ಬಹುನಿರೀಕ್ಷಿತ ರಾಷ್ಟ್ರೀಯ ಕ್ರೀಡಾ ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕೃತಗೊಳಿಸಲಾಗಿದ್ದು, ರಾಷ್ಟ್ರೀಯ ಉದ್ದೀಪನ ತಡೆ (ತಿದ್ದುಪಡಿ) ಮಸೂದೆಗೂ ಅನುಮೋದನೆ ಲಭಿಸಿದೆ. ರಾಷ್ಟ್ರೀಯ ಕ್ರೀಡಾ ಮಸೂದೆ ಹಲವು ದಶಕಗಳ ಕನಸು, ಇನ್ನಾದರೂ ಕಾನೂನಾಗಿ ಜಾರಿಗೆ ಬರಲಿರುವುದು ಒಂದು ಸ್ವಾಗತಾರ್ಹ ಉಪಕ್ರಮ. ೨೦೩೬ರ ಒಲಿಂಪಿಕ್ಸ್ ಆತಿಥ್ಯವನ್ನು ವಹಿಸಬೇಕು ಎಂಬ ದೇಶದ ಅಭಿಲಾಶೆಯ ನಡುವೆ ಈ ಮಸೂದೆ ಅಂಗೀಕಾರಗೊಂಡಿದ್ದು, ಮುಂಬರುವ ದಿನಗಳಲ್ಲಿ ಕ್ರೀಡಾಕ್ಷೇತ್ರ ಉಜ್ವಲವಾಗಿ ಬೆಳಗಲು ಪಥದರ್ಶಕವಾಗಬೇಕಿದೆ.
ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆ ಲೋಕಸಭೆಯಲ್ಲಿ ಅಂಗೀಕಾರಗೊಂಡಿರುವ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ಬಳಿಕ ಕ್ರೀಡಾಕ್ಷೇತ್ರದಲ್ಲಿ ನಡೆದ ಅತೀ ದೊಡ್ಡ ಸುಧಾರಣೆ ಎಂಬುದಾಗಿ ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಅವರು ವ್ಯಾಖ್ಯಾನಿಸಿದ್ದಾರೆ. ಬಿಹಾರದಲ್ಲಿ ನಡೆಯುತ್ತಿರುವ ಮತದಾರ ಪಟ್ಟಿ ಪರಿಷ್ಕರಣೆಯ ವಿರುದ್ದ ವಿಪಕ್ಷಗಳು ಎಬ್ಬಿಸಿದ ಕೋಲಾಹಲದ ನಡುವೆ ಈ ಮಸೂದೆಯನ್ನು ಧ್ವನಿಮತದಿಂದ ಅಂಗೀಕರಿಸಲಾಗಿದೆ. ಕ್ರೀಡಾ ಒಕ್ಕೂಟಗಳ ಕಾರ್ಯನಿರ್ವಹಣೆಯಲ್ಲಿ ಉತ್ತರದಾಯಿತ್ವ ನ್ಯಾಯಬದ್ಧತೆ, ಉತ್ತಮ ಆಡಳಿತಗಳನ್ನು ಈ ಮಸೂದೆ ಖಾತರಿಪಡಿಸಲಿದೆ. ಭಾರತೀಯ ಕ್ರೀಡಾ ವ್ಯವಸ್ಥೆಗೆ ಸಂಬಂಧಿಸಿ ಈ ಮಸೂದೆಗೆ ಅಪಾರ ಮಹತ್ವವಿದೆ ಎಂಬುದಾಗಿ ಮಾಂಡವೀಯ ಹೇಳಿದ್ದಾರೆ. ದೇಶದಲ್ಲಿ ಪಾರದರ್ಶಕ, ಉತ್ತರದಾಯಿ ಮತ್ತು ಜಾಗತಿಕ ದರ್ಜೆಯ ಕ್ರೀಡಾ ವ್ಯವಸ್ಥೆಯನ್ನು ರೂಪಿಸುವಲ್ಲಿ ಈ ಮಸೂದೆಯ ಪಾತ್ರ ನಿರ್ಣಾಯಕವಾಗಿರಲಿದೆ ಎಂದಿದ್ದಾರೆ ಮಾಂಡವೀಯ.
ರಾಷ್ಟ್ರೀಯ ಕ್ರೀಡಾ ಮಸೂದೆಯೊಂದನ್ನು ಅಳವಡಿಸಿಕೊಳ್ಳುವ ಪ್ರಯತ್ನಕ್ಕೆ ಹಲವು ದಶಕಗಳ ಇತಿಹಾಸವಿದೆ. ೧೯೭೬, ೧೯೮೫ರಷ್ಟು ಹಿಂದೆಯೇ ಈ ಸಂಬಂಧ ಪ್ರಯತ್ನಗಳು ನಡೆದಿದ್ದವು. ಮಸೂದೆಯ ಕರಡು ಪ್ರತಿಯನ್ನೂ ರೂಪಿಸಲಾಗಿತ್ತು. ೨೦೧೧ರಲ್ಲಿ ರಾಷ್ಟ್ರೀಯ ಕ್ರೀಡಾ ಮಾರ್ಗಸೂಚಿಯನ್ನು ಅಳವಡಿಸಿಕೊಳ್ಳಲಾಗಿತ್ತು. ಮಸೂದೆಯ ಕನಸು ಈಗ ನನಸಾಗಿದೆ.
೧೪೦ ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ವಿಶಾಲವಾದ ಭಾರತದಂತಹ ದೇಶ ಕ್ರೀಡಾಕ್ಷೇತ್ರದಲ್ಲಿ ಮಾಡಿರುವ ಸಾಧನೆ ಗಮನ ಸೆಳೆಯುವಂಥದ್ದೇನೂ ಅಲ್ಲ ಎಂಬ ನೋವು ಹಲವು ದಶಕಗಳಿಂದ ಇದೆ. ಕ್ರಿಕೆಟ್ನಂತಹ ಕೆಲವು ಪಂದ್ಯಾಟಗಳಲ್ಲಿ ಮಾತ್ರ ನಮ್ಮ ಉತ್ತಮ ಪ್ರದರ್ಶನ ನಿರಂತರವಾಗಿದೆ. ಹಾಕಿಗೆ ಸಂಬಂಧಿಸಿ, ಒಂದು ಕಾಲದಲ್ಲಿ ನಾವೇ ಅನಭಿಷಿಕ್ತ ರಾಜರಾಗಿದ್ದೆವು, ಆ ಪಟ್ಟವೀಗ ಕಳಚಿಕೊಂಡಿದೆ. ವಿವಿಧ ಆಟೋಟಗಳಲ್ಲಿ ನಮ್ಮ ಸಾಧನೆ ಅಲ್ಲೊಂದು ಇಲ್ಲೊಂದು ಎಂಬಷ್ಟು ವಿರಳವಾದುದು ಎಂಬ ನಿಜಾಂಶ ನಮ್ಮ ಆತ್ಮಾವಲೋಕನಕ್ಕೆ ಕಾರಣವಾಗಬೇಕು. ಒಲಿಂಪಿಕ್ಸ್ನಲ್ಲಿ ಇತ್ತೀಚೆಗಿನ ಕೆಲವು ದಶಕಗಳಿಂದ ನಾವು ಸ್ವಲ್ಪವಾದರೂ ಉತ್ತಮ ಸಾಧನೆ ಪ್ರದರ್ಶಿಸುತ್ತಿದ್ದೇವೆ, ಅದಕ್ಕೆ ಹಿಂದಿನ ಚಿತ್ರಣ ನಿರಾಶಾದಾಯಕವಾಗಿತ್ತು. ಈ ಎಲ್ಲವುಗಳನ್ನು ಗಮನದಲ್ಲಿ ಇರಿಸಿಕೊಂಡರೆ ದೇಶದಲ್ಲಿ ಉತ್ತಮ ಕ್ರೀಡಾ ವಾತಾವರಣ ನಿರ್ಮಾಣ, ಕ್ರೀಡಾಪಟುಗಳಿಗೆ ಪ್ರೋತ್ಸಾಹ, ಬೆಂಬಲ, ಆರ್ಥಿಕ ನೆರವು ಇತ್ಯಾದಿ ಗಳನ್ನು ಸಾಧ್ಯವಾಗಿಸುವ ನಿಟ್ಟಿನಲ್ಲಿ ಒಂದು ಸಮಗ್ರ ವ್ಯವಸ್ಥೆ ಇರಬೇಕು ಎಂಬುದು ಎಲ್ಲರ ಬಯಕೆಯಾಗಿತ್ತು. ಕೆಲವು ಕ್ರೀಡಾ ಸಂಸ್ಥೆಗಳಂತೂ ರಾಜಕೀಯ ನಾಯಕರ ಬಿಗಿ ಹಿಡಿತದಲ್ಲಿದ್ದು, ಅರ್ಹ ಪ್ರತಿಭೆಗಳಿಗೆ ಅವಕಾಶವೇ ಸಿಗುತ್ತಿರಲಿಲ್ಲ ಎಂಬ ಆರೋಪವೂ ಇತ್ತು. ಈ ರೀತಿ ಬಿಡಿಬಿಡಿಯಾಗಿ ಹಂಚಿಹೋಗಿರುವ ವಿವಿಧ ಕ್ರೀಡಾ ಒಕ್ಕೂಟಗಳು, ಪ್ರಾಧಿಕಾರಗಳನ್ನು ಒಂದೇ ಸೂರಿನಡಿ ತಂದು ಉತ್ತರದಾಯಿತ್ವ ಪಾರದರ್ಶಕತೆ, ಗುಣಮಟ್ಟಗಳನ್ನು ತರುವುದರಿಂದ ಮಾತ್ರ ದೇಶದ ಕ್ರೀಡಾ ಭವಿಷ್ಯ ವನ್ನು ಉಜ್ವಲಗೊಳಿಸುವುದಕ್ಕೆ ಸಾಧ್ಯವಿದೆ. ಈ ಒಟ್ಟೂ ಹಿನ್ನೆಲೆಯಲ್ಲಿ ಕ್ರೀಡಾ ಆಡಳಿತ + ಮಸೂದೆಯನ್ನು ಅಳವಡಿಸಿಕೊಳ್ಳುವ ನಡೆ ಸ್ವಾಗತಾರ್ಹ. ಹಂತಹಂತವಾಗಿ ಇದನ್ನು ಸಮಗ್ರವಾಗಿ ಜಾರಿಗೊಳಿಸುವ ಮೂಲಕ ದೇಶದ ಕ್ರೀಡಾವ್ಯವಸ್ಥೆ ಪರಿವರ್ತನೆ ಹೊಂದುವುದಕ್ಕೆ ಕಾರಣವಾಗಬೇಕಿದೆ.
ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೧೨-೦೮-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!