ಮೊದಲಿನ ಎರಡು ಹೆಣ್ಣಾಗಿ ಮೂರನೆಯದಾದರೂ ಗಂಡಾಗಲಿ ಎಂದು ಬಯಸಿದ್ದ ಅವರಿಗೆ ಮೂರನೆಯದೂ ಸಹ ಹೆಣ್ಣು ಮಗುವಾದಾಗ ಸ್ವಲ್ಪ ಅಸಮಾಧಾನವೆನಿಸಿತು. ಆದರೂ ನಂತರ ತಮಗೆ ತಾವೇ ಸಮಾಧಾನ ಪಡಿಸಿಕೊಂಡು ಎಲ್ಲ ಮಕ್ಕಳನ್ನು ಅಕ್ಕರೆಯಿಂದ ಪೋಸಿಸಿ ಬೆಳೆಸಿದರು. ಮೂರನೇಯವಳು ಸೌಮ್ಯ ಹೆಸರಿಗೆ ತಕ್ಕಂತೆ ಅತಿ ಸೌಮ್ಯ ಸ್ವಭಾವದವಳಾಗಿದ್ದರೂ ಅತಿ ಚುರುಕು ಬುದ್ಧಿಯವಳಾಗಿದ್ದಳು. ಯುಕ್ತ ವಯಸ್ಸಿಗೆ ಬಂದ ಅವಳನ್ನು ಸಾಕಷ್ಟು ಸ್ಥಿತಿವಂತನಾದ ಹುಡುಗನೊಂದಿಗೆ ಮದುವೆ ಮಾಡಿದರು. ಪ್ರೀತಿಸುವ ಗಂಡ ಮತ್ತು ಅವನ ಮನೆಯವರು ಎಲ್ಲವೂ ಚೆನ್ನಾಗಿಯೇ ಇತ್ತು. ಮದುವೆಯಾದ ಸ್ವಲ್ಪ ದಿನಗಳ ನಂತರ ಇವಳು ಗರ್ಭವತಿಯಾದಾಗ ಇತ್ತ ತವರಿನವರು ಅತ್ತ ಗಂಡನ ಮನೆಯವರೂ ತುಂಬಾ ಸಂಭ್ರಮಿಸಿದರು. ಮೂವರು ಹೆಣ್ಣು ಮಕ್ಕಳ ನಂತರದಲ್ಲಿ ಹುಟ್ಟಿದ್ದ ಇವಳ ಗಂಡ. ಹಾಗಾಗಿ ಗಂಡನ ಮನೆಯಲ್ಲಿ ಸಹಜವಾಗಿಯೇ ಗಂಡು ಮಗುವಿನ ನಿರೀಕ್ಷೆ ತುಸು ಹೆಚ್ಚಾಗಿಯೇ ಇತ್ತು. ದಿನ ಕಳೆದು ಸುಖ ಪ್ರಸವವಾಗಿ, ಸುಂದರ ಹೆಣ್ಣು ಮಗುವಿನ ಜನನವಾಯಿತು.
ಮನೆಯವರಲ್ಲಿ ಮಗು ಜನಿಸಿದ ಸಂಭ್ರಮ ಅಷ್ಟಾಗಿ ಕಾಣಲಿಲ್ಲ. ಅವರೆಲ್ಲರೂ ಗಂಡು ಮಗುವೊoದರ ನಿರೀಕ್ಷೆಯಲ್ಲಿದ್ದುದರಿಂದ ಈ ಮಗುವಿಗೆ ದೊರೆತ ಸ್ವಾಗತ ನೀರಸವಾಗಿತ್ತು. ನಿಧಾನವಾಗಿ ದಿನ ಕಳೆದಂತೆ ಸೌಮ್ಯಳನ್ನು ಆ ಗಂಡನ ಮನೆಯವರೆಲ್ಲರೂ ಕೀಳಾಗಿ ಕಾಣತೊಡಗಿದರು. ಗಂಡನಿಗೂ ಗಂಡು ಮಗುವಿನ ನಿರೀಕ್ಷೆಯಿದ್ದುದರಿಂದ ಅವಳೆಡೆಗಿನ ಅವನ ಪ್ರೀತಿಯಲ್ಲಿ ಸಹ ಕಡಿಮೆಯಾಗತೊಡಗಿತು. ಮೊದಲೇ ಸೌಮ್ಯ ಸ್ವಭಾವದವಳಾಗಿದ್ದ ಇವಳು ಮತ್ತಷ್ಟು ಕುಸಿದಳು. ಆದರೂ ಅವಳು ಬುದ್ಧಿವಂತಳಾಗಿದ್ದುದರಿಂದ ತನ್ನಷ್ಟಕ್ಕೆ ತಾನು ಸಾವರಿಸಿಕೊಂಡು ಆ ಪುಟ್ಟ ಮಗುವನ್ನು ತನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿ, ಬೆಳೆಸಿದಳು. ಬೆಳೆದ ದೊಡ್ಡವಳಾದ ಅವಳ ಮಗಳು ಆಟ ಪಾಠಗಳೆಲ್ಲವುದರಲ್ಲೂ ಮೊದಲಿಗಳಾಗಿಯೇ ಬೆಳೆದಳು. ಮನೆಯವರ ವಿರೋಧವಿದ್ದರೂ ಉನ್ನತ ವಿದ್ಯಾಭ್ಯಾಸಕ್ಕಾಗಿ ಅವಳನ್ನು ಪಟ್ಟಣಕ್ಕೆ ಕಳುಹಿಸಿದಳು. ಅವಳು ಅಲ್ಲಿಯೂ ಸಹ ಯಶಸ್ಸು ಸಾಧಿಸಿ ಐಎಎಸ್ ನಲ್ಲಿ ಉನ್ನತ ರಾಂಕ್ ಗಳಿಸಿದಳು. ತನ್ನದೇ ಊರಿಗೆ ಜಿಲ್ಲಾಧಿಕಾರಿಯಾಗಿ ನೇಮಕಗೊಂಡು ಬಂದಾಗ ಸೌಮ್ಯಳಿಗಾದ ಸಂತಸಕ್ಕೆ ಪಾರವೇ ಇರಲಿಲ್ಲ. ಮನೆಯವರೆಲ್ಲರೂ ಸಹ ತಮ್ಮ ಮನೆ ಮಗಳ ಈ ಸಾಧನೆ ಕಂಡು ಹರುಷ ಪಟ್ಟರು. ಅಂದು ತಾವು ಸಂಕುಚಿತ ಮನೋಭಾವದಿಂದ ವರ್ತಿಸಿದಕ್ಕೆ ತಾವೇ ನಾಚಿಕೆ ಪಟ್ಟುಕೊಂಡರು. ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಹುದು ಎಂದು ತೋರಿಸಿಕೊಟ್ಟ ತನ್ನ ಮಗಳಿಂದ ಸೌಮ್ಯಳ ಬದುಕು ಸಾರ್ಥಕತೆ ಹೊಂದಿತು.
~ ಸಂಪಿಗೆ ವಾಸು, ಬಳ್ಳಾರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!