ಅಮೆರಿಕವು ಭಾರತದ ಆಮದು ವಸ್ತುಗಳ ಮೇಲೆ ದೊಡ್ಡ ಪ್ರಮಾಣದ ಸುಂಕ ಹೇರಿರುವ ಹಿನ್ನೆಲೆಯಲ್ಲಿ ಹಾಗೂ ಜಗತ್ತು ಮತ್ತೆ ವ್ಯಾಪಾರದಲ್ಲಿ ಸಂರಕ್ಷಣಾವಾದವನ್ನು ಹೆಚ್ಚೆಚ್ಚು ನೆಚ್ಚಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸ್ವದೇಶಿ ಕಾರ್ಯಸೂಚಿಗೆ ಅಧಿಕ ಮಹತ್ವ ನೀಡುವಂತೆ ಆಳುವ ಎನ್ ಡಿ ಎ ಸಂಸತ್ ಸದಸ್ಯರಿಗೆ ಕರೆ ನೀಡಿರುವುದು ಸಂದರ್ಭೋಚಿತವಾಗಿದೆ. ಸ್ವದೇಶಿಯು ಪ್ರಧಾನಿ ಮೋದಿಯವರು ಹಿಂದಿನಿಂದಲೂ ಪ್ರತಿಪಾದಿಸುತ್ತಿರುವ ಕಾರ್ಯಸೂಚಿಯಾಗಿದ್ದು, ಈಗಂತೂ ಅವರು ಅದಕ್ಕೆ ಇನ್ನಷ್ಟು ಒತ್ತು ನೀಡಿದ್ದಾರೆ. ಸ್ವದೇಶಿಯನ್ನು 'ಸಾಮೂಹಿಕ ಆಂದೋಲನ'ವಾಗಿ ಮಾರ್ಪಡಿಸುವಂತೆ ಸದಸ್ಯರಿಗೆ ಕರೆ ಸಂಸತ್ ನೀಡಿರುವ ಅವರು, ಮುಂಬರುವ ಹಬ್ಬಗಳ ಋತುವಿನಲ್ಲಿ 'ಸ್ವದೇಶಿ ಮೇಳ' ಗಳನ್ನು ಹಮ್ಮಿಕೊಳ್ಳುವಂತೆಯೂ ಸೂಚಿಸಿದ್ದಾರೆ. ಮೋದಿಯವರು ಕರೆ ನೀಡಿರುವ ಸ್ವದೇಶಿ ಮೇಳವು ಒಂದುರೀತಿಯಲ್ಲಿ ಸಾಂಸ್ಕೃ ತಿಕವಾಗಿಯೂ, ಇನ್ನೊಂದೆಡೆಯಿಂದ ಆರ್ಥಿಕವಾಗಿಯೂ ಮಹತ್ವಪೂರ್ಣವಾಗಿದೆ.
ಕಳೆದ ಮೂರು ದಶಕಗಳಿಂದ ಜಗತ್ತು ಜಾಗತೀಕರಣವನ್ನು ಮತ್ತು ಉದಾರೀಕರಣವನ್ನು ಅನುಸರಿಸುತ್ತಾ ಬಂದಿದ್ದರೂ, ಇತ್ತೀಚಿನ ವರ್ಷಗಳಲ್ಲಿ ಕೆಲವು ದೇಶಗಳು ಮತ್ತೆ ವ್ಯಾಪಾರದಲ್ಲಿ ಸಂರಕ್ಷಣಾ ನೀತಿಗೆ ಒತ್ತು ನೀಡುತ್ತಿರುವಂತೆ ಕಂಡುಬರುತ್ತಿದೆ. ಅಮೆರಿಕವು ತನ್ನ ಆರ್ಥಿಕ ಹಿರಿಮೆಯನ್ನು ಕಾಯ್ದುಕೊಳ್ಳಲು ಇತರ ದೇಶಗಳ ಮೇಲೆ ಅಧಿಕ ತೆರಿಗೆ ಹೇರಿರುವುದೇ ಇದಕ್ಕೆ ನಿದರ್ಶನವಾಗಿದೆ. ಇದಕ್ಕೆ ಪ್ರತಿಯಾಗಿ ಭಾರತ ಕೂಡಾ ತನ್ನ ಆರ್ಥಿಕ ಹಿತಾಸಕ್ತಿಯನ್ನು ಕಾಯಲು ಸ್ವದೇಶಿ ನೀತಿಯನ್ನು ಅನುಸರಿಸುವುದು ಹೆಚ್ಚು ಸೂಕ್ತವಾದೀತು.
ಪ್ರಧಾನಿಯವರು ಪ್ರತಿಪಾದಿಸುತ್ತಿರುವ ಮೇಕ್ ಇನ್ ಇಂಡಿಯಾ, ಆತ್ಮನಿರ್ಭರ ಭಾರತ ಮೊದಲಾದ ಪರಿಕಲ್ಪನೆಗಳು ಸ್ವದೇಶಿಯನ್ನು ಉತ್ತೇಜಿಸುವಂತಹುದೇ ಆಗಿದೆ. ೧೪೦ ಕೋಟಿ ಜನಸಂಖ್ಯೆಯಿರುವ ಭಾರತೀಯ ಮಾರುಕಟ್ಟೆಯು ಸ್ವದೇಶಿಯನ್ನೆ ಗಟ್ಟಿಯಾಗಿ ನೆಚ್ಚಿಕೊಂಡರೆ ಹಾಗೂ ದೇಶೀ ಕಂಪೆನಿಗಳು ನಮ್ಮ ಜನರನ್ನು ತೃಪ್ತಿಪಡಿಸುವಂತಹ ಉತ್ಪನ್ನಗಳ ಉತ್ಪಾದನೆಯಲ್ಲಿ ತೊಡಗಿದರೆ ವಿದೇಶಿ ಮಾರುಕಟ್ಟೆಯನ್ನು ಅವಲಂಬಿಸಬೇಕಾದ ಪ್ರಮೇಯವೇ ಬರಲಾರದು. ಯಾವುದೇ ದೇಶವು ಭಾರತದ ಮೇಲೆ ದಂಡನಾರ್ಹ ತೆರಿಗೆ ಹೇರಿದರೂ ದೇಶವು ತಲೆಕೆಡಿಸಿಕೊಳ್ಳಬೇಕಾದ ಅಗತ್ಯವೇ ಬೀಳಲಾರದು.
ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೧೧-೦೯-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!