋಚನೆಯ
ಸರಪಳಿಗೆ ಸಿಲುಕಿದರೆ ಅದು ಸಾಧ್ಯವೇ?
ಯೋಚನೆಗಳಿಲ್ಲದಿರೆ ಮನಸ್ಸಿಗೆಲ್ಲಿದೆ ಕೆಲಸ
ಯೋಚನೆಯೆ ಮನಸಿಗಾಹಾರ ತಾನೆ?
ಯೋಚನೆಗಳನು ಜಯಿಪ ಸಾಮರ್ಥ್ಯ ಮನಸಿಗಿದೆ
ಮನಸು ಮನಸನು ಗೆದ್ದುಕೊಂಡ ಮೇಲೆ !
ಮನವ ಗೆಲುವ ಮನವದೊಂದು
ನಮಗೆ ಬೇಕಿದೆ ;
ಮನವ ಗೆಲಿಸಿ ಮನವನೊಲಿಸಿ -
ಕೊಳ್ಳಬೇಕಿದೆ !
***
ಗೆಳೆಯನೊಬ್ಬ ಬೇಕು
ಒಳಗಿನಳಲ ತೋಡಿಕೊಳಲು
ಗೆಳೆಯನೊಬ್ಬ ಬೇಕು
ಅಳಲನಳಿಸಿಕೊಳಲು ಕೆಳೆಯ
ಸೆಳಕು ಸಾಕು-ಸಾಕು !
ಮಿತ್ರಭಾವದನುಪಮೇಯ
ಚಿತ್ರ ಮನದಿ ಮೂಡೆ
ಚಿತ್ರ ಜೀವ ತಳೆದುಕೊಂಡು
ಚಿತ್ತಪಟಲ ಊಡೆ !
ಸಖ್ಯ ಸುಖದಲಭ್ಯ ಮುಖದ
ಮುಖ್ಯವಾದ ಸೃಷ್ಟಿ ;
ಮಿಕ್ಕ ವಿಷಯಗಳನು ಬಿಟ್ಟು
ನಿಖರವಾದ ದೃಷ್ಟಿ !
ಸ್ನೇಹ-ಸಮತೆಯೊಲುಮೆಗಳಿಗೆ
ಜೀವಕಳೆಯ ಚಿಲುಮೆ ;
ಭಾವಪೂರ್ಣ ಬಂಧನಗಳ
ಸಾವಕಾಶದೊಲುಮೆ !
ಒಳಗಿನಳಲ ತೋಡಿಕೊಳಲು
ಗೆಳೆಯನೊಬ್ಬ ಬೇಕು ;
ಅಳಲನಳಿಸಿ ಒಲವನುಳಿಸಿ-
ಕೊಳಲು ಕೆಳೆಯ ಬೇಕು !
***
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!