ರಾಜಸ್ಥಾನದ ಹೆಸರು ಕೇಳಿದ ತಕ್ಷಣ ಮನಸ್ಸಿನಲ್ಲಿ ಮೂಡುವುದು ಭವ್ಯ ಕೋಟೆಗಳು, ಐತಿಹಾಸಿಕ ಅರಮನೆಗಳು ಮತ್ತು ಕಲಾತ್ಮಕ ಕೆತ್ತನೆಗಳ ಚಿತ್ರ. ಆದರೆ ಈ ವೈಭವದ ನಡುವೆ, ಜೋಧಪುರದ ಮಾಂಡೋರ್‌ನಂತಹ ಅಪರೂಪದ ಸ್ಥಳವೊಂದು ಇತಿಹಾಸದ ಕತೆಗಳನ್ನು ತನ್ನ ಕಲ್ಲಿನ ಸ್ಮಾರಕಗಳಲ್ಲಿ ಬಂಧಿಸಿಟ್ಟಿದೆ. ಒಂದು ಕಾಲದಲ್ಲಿ ರಾಜರ ಸ್ಮಶಾನವಾಗಿದ್ದ ಈ ಸ್ಥಳ ಇಂದು ಒಂದು ಸುಂದರ ಉದ್ಯಾನವನವಾಗಿ ಪರಿವರ್ತಿತವಾಗಿದ್ದು, ಪ್ರವಾಸಿಗರಿಗೆ ಆಕರ್ಷಣೆಯ ಕೇಂದ್ರವಾಗಿದೆ.

ಮಾಂಡೋರ್ ಪ್ರದೇಶವು ಜೋಧಪುರದ ಕೋಟೆ ಮತ್ತು ಅರಮನೆಗಳಿಂದ ಕೇವಲ ಕೆಲವೇ ಕಿಲೋಮೀಟರ್ ದೂರದಲ್ಲಿದೆ. ಇದು ಒಂದು ರೀತಿಯ ಗುಪ್ತ ಖಜಾನೆಯಂತೆ, ಇತಿಹಾಸದ ಪುಟಗಳಿಂದ ಹೊರಬಂದ ಅದ್ಭುತ ನಗರದಂತೆ ಭಾಸವಾಗುತ್ತದೆ. ಆರನೇ ಶತಮಾನದಲ್ಲಿ ಮಾರ್ವಾರ್‌ನ ಮೊದಲ ರಾಜಧಾನಿಯಾಗಿದ್ದ ಮಾಂಡೋರ್, ಕಾಲಾಂತರದಲ್ಲಿ ಜೋಧಪುರಕ್ಕೆ ಸ್ಥಳಾಂತರಗೊಂಡರೂ, ಇಲ್ಲಿನ ಕೋಟೆಯ ಅವಶೇಷಗಳು ಮತ್ತು ಸ್ಮಾರಕಗಳು ಇತಿಹಾಸದ ಮೂಕ ಸಾಕ್ಷಿಗಳಾಗಿ ಉಳಿದಿವೆ. ಗುರ್ಜಾರ್-ಪ್ರತಿಹಾರರ ಆಳ್ವಿಕೆಯ ಕಾಲದಲ್ಲಿ ಇದು ಪ್ರಮುಖ ಕೇಂದ್ರವಾಗಿತ್ತು. ೧೩೮೯ರಲ್ಲಿ ರಾವ್ ಹೇಮಾ ಗೆಹ್ಲೋಟ್ ಪ್ರತಿಹಾರ ರಾಜಕುಮಾರಿಯನ್ನು ವಿವಾಹವಾದ, ಇತಿಹಾಸದ ಒಂದು ಆಕರ್ಷಕ ಘಟನೆ ಇಲ್ಲಿ ನಡೆದಿತ್ತು. ೧೪೨೭ರಲ್ಲಿ ರಾವ್ ರಣಮಲ್ ಇಲ್ಲಿ ಅಧಿಕಾರ ವಹಿಸಿಕೊಂಡರೂ, ೧೪೩೩ರಲ್ಲಿ ಚಿತ್ತೂರಿನಲ್ಲಿ ಅವರ ಹತ್ಯೆಯಾಯಿತು. ಆದರೆ ಹತ್ಯೆ ನಡೆದ ಸಮಯದಲ್ಲಿ ಅವರ ಮಗ ರಾವ್ ಜೋಧಾ ತಪ್ಪಿಸಿಕೊಂಡು ಹೋಗಿ, ಸುಮಾರು ೧೫ ವರ್ಷಗಳ ಶ್ರಮದ ನಂತರ ಮಾಂಡೋರನ್ನು ಮರಳಿ ವಶಪಡಿಸಿಕೊಂಡ. ಆದರೂ, ಈ ಸ್ಥಳದ ರಕ್ತಸಿಕ್ತ ನೆನಪುಗಳಿಂದ ಹೊರಬರಲಾಗದೆ, ೧೪೫೯ರಲ್ಲಿ ರಾವ್ ಜೋಧಾ ರಾಜಧಾನಿಯನ್ನು ಜೋಧಪುರಕ್ಕೆ ಸ್ಥಳಾಂತರಿಸಿದರು.

ಸ್ಥಳ ಪುರಾಣದ ಪ್ರಕಾರ, ಮಾಂಡೋರ್ ರಾವಣನಿಗೆ ವಿಶೇಷ ಸಂಬಂಧ ಹೊಂದಿದೆ. ರಾವಣ ಇಲ್ಲಿ ಮಂಡೋದರಿಯನ್ನು ವಿವಾಹವಾದನೆಂದು ನಂಬಲಾಗಿದೆ. ಈ ಕಾರಣಕ್ಕೆ ಇಂದಿಗೂ ಸ್ಥಳೀಯರು ರಾವಣನನ್ನು ತಮ್ಮ ಊರಿನ ‘ಅಳಿಯ’ ಎಂದು ಕರೆಯುತ್ತಾರೆ. ಇಲ್ಲಿರುವ ರಾವಣನ ದೇವಾಲಯ ಈ ಸ್ಥಳದ ವಿಶಿಷ್ಟ ಆಕರ್ಷಣೆ ಎಂದರೆ ತಪ್ಪಾಗಲಾರದು,

ಕೋಟೆಯ ಒಳಗಿನ ದೇವಾಲಯಗಳು ಕಾಲಾಂತರದಲ್ಲಿ ಶಿಥಿಲಗೊಂಡರೂ, ಇಲ್ಲಿನ ಸ್ಮಾರಕಗಳು ರಾಜರ ಗತ ವೈಭವವನ್ನು ಇಂದಿಗೂ ಪ್ರತಿಬಿಂಬಿಸುತ್ತವೆ. ೧೭೯೩ರಲ್ಲಿ ನಿರ್ಮಿತವಾದ ಅಜಿತ್ ಸಿಂಗ್ ಸ್ಮಾರಕವು ಕಲಾತ್ಮಕ ಕೆತ್ತನೆಯಿಂದ ಕೂಡಿದೆ. ಕೆಂಪು ಮರಳುಗಲ್ಲಿನಲ್ಲಿ ನಿರ್ಮಿತವಾದ ಛತ್ರಿ ಆಕಾರದ ಸ್ಮಾರಕಗಳು, ಕಂಬಗಳು ಮತ್ತು ಶಿಖರಗಳು ಇತಿಹಾಸದ ಒಂದು ಯುಗವನ್ನು ಜೀವಂತವಾಗಿಡುತ್ತವೆ. ಇದರ ಜತೆಗೆ, ಸರ್ಕಾರಿ ವಸ್ತುಸಂಗ್ರಹಾಲಯದ ‘ಹಾಲ್ ಆಫ್ ಹೀರೋಸ್’ನಲ್ಲಿ ೧೬ ಜಾನಪದ ವೀರರ ಕೆತ್ತನೆಯನ್ನು ಒಂದೇ ಕಲ್ಲಿನಲ್ಲಿ ರಚಿಸಲಾಗಿದ್ದು, ಇದು ಸಾಂಸ್ಕೃತಿಕ ಪರಂಪರೆಯ ಸಂಕೇತವಾಗಿದೆ. ಪಕ್ಕದಲ್ಲಿಯೇ ‘೩೩ ಕೋಟಿ ದೇವರುಗಳ ದೇವಾಲಯ’ ಎಂಬ ಸಭಾಂಗಣವಿದ್ದು, ವಿವಿಧ ದೇವತೆಗಳ ಕೆತ್ತನೆಗಳು ಮತ್ತು ವರ್ಣಚಿತ್ರಗಳು ಗಮನ ಸೆಳೆಯುತ್ತವೆ.

ಇಲ್ಲಿನ ಉದ್ಯಾನವನವು ರಾತ್ರಿಯಲ್ಲಿ ಬೆಳಕಿನ ವ್ಯವಸ್ಥೆಯಿಂದ ಇನ್ನಷ್ಟು ಆಕರ್ಷಕವಾಗಿ ಕಾಣುತ್ತದೆ. ಬೆಳಗ್ಗೆ ೮ ರಿಂದ ರಾತ್ರಿ ೮ ರವರೆಗೆ ತೆರೆದಿರುವ ಈ ಉದ್ಯಾನವನಕ್ಕೆ ಪ್ರವೇಶ ಶುಲ್ಕವೂ ಕಡಿಮೆ. ಆದರೂ, ಜೋಧಪುರದ ಮೆಹ್ರಾನ್‌ಘಡ್, ಉಮೈದ್ ಅರಮನೆ, ಜಸ್ವಂತ್ ಥಾಡ್‌ನಂತಹ ಪ್ರಸಿದ್ಧ ಸ್ಥಳಗಳಿಗೆ ಭೇಟಿ ನೀಡುವವರು ಮಾಂಡೋರ್‌ನ ಈ ಅಪರೂಪದ ಸೌಂದರ್ಯವನ್ನು ಕಡೆಗಣಿಸುವುದು ಸಾಮಾನ್ಯ ಸಂಗತಿಯಾಗಿದೆ. ಇನ್ನಾದರೂ ಪ್ರವಾಸಿಗರು ಈ ಪೌರಾಣಿಕ ಮತ್ತು ಐತಿಹಾಸಿಕ ಮಹತ್ವ ಇರುವ ಮಾಂಡೋರ್ ನ ರಾವಣ ದೇಗುಲಕ್ಕೆ ಹಾಗೂ ಇಲ್ಲಿಯ ಇನ್ನಿತರ ಆಕರ್ಷಣೀಯ ಸ್ಥಳಗಳಿಗೆ ಭೇಟಿ ನೀಡಲಿ.

ಮಾಂಡೋರ್ ತಲುಪುವುದು ಹೇಗೆ?: ಜೋಧಪುರದಿಂದ ಕೇವಲ ೧೦ ಕಿಮೀ ದೂರದಲ್ಲಿರುವ ಮಾಂಡೋರ್‌ಗೆ ಸ್ವಂತ ವಾಹನ ಅಥವಾ ಸ್ಥಳೀಯ ಸಾರಿಗೆಯ ಮೂಲಕ ಸುಲಭವಾಗಿ ತಲುಪಬಹುದು. ಜೋಧಪುರಕ್ಕೆ ರೈಲು, ರಸ್ತೆ ಮತ್ತು ವಿಮಾನ ಸಂಪರ್ಕವಿದೆ. ಜೋಧಪುರದ ಪ್ರಸಿದ್ಧ ಸ್ಥಳಗಳ ಜೊತೆಗೆ ಮಾಂಡೋರ್‌ನ ಈ ಐತಿಹಾಸಿಕ ಖಜಾನೆಯನ್ನು ಒಮ್ಮೆಯಾದರೂ ಭೇಟಿಯಾಗಿ ನೋಡಲೇಬೇಕು!

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ