ಎಲ್ಲರದ್ದೂ ಒಂದು ದಾರಿಯಾದರೆ, ಎಡವಟ್ಟನದ್ದು ಮತ್ತೊಂದು 'ದಾರಿ' ಎಂಬ ರೀತಿಯಲ್ಲೇ ವರ್ತಿಸುತ್ತಿರುವ ಅಮೆರಿಕ ಅಧ್ಯಕ್ಷ ಟ್ರಂಪ್, ತಮ್ಮ ಈ ವರ್ತನೆಯ ಯಾದಿಗೆ ದಿನಕ್ಕೊಂದರಂತೆ ಹೊಸ ಚೇಷ್ಟೆಗಳನ್ನು ಸೇರಿಸುತ್ತಿದ್ದಾರೆ. 'ಅಮೆರಿಕ ಇಲ್ಲದಿದ್ದರೆ ಪ್ರಪಂಚದಲ್ಲಿರುವ ಎಲ್ಲಾ ದೇಶಗಳು ಸಾಯುತ್ತಿದ್ದವು' ಎಂಬ ಆಣಿಮುತ್ತುಗಳನ್ನು ಟ್ರಂಪ್ ಮೊನ್ನೆ ಉದುರಿಸಿರುವುದು ಇದಕ್ಕೆ ಸಾಕ್ಷಿ. ತಾವು ಹೇರಿರುವ ಸುಂಕಗಳ ಮೂಲಕ ತುಂಬಾ ದೊಡ್ಡ ಮೊತ್ತವು ಅಮೆರಿಕದ ಬೊಕ್ಕಸಕ್ಕೆ ಜಮೆಯಾಗಲಿದೆ ಎಂದೇ ನಂಬಿರುವ ಟ್ರಂಪ್, 'ಚೀನಾದ ನಂತರ ರಷ್ಯಾದ ಅತಿದೊಡ್ಡ ಕಚ್ಚಾತೈಲ ಖರೀದಿದಾರನಾಗಿರುವ ಭಾರತವು ಒಂದೊಮ್ಮೆ ಈ ಆಮದನ್ನು ಮುಂದುವರಿಸಿದರೆ ಮತ್ತಷ್ಟು ದಂಡಸುಂಕವನ್ನು ಕಟ್ಟಬೇಕಾಗುತ್ತದೆ' ಎಂದು ಹೆಚ್ಚುವರಿ ಬೆದರಿಕೆಯನ್ನು ಹಾಕಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಈ ಎಲ್ಲ ಬೆದರಿಕೆಗಳಿಗೆ ಉತ್ತರಿಸುವ ಗೋಜಿಗೆ ಹೋಗದೆ ಮೌನವನ್ನು ಕಾಯ್ದುಕೊಂಡಿರುವುದು ಗಮನಾರ್ಹ ಸಂಗತಿ. ಹೌದು, ಅಹಂಕಾರಕ್ಕೆ ಉದಾಸೀನವೇ ಮದ್ದು! ಅತಿರೇಕದ ಪ್ರತಿಸುಂಕ ವಿಧಿಸುವ ಮೂಲಕ ಭಾರತದ ಆರ್ಥಿಕತೆಯನ್ನು ಮತ್ತು ಇಲ್ಲಿನ ಉನ್ನತ ನಾಯಕತ್ವದ ಆತ್ಮವಿಶ್ವಾಸವನ್ನು ಕುಗ್ಗಿಸುವ ಹರಸಾಹಸಕ್ಕೆ ಟ್ರಂಪ್ ಮುಂದಾಗಿರುವಂತಿದೆ. ಆದರೆ, ಇಂಥ ಕಸರತ್ತುಗಳು ಇನ್ನು ಮುಂದೆ ಫಲ ಕೊಡುವುದಿಲ್ಲ ಎಂಬ ಕಹಿಸತ್ಯ ಟ್ರಂಪ್ ಅವರಿಗೆ ಇನ್ನೂ ಅರಿವಾಗದಿರುವುದು ಅಚ್ಚರಿಯ ಸಂಗತಿ. ಭಾರತ-ರಷ್ಯಾ-ಚೀನಾದಂಥ ಬೃಹತ್ ಶಕ್ತಿಗಳು ಪರಸ್ಪರ ಕೈಜೋಡಿಸಿರುವುದನ್ನು ಕಂಡು ಟ್ರಂಪ್ ಎಂಬ ಜಟ್ಟಿ ಈಗಾಗಲೇ ಬಹುತೇಕವಾಗಿ ಧರಾಶಾಯಿಯಾಗಿದ್ದಾರೆ. ಇಷ್ಟಾಗಿಯೂ 'ಮೀಸೆ ಮಣ್ಣಾಗಲಿಲ್ಲ' ಎಂಬ ಅತಿಯಾದ ಆತ್ಮವಿಶ್ವಾಸದಲ್ಲಿ ಅವರು ಮತ್ತಷ್ಟು ಸುಂಕ ಹೇರುವ ಕುರಿತು ಬಡಬಡಿಸಿ ದ್ದಾರೆ. ಅದು ಸಹಜವೇ. ಖಾಲಿ ಡಬ್ಬಿಗಳು ಹೆಚ್ಚು ಸದ್ದು ಮಾಡುತ್ತವೆ ಎಂಬ ಸಾರ್ವಕಾಲಿಕ ಸತ್ಯವನ್ನು ನೆನೆದು ಸುಮ್ಮನಾಗಿಬಿಡೋಣ!
ಕೃಪೆ: ವಿಶ್ವವಾಣಿ, ಸಂಪಾದಕೀಯ, ದಿ: ೦೬-೦೯-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!