"ಸು ಫ್ರಂ ಸೋ" ಚಿತ್ರ ತುಳುನಾಡ ಮಧ್ಯಮ ವರ್ಗದ ಶೂದ್ರ ಜನಾಂಗದ ಮನೆ ಕಥೆ ಅಂತ ಚಲನ ಚಿತ್ರದ ಆರಂಭದಲ್ಲೇ ಅಲ್ಪ ಹೊತ್ತಿನಲ್ಲೇ ಗೊತ್ತಾಗಿ ಬಿಡುತ್ತದೆ! ತೀರಾ ಶಾಖಾಹಾರಿ ಕುಟುಂಬದಲ್ಲಿ ಜನಿಸಿದವರಿಗೋ, ಮಡಿವಂತರಿಗೋ ಅಥವಾ ಕುರಿತಾಗಿ ಬ್ರಾಹ್ಮಣ ಸಮುದಾಯದವರಿಗೋ ಒಂದಷ್ಟು ಗೊಂದಲವಾಗುವ ಸಾಧ್ಯತೆ ತುಂಬಾನೆ ಇದೆ! ಕಾರಣ ಅವರು ಎಂದೂ ಕಂಡಿರದ ಸಮಾಜದ ಇನ್ನೊಂದು ಮುಖವನ್ನು ಅಲ್ಲಿ ಮೊದಲ ಬಾರಿ ನೋಡುತ್ತಾರೆ! ಈ ಚಿತ್ರವನ್ನು ನೋಡಿ ಸಮಾಜದ ಆ ಇನ್ನೊಂದು ಮುಖದ ಪರಿಚಯವನ್ನು ಪಡೆದವರು ಈ ಚಿತ್ರವನ್ನು ಇನ್ನೊಂದು ಬಾರಿ ನೋಡಿ ಆಮೇಲೆ ವಿಮರ್ಶಿಸುವುದಕ್ಕೆ ಲೇಖನಿ ಹಿಡಿಯುವುದು ಒಳ್ಳೆಯದು ಅಂತ ನನ್ನ‌‌”ಭಾವ”ನೆ. 

ತುಳುನಾಡ ದೈವಾರಾಧನೆ, ತುಳುನಾಡ ಮಾಂಸಾಹಾರಿಗಳ ಮನೆಯಲ್ಲಿ ಒಂದು ಸಾವು ಸಂಭವಿಸಿದ ನಂತರದ ಅಲ್ಲಿ ನಡೆಯುವ ಅಪರಕ್ರಿಯೆಗಳ ರೀತಿ ರಿವಾಜು ಹಾಗೂ ಕ್ರಮಗಳ ಬಗ್ಗೆ ಗೊತ್ತಿದ್ದವರು ಚಲನ ಚಿತ್ರದ ಪ್ರತಿಯೊಂದು ನಿಮಿಷವನ್ನೂ ಸಂತೋಷದಿಂದ ಆಸ್ವಾದಿಸುವುದರಲ್ಲಿ ಸಂಶಯವಿಲ್ಲ!

ತುಳುನಾಡ ದೈವಾರಾಧನೆಯಲ್ಲಿ ಇಲ್ಲವಾಗುತ್ತಿರುವ ಶ್ರದ್ಧೆ, ಸಾವಿನ ಮನೆಯಲ್ಲಿನ ಅಪರಕ್ರಿಯೆಯಲ್ಲಿ ಕಂಡುಬರುವ ಅಶಿಸ್ತು, ಭಕ್ತಿಯ ಕೊರತೆ, ರಿವಾಜುಗಳಲ್ಲಿನ ಲೋಪ ದೋಷಗಳು, ಅಸಡ್ಡೆ, ಕ್ರಮಗಳೆಂಬುದು ಬರೇ ಕಾಟಾಚಾರ ಎಂಬ‌ ಸತ್ಯ ವಿಷಯ ಇಲ್ಲಿ ಧ್ವನಿ ಮಾಡುತ್ತದೆ! ಸಾವಿನ‌ ಮನೆಯಲ್ಲೂ ಮದ್ಯದ ಪ್ರಾಬಲ್ಯ, ಮನೆಯಳಿಯನ ಬೇಜವಾಬ್ಧಾರಿತನ, ಇತ್ಯಾದಿ ಇತ್ಯಾದಿಗಳು ನಾವು ನಿತ್ಯ ಅನುಭವಿಸುತ್ತಿರುವ ಸತ್ಯ ಸಂಗತಿಗಳು! ಅವೆಲ್ಲವೂ ವೀಕ್ಷಕರಿಗೆ ರೂಪ ಪಡೆದು ಕಣ್ಮುಂದೆ ಬಂದ ಅನುಭವವಾಗುತ್ತದೆ!

ಮದುವೆ ಎಂಬುದು ಸ್ವರ್ಗದಲ್ಲಿ ನಿರ್ಣಯವಾಗಿ ಎಲ್ಲಿಂದೆಲ್ಲಿಗೋ ಸಂಬಂಧದ ಬೆಸುಗೆ ಹಾಕುವ ಕೆಲಸ ಮಾಡುತ್ತದೆ ಎಂಬುದನ್ನು ಮತ್ತು ಮೈಮೇಲೆ ದೈವದ ಆಕರ್ಷಣೆಯಾಗಿದೆ ಎಂದು ಬಿಂಬಿಸುವ ಹಳ್ಳಿಯ ಜನರ ಅಂತರ್ಯದ ವೇದನೆ ಇವುಗಳನ್ನೆಲ್ಲಾ ಕ್ರೋಢೀಕರಿಸಿ ಎರಡೂಕಾಲು ಗಂಟೆಯಲ್ಲಿ ಟಕ ಟಕ ಟಕ ಟಕ ಅಂತ ಪ್ರೇಕ್ಷಕರಿಗೆ ಉಣಬಡಿಸುವುದು ಸುಲಭದ ವಿಷಯವಲ್ಲ! ಆ ರಸದೌತಣದ ತಯಾರಿಗೆ ದೊಡ್ಡ ತಲೆಗಳೇ ಕೆಲಸ ಮಾಡಿವೆ ಎಂಬುದು ಪ್ರತಿಯೊಬ್ಬ ಪ್ರೇಕ್ಷಕನಿಗೂ ಅರ್ಥವಾಗುತ್ತಾ ಹೋಗುತ್ತದೆ ಕಥೆಯ ಉದ್ದಕ್ಕೂ. 

ಶ್ರೀ ರಾಮಾಯಣ ಕಥೆ ಓದಿ ಯಾರೂ ಕೂಡಾ ರಾವಣನಂತಾಗಲು ಬಯಸುವುದಿಲ್ಲ! ಪ್ರತಿಯೊಬ್ಬರೂ ಶ್ರೀರಾಮನಂತಾಗಲು ಬಯಸುವವರೇ ಅಲ್ಲವೇ?! ಕಥೆಯಲ್ಲಿ ರಾವಣನ ಪಾತ್ರವನ್ನೋ, ಶೂರ್ಪನಖಿಯ ಪಾತ್ರವನ್ನೋ ಅನಾವಶ್ಯಕವಾಗಿ ತುರುಕಿಸಿ ಕಥೆಗೆ ಮೈಲಿಗೆಯಾಯ್ತು ಅಂತ ಹೇಳಿಕೊಂಡು ಯಾರೂ ಕೂಡಾ ರಾಮಾಯಣವನ್ನು ಹಳಿಯುವುದಿಲ್ಲ. ಹಾಗಿರುವಾಗ ಕೆಟ್ಟದೆಲ್ಲವನ್ನೂ, ನೆಗೆಟಿವ್ ಗಳೆಲ್ಲವನ್ನೂ ಅಳೆದು ಸುರಿದು ತಿರಸ್ಕರಿಸಬೇಕು ಅಂತ ಅರ್ಥ ಮಾಡಿಸುವ ಕೆಲಸವನ್ನು‌ ಚಿತ್ರ ಮೌನವಾಗಿ ಮಾಡುತ್ತದೆ! ಅದನ್ನು ಒಪ್ಪುವ ನೋಡುಗ ಚಿತ್ರವನ್ನ ಇಷ್ಟಪಡುತ್ತಾನೆ ಕೂಡಾ! ಆ ಮಟ್ಟಿಗೆ ಚಿತ್ರ ಅದ್ಬುತ ಯಶಸ್ಸನ್ನು ಕಂಡಿದೆ! ಇದರಲ್ಲಿ ಎರಡು ಮಾತಿಲ್ಲ! ಉತ್ಪ್ರೇಕ್ಷೆಯಂತೂ ಇಲ್ಲವೇ ಇಲ್ಲ! ಒಮ್ಮೆ ನೋಡಿದ ನಿಮಗೆ ಕಂಫ್ಯೂಶನ್ನುಗಳಿದ್ದರೆ ತೆಗಳುವುದಕ್ಕೆ ಮನಸ್ಸು ಮಾಡದೆ, ಇನ್ನೊಮ್ಮೆ ಥಿಯೇಟರಿನಲ್ಲಿ ಚಿತ್ರ ನೋಡಿ ಬಂದು ಆಮೇಲೆ ಲೇಖನಿ ಹಿಡಿಯಿರಿ! ನಾನೂ ಕೂಡಾ ನೀವು ಬರೆಯುವುದನ್ನು ಓದಲು ಕಾದಿರುತ್ತೇನೆ! 

‘ಮೌನಮುಖಿ’

(ಆತ್ರಾಡಿ ಪೃಥ್ವಿರಾಜ ಹೆಗ್ಡೆ, ನ್ಯಾಯವಾದಿ & ನೋಟರಿ - ಉಡುಪಿ.)

ಚಿತ್ರ ಕೃಪೆ: ಇಂಟರ್ನೆಟ್ ತಾಣ