ಕಂಬದಹಳ್ಳಿಯು ಕರ್ನಾಟಕದ ಮಂಡ್ಯ ಜಿಲ್ಲೆಯಲ್ಲಿರುವ ಜೈನರ ಪ್ರಮುಖ ಯಾತ್ರಾ ಸ್ಥಳವಾಗಿದೆ. ಇಲ್ಲಿ ಪ್ರಾಚೀನ ಜಿನಾಲಯವಿದ್ದು, ಜೈನ ಮಠವು ಸಹ ಇದೆ. ಕಂಬದಹಳ್ಳಿಯು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿಗೆ ಸೇರಿದೆ. ಕಂಬದಹಳ್ಳಿಯನ್ನು ರಾಷ್ಟ್ರೀಯ ಹೆದ್ದಾರಿ ಬೆಂಗಳೂರು ಮಂಗಳೂರರ ಕದಬ ಹಳ್ಳಿಯ ಮೂಲಕ ತಲುಪಬಹುದು. ಜೈನರ ಪ್ರಮುಖ ಯಾತ್ರಾ ಸ್ಥಳ ಶ್ರವಣಬೆಳಗೊಳದಿಂದ ಕಂಬದಹಳ್ಳಿಯು 18 ಕಿಲೋಮೀಟರ್ ದೂರದಲ್ಲಿದೆ.
ಈ ಊರಿನಲ್ಲಿರುವ ಪಂಚಕೂಟ ಬಸದಿಗೆ ಉತ್ತರದಿಂದ 50 ಅಡಿ ಎತ್ತರದ ಕರಿ ಕಲ್ಲಿನ ಬ್ರಹ್ಮದೇವರ ಕಂಬದಿಂದಾಗಿ ಊರಿಗೆ ಕಂಬದಹಳ್ಳಿ ಎಂಬ ಹೆಸರು ಬಂದಿದೆ. ಈ ಮನಮೋಹಕ ಕಂಬದ ತಳ ಭಾಗದಲ್ಲಿ ಅಷ್ಟ ಕೋಣಗಳಿದ್ದು ಅದರ ಮೇಲೆ ಅಷ್ಟದಿಕ್ಪಾಲಕರ ಉಬ್ಬು ಶಿಲ್ಪಗಳಿವೆ. ಈ ಕಂಬದ ಮೇಲೆ ಪೂರ್ವಾಭಿಮುಖವಾಗಿರುವ ಬ್ರಹ್ಮ ದೇವರ ಮೂರ್ತಿ ಇದೆ. ಹೀಗಾಗಿ ಈ ಕಂಬಕ್ಕೆ ಬ್ರಹ್ಮದೇವರ ಕಂಬ ಎಂಬ ಹೆಸರು ಬಂದಿದೆ. ಕಂಬಕ್ಕೆ ಅತಿ ಹತ್ತಿರದಲ್ಲಿ ದ್ರಾವಿಡ ಶೈಲಿಯಲ್ಲಿ ಕಲ್ಲಿನಿಂದ ಕಟ್ಟಲಾದ ಏಳು ದೇವಾಲಯಗಳಿವೆ. ಕ್ರಿ. ಶ. 900ರ ಸರಿಸುಮಾರಿನಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾದ ಪಂಚಕೂಟ ಬಸ್ತಿಯಿದೆ. ಇದರ ನಡುವೆ ಮೂರು ಗೋಪುರಗಳ ತ್ರಿಕೂಟಾಚಲ ಆದಿನಾಥ ಬಸದಿಯಿದೆ. ಈ ದೇವಾಲಯ ಕನ್ನಡ ನಾಡಿನ್ನಾಳಿದ ಪಲ್ಲವರ ಕಾಲದ್ದೆಂದು ಇಲ್ಲಿರುವ ಶಿಲ್ಪಿಗಳಿಂದ ತಿಳಿದು ಬರುತ್ತದೆ.
ದೇವಾಲಯದ ಕೆಳಭಾಗ ಎಂಟು ಮೂಲೆಗಳನ್ನ ಹೊಂದಿದ್ದು ಅತಿ ಮನಮೋಹಕವಾಗಿದೆ. ಬಲಭಾಗದ ಗರ್ಭಗುಡಿಯಲ್ಲಿ ನೇಮಿನಾಥ ಮತ್ತು ಎಡಬಾಗದ ಗುಡಿಯಲ್ಲಿ ಶಾಂತಿನಾಥನ ಶಿಲಾಮೂರ್ತಿಗಳಿವೆ. ಈ ದೇವಾಲಯದಲ್ಲಿರುವ ಮೂರು ಶಿಖರಗಳು ಮೂರು ವಿಧವಾಗಿರುವುದು ವಿಶೇಷ. ಪೂರ್ವದ ಶಿಖರ ದುಂಡಾಗಿದ್ದರೆ ಉತ್ತರ ಭಾಗದಲ್ಲಿರುವ ಗೋಪುರ ಚೌಕಾಕೃತಿಯಲ್ಲಿದೆ. ಪಶ್ಚಿಮದ ಶಿಖರ ಅದ್ಭುತವಾಗಿದ್ದು, ಎಲ್ಲರ ಮನ ಸೆಳೆಯುತ್ತದೆ. ಸಮೀಪದಲ್ಲೇ ಮತ್ತೆರಡು ಮಂದಿರಗಳಿವೆ.
ಒಂದು ಮಂದಿರದಲ್ಲಿ 10 ಅಡಿ ಎತ್ತರದ ಶಾಂತಿನಾಥನ ಮೂರ್ತಿ ಇದೆ. ಈ ಮಂದಿರವನ್ನು 12ನೇ ಶತಮಾನದಲ್ಲಿ ಹೊಯ್ಸಳ ಚಕ್ರವರ್ತಿ ವಿಷ್ಣುವರ್ಧನ ದಂಡನಾಯಕ ಗಂಗರಾಜ ಬೊಪ್ಪನು ಕಟ್ಟಿಸಿದ ಎಂದು ಹೇಳಲಾಗುತ್ತದೆ. ಹೊರ ಬಿತ್ತಿಗಳ ಪಟ್ಟಿಗಳಲ್ಲಿ ಆನೆ, ಕುದುರೆ, ಲತೆ, ಮಕರ, ಸಿಂಹ ಮೊದಲಾದ ಸುಂದರ ಕಲಾಕೃತಿಗಳಿವೆ. ಧ್ಯಾನದಲ್ಲಿ ತಲ್ಲೀನ ಆಗಿರುವ ನೇಮಿನಾಥ ವಿಗ್ರಹ ಮನ ಮೋಹಕವಾಗಿದೆ.
(ಚಿತ್ರಗಳು : ಅಂತರ್ಜಾಲ ಕೃಪೆ)
-ರಮೇಶ ನಾಯ್ಕ, ಉಪ್ಪುಂದ, ಬೈಂದೂರು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!