ತೆಂಗಿನ ಬೆಳೆಗೆ ಇತ್ತೀಚೆಗಿನ ಕೆಲವು ವರ್ಷಗಳಿಂದ ಕೆಂಪು ಮೂತಿ ಹುಳದ (Rhynchophorus ferrugineus - red palm weevil) ಉಪಟಳ ಜಾಸ್ತಿಯಾಗುತ್ತಿದ್ದು, ತೆಂಗಿನ ಮರಗಳು ಯಾವಾಗ ಈ ಕೀಟದ ಬಾಧೆಗೆ ತುತ್ತಾಗುತ್ತವೆ ಎಂಬುದೇ ತಿಳಿಯುತ್ತಿಲ್ಲ. ತೆಂಗಿನ ಸಸಿ - ಮರವನ್ನು  ಕೊಲ್ಲುವ ಕೀಟ ಇದು.

ತೆಂಗಿನ ಮರಕ್ಕೆ ಕುರುವಾಯಿ ಕೀಟದ ತೊಂದರೆ ಬಗ್ಗೆ ಎಲ್ಲರಿಗೂ ಗೊತ್ತಿದೆ. ಕುರುವಾಯಿ ಹೊಡೆಯುವುದು ತೆಂಗಿನ ಮರಕ್ಕೆ ಸಾಮಾನ್ಯ ಸಮಸ್ಯೆ. ಇದರಿಂದ ಮರ ಸಾಯಲಾರದು. ಗರಿಗಳು ಹಾಳಾಗಿ ಬೆಳವಣಿಗೆ ಕುಂಠಿತವಾಗುತ್ತದೆ. ಕುರುವಾಯಿ ಕೀಟದ ತೊಂದರೆ ನಾವು ತಿಳಿದಂತೆ ಇಷ್ಟೇ ಆದರೂ ಅದರಿಂದ ಕೆಲವೊಮ್ಮೆ ಮರ ಸಾಯುವ ಪ್ರಮೇಯವೂ ಬರುವುದುಂಟು.  ಕೆಂಪು ಮೂತಿ ಹುಳ- ಕೆಂಪು ಕುರುವಾಯಿ ಕೀಟದ ಬಗ್ಗೆ  ಹೆಚ್ಚಿನವರಿಗೆ  ಗೊತ್ತಿಲ್ಲ. ಅದು ಕುರುವಾಯಿ ಕೀಟಕ್ಕಿಂತ ಅಧಿಕ ಅಪಾಯಕಾರಿ. ಕೆಂಪು ಮೂತಿ ಹುಳವನ್ನು  ಕಂಡಿರದವರೇ ಅಧಿಕ. ಇನ್ನು ತೆಂಗಿನ ಮರ ಕೆಂಪು ಮೂತಿ ಹುಳದ ಚುಚ್ಚುವಿಕೆಯಿಂದ ಸತ್ತಿದೆಯೇ ಎಂಬುದನ್ನು ಗುರುತಿಸುವವರು ಎಷ್ಟು ಮಂದಿ?

ಸಾಮಾನ್ಯವಾಗಿ ಹೆಚ್ಚಿನ ಸಣ್ಣ ತೆಂಗು ಬೆಳೆಗಾರರು ತೆಂಗಿನ ಮರ, ಭಾರದ್ವಾಜ ಪಕ್ಷಿ (Greater Coucal) ತೆಂಗಿನ ಮರದ ಸುಳಿಯಲ್ಲಿ ಗರಿಗಳ ಸಂದುಗಳಲ್ಲಿ ಉಳು ಹುಪ್ಪಟೆ ತಿನ್ನಲು ಸುತ್ತಾಡುತ್ತಿರುತ್ತದೆ. ಆ ಸಮಯದಲ್ಲಿ ಅದು ಮರದ ಸುಳಿಯಲ್ಲಿ ಮೂತ್ರ ಮಾಡಿದರೆ, ಅದರ ಖಾರಕ್ಕೆ  ಸುಳಿ ಕೊಳೆತು ಮರ ಸಾಯುತ್ತದೆ ಎಂಬುದು ಬಹುತೇಕ ಎಲ್ಲರೂ ತಿಳಿದಿರುವ ಮೌಢ್ಯ. ಇದು ಸತ್ಯಕ್ಕೆ ದೂರವಾದ ಮಾತು. ಪಕ್ಷಿಗಳು ಎಂದೂ ಮೂತ್ರ ಮಾಡುವುದಿಲ್ಲ. ಅವು ಮೂತ್ರ ಮತ್ತು ಮಲವನ್ನು ಹಿಕ್ಕೆಗಳ ಮೂಲಕ ವಿಸರ್ಜಿಸುತ್ತವೆ. ಭಾರದ್ವಾಜ ಪಕ್ಷಿ ಮೂತ್ರ ಮಾಡಿದಾಗ ತೆಂಗಿನಮರ ಸಾಯುವುದಿಲ್ಲ.  ಮರ ಸಾಯುವುದಕ್ಕೆ ಮೂರು ಸಾಧ್ಯತೆಗಳಿರುತ್ತದೆ. ಒಂದನೆಯದ್ದು ಸುಳಿ ಕೊಳೆ ರೋಗದಿಂದ. ಎರಡನೆಯದ್ದು ಕೆಂಪು ಮೂತಿ ಹುಳ ಬಾಧೆಯಿಂದ ಮೂರನೆಯದ್ದು ಸಿಡಿಲಿನ ಹೊಡೆತದಿಂದ. ಇವು ಮೂರೂ ಪರಸ್ಪರ ಕೊಂಡಿಗಳಿದ್ದಂತೆ. ಸುಳಿ ಕೊಳೆಗೆ ಕಾರಣವಾಗುವ ಶಿಲೀಂದ್ರ ಸೋಂಕಿನಿಂದ ಮರದ ಸುಳಿ ಕೊಳೆತು ಹೋಗುತ್ತದೆ. ಸುಳಿ ಕೊಳೆತಾಗ ಸುಳಿ ಭಾಗವು ಕೊಳೆತು ಮುಂದೆ ಬೆಳವಣಿಗೆ ಇಲ್ಲದಾಗಿ ಕ್ರಮೇಣ ಬೆಳೆದ ಗರಿಗಳೆಲ್ಲಾ ಉದುರಿ ಕೊನೆಗೆ ಶಿರ ಬೋಳಾಗುತ್ತದೆ. ಈ ಸಮಯದಲ್ಲಿ ಮರ ಸಣ್ಣದಾಗಿದ್ದರೆ ಅಲ್ಲಿಗೆ ಕೆಂಪು ಮೂತಿ ಹುಳ ಬಾಧಿಸಬಹುದು.

ಶಿರ ಕೊಳೆತ ಮರವು ಇನ್ನು ಬದುಕುವ ಸಾಧ್ಯತೆ ಇಲ್ಲ ಎಂದು ಮನವರಿಕೆಯಾಗಿ ಅದನ್ನು ಕಡಿಯುವವರಿದ್ದಾರೆ. ಕಡಿದು ಹಾಕಿ ಅದನ್ನು ಒಂದೆರಡು ದಿನ ಹಾಗೇ ಉಳಿಸಿದಾಗ ತುಂಡು ಮಾಡಿದ ಕಾಂಡದ ರಸದ ವಾಸನೆಗೆ ಕೆಂಪು ಮೂತಿ ಹುಳ ಆಕರ್ಷಣೆಗೊಳಗಾಗಿ ಅದರ  ಕಾಂಡದ ಭಾಗದಲ್ಲಿ ರಂದ್ರ ಕೊರೆಯುತ್ತಾ ಸಂತಾನಾಭಿವೃದ್ದಿ ಮಾಡುತ್ತದೆ. ಸಂತಾನಾಭಿವೃದ್ದಿಯಾಗಿ ಅಲ್ಲಿ ಆಹಾರ ಮುಗಿದಾಗ ಮತ್ತೊಂದು ಮರವನ್ನು ಆಶ್ರಯಿಸುತ್ತದೆ. ಕುರುವಾಯಿ ಕೀಟವು ಮರದ ಎಳೆಯ ಭಾಗವಾದ ಸುಳಿ ಭಾಗದ ಗರಿದಂಟು ಎಳೆ ಕಾಂಡದಲ್ಲಿ ರಸ ಹೀರಿ ಅದರ ನಾರನ್ನು ಹೊರ ಹಾಕುತ್ತದೆ. ಈ ನಾರಿನ ವಾಸನೆಗೆ ಕೆಂಪು ಮೂತಿ ಹುಳ ಆಕರ್ಷಿತವಾಗಿ ಅಲ್ಲಿ ವಾಸ್ತವ್ಯ ಮಾಡಿ ಸಂತಾನಭಿವೃದ್ದಿ ಮಾಡುತ್ತದೆ. 

ಇದಲ್ಲದೆ ಕೆಲವೊಮ್ಮೆ ತೆಂಗಿನ ಮರದ ಗರಿ ಕಡಿದಾಗ, ಗಾಯವಾದಾಗ ಅದರ ರಸ ಸೋರುವಿಕೆಯ ವಾಸನೆಗೆ ಆಕರ್ಷಿತವಾಗಿ ಕೆಂಪು ಮೂತಿ ಹುಳ ಮರಕ್ಕೆ ಬಾಧಿಸುತ್ತದೆ. ಸಿಡಿಲು ಬಡಿದು ಸತ್ತ ಮರದಲ್ಲಿ ಅದರ ಕಾಂಡ, ಸುಳಿ ಭಾಗ ತಕ್ಷಣವೇ ಕೊಳೆಯಲು ಪ್ರಾರಂಭವಾಗುತ್ತದೆ. ಕೊಳೆಯುವಿಕೆ ಪ್ರಾರಂಭವಾದ ತಕ್ಷಣ ಅಲ್ಲಿಗೆ  ಕೆಂಪು ಮೂತಿ ಹುಳುವಿನ ಪ್ರವೇಶವಾಗುತ್ತದೆ. ಒಂದು ಮರಕ್ಕೆ ಕೊಂಪು ಮೂತಿ ಹುಳ ತೊಂದರೆ ಮಾಡಿ ಅದು ಸತ್ತರೆ ಅಲ್ಲಿಂದ ನಂತರ ಅದು ಬೇರೆ ಮರ ಹುಡುಕುತ್ತಾ ಇನ್ನೋಂದು ಮರವನ್ನು ಹಾನಿ ಮಾಡಿಯೇ ತೀರುತ್ತದೆ. 

ಕೆಂಪು ಮೂತಿ ಹುಳ ತೆಂಗಿನ ದೊಡ್ಡ ಮರಕ್ಕೆ ಹಾನಿ ಮಾಡುವುದು ಕಡಿಮೆ. ಸುಮಾರು ೫-೬ ಮೀಟರ್ ಎತ್ತರದ ತನಕದ ಕಾಂಡದ ಮರಗಳಿಗೆ ಮಾತ್ರ ಹೆಚ್ಚು ತೊಂದರೆ ಮಾಡುತ್ತದೆ. ಅದಕ್ಕಿಂತ ಎತ್ತರದ ಮರಗಳಾದಲ್ಲಿ ಅವುಗಳಿಗೆ ಹಾರಲು ಕಷ್ಟವಾಗುತ್ತದೆ. ೧ ಹೆಣ್ಣು ದುಂಬಿ ಮರದ ಸುಳಿ ಭಾಗದ ಎಳೆಯ ಕಾಂಡವನ್ನು ಕೊರೆದು ಒಳಗೆ ಹೋಗಿ ಅಲ್ಲಿ ಮೊಟ್ಟೆ ಇಟ್ಟು ಮರಿ ಮಾಡುತ್ತದೆ. ಮೊಟ್ಟೆ ಸುಮಾರು ೪-೫ ದಿನದಲ್ಲಿ ಮರಿಯಾಗಿ ತಕ್ಷಣವೇ ಕಾಂಡವನ್ನು ಸುತ್ತಲೂ ಕೊರೆದು ತೂತು ಮಾಡಲು ಪ್ರಾರಂಭಿಸುತ್ತದೆ. ಮೊದಲ ಹಂತದಲ್ಲಿ ಹಿಂದಿನ ಗರಿಗಳಿಗಿಂತ ಹೊಸ ಗರಿಗಳು ಕಿರಿದಾಗಲಾರಂಭಿಸುತ್ತದೆ. ಮರದ ಗರಿಗಳ ಬಣ್ಣ  ಬದಲಾವಣೆಯಾಗುತ್ತದೆ.ಒಂದು ಹೆಣ್ಣು ಕೆಂಪು ಮೂತಿ ಹುಳು ೩೦೦ ರಷ್ಟು ಮೊಟ್ಟೆಗಳನ್ನು ಇಡುತ್ತದೆ. ಅದು ಕೆಳಕ್ಕೆ, ಮೇಲೆ, ಅಡ್ದಕ್ಕೆ ಹೀಗೆ ರಂದ್ರ ಕೊರೆಯುತ್ತಾ ಹೋಗುತ್ತದೆ. ಒಳಗೆ ದೊಡ್ಡ ಕಂದಕದಂತ ತೂತು ಆಗುತ್ತದೆ. ಆಗ ಮರಕ್ಕೆ ಆಹಾರ ಸರಬರಾಜು ಕುಂಠಿತವಾಗಿ ಮರದ ಗರಿ ಜೋತು ಬೀಳಲು ಪ್ರಾರಂಭವಾಗುತ್ತದೆ.  ಹೀಗೆ ಅವು ೩೬ -೭೫ ದಿನಗಳ ತನಕ ಕಾಂಡ ಕೊರೆಯುತ್ತಾ ನಂತರ ಪ್ಯೂಪೇ ಹಂತಕ್ಕೆ  ಬರುತ್ತದೆ. ೧೦-೧೫ ದಿನ ಪ್ಯೂಪೆ ಹಂತ ಮುಗಿಸಿ ನಂತರ ಮತ್ತೆ ದುಂಬಿಯಾಗುತ್ತದೆ. ಇದು ರಾತ್ರಿ ಹಗಲು ಎರಡೂ ಹೊತ್ತೂ ಚಟುವಟಿಕೆಯಲ್ಲಿರುವವುಗಳು. ಹಾರುವಿಕೆ ಮಾತ್ರ ಹಗಲು ಹೊತ್ತು. ದುಂಬಿಯ ಬದುಕುವ ಅವಧಿ ೪ ತಿಂಗಳುಗಳಷ್ಟು. 

ಎಲ್ಲಿ ಕೆಂಪು ಮೂತಿ ಹುಳ ಇರಬಹುದು?

ತೆಂಗಿನ ಮರದ ಗರಿಯ ಭಾಗವನ್ನು  ಕಡಿದು ಕೊಚ್ಚಿ ಹಾಕಿದಾಗ ಅದರ ವಾಸನೆಗೆ ಕೆಂಪು ಮೂತಿ ಹುಳ ಆಕರ್ಷಿತವಾಗುತ್ತದೆ. ಕೆಲವೊಮ್ಮೆ ಎಳೆಯ ಎಳನೀರಿನ ಸಿಪ್ಪೆಗೂ ಆಕರ್ಷಿತವಾಗುತ್ತದೆ. ಬಾಳೆ ಹಣ್ಣು ಕೋಳೆತಾಗಲೂ ಅದರ ವಾಸನೆಗೆ ಬರುತ್ತದೆ. ಸತ್ತ ಮರಗಳನ್ನು ಹಾಗೇ ಬಿಟ್ಟಾಗ ಅದಕ್ಕೆ ಬರುತ್ತದೆ. ಎಳನೀರಿನ ಹಸಿ ಸಿಪ್ಪೆಯ ವಾಸನೆಗೂ ಬರುತ್ತದೆ.

ಪತ್ತೆ ಹೇಗೆ: ಕೆಂಪು ಮೂತಿ ಹುಳ ಬಾಧೆಯನ್ನು  ಪತ್ತೆ ಹಚ್ಚುವುದು ಅಷ್ಟು ಸುಲಭದ ಕೆಲಸವಲ್ಲ. ಆದರೂ ಸ್ವಲ್ಪ ಗಮನಿಸಿದ್ದೇ ಆದರೆ ಪತ್ತೆ ಹಚ್ಚಬಹುದು. ಪ್ರಾರಂಭದ ಹಂತದಲ್ಲಿ ಪತ್ತೆ ಹಚ್ಚಿದಾಗ ಮಾತ್ರ ಮರವನ್ನು ಬದುಕಿಸಲು ಸಾಧ್ಯ. ನಿಮ್ಮಲ್ಲಿ  ತೆಂಗಿನ ಮರದ- ಸಸಿಗೆ ಕುರುವಾಯಿ ಕೀಟದ ಉಪಟಳ ಅಧಿಕ ಇದೆಯೇ  ಹಾಗಾದರೆ ಅಲ್ಲಿಗೆ ಕೆಂಪು ಮೂತಿ ಹುಳವೂ ಹಾಜರಾಗುತ್ತದೆ. ಸಿಡಿಲು ಬಡಿದ ತೆಂಗಿನ ಮರವಿದ್ದರೆ ಅದನ್ನು ತಕ್ಷಣ ವಿಲೇವಾರಿ ಮಾಡಿಲ್ಲವೇ, ಹಾಗೆಯೇ ಆದು ಸ್ಥಂಭವಾಗಿ ಉಳಿಸಿದ್ದರೆ ಅಲ್ಲಿಗೆ ಕೆಂಪು ಮೂತಿ ಹುಳ  ಪ್ರವೇಶಿಸುತ್ತದೆ. ತೆಂಗಿನ ಮರದ ಬುಡಕ್ಕೆ ಗರಿಯ ದಂಟನ್ನು ಕೊಚ್ಚಿ ಹಾಕುತ್ತೀರೆಂದಾದರೆ  ಅಲ್ಲಿಗೆ ಕೆಂಪು ಮೂತಿ ಹುಳ  ಬಾಧಿಸುವ ಸಾಧ್ಯತೆ ಇದೆ. ತೆಂಗಿನ ಮರದ ಗರಿಗಳ ಎಡೆ ಭಾಗದಲ್ಲಿ ರಸ ಸೋರುವಿಕೆ ಕಂಡು ಬಂದರೆ ಅಲ್ಲಿ ಕೆಂಪು ಮೂತಿ ಹುಳ ಇರಬಹುದು. ಗರಿಗಳು ಹರಿದಂತಾಗಿದ್ದರೆ ಅಲ್ಲಿ ಕೆಂಪು ಮೂತಿ ಹುಳದ ಬಾಧೆ ಇರಬಹುದು. ಸಂಜೆ ಹೊತ್ತು, ಬೆಳಗ್ಗಿನ ಹೊತ್ತು ಗುಂಯ್ಯೆಂದು ತಗ್ಗಿನಲ್ಲಿ ಯಾವುದಾದರೂ ಕೀಟ ಹಾರುವುದು ಕಂಡು ಬಂದರೆ ಅದನ್ನು ಯಾವುದಾದರೂ ಗೆಲ್ಲಿನ ಸಹಾಯದಿಂದ ಹೊಡೆದು ನೋಡಿ ಅದು ಕೆಂಪು ಮೂತಿ ಹುಳವಾಗಿದ್ದರೆ ಅದು ಮೊಟ್ಟೆ ಇಡಲು ಜಾಗ ಅರಸುತ್ತಿರಬಹುದು.

ತೆಂಗಿನ ಮರದ ಬುಡದಲ್ಲಿ ಕಾಂಡದ ರಸ ಹೀರಿದ ಚೂರುಗಳು ಬಿದ್ದಿದ್ದರೆ, ಅದು ಕೆಂಪು ಮೂತಿ ಹುಳದ್ದು ಇರುವ ಸಾಧ್ಯತೆಗಳಿವೆ. ಬುಡ ಭಾಗದಲ್ಲಿ ರೇಶ್ಮೆ ಗೂಡಿನ ತರಹದ ತೆಂಗಿನ ನಾರಿನ ಹುಡಿಯ ಗೂಡು ಬಿದ್ದಿದೆಯೇ, ಅದು ಕೆಂಪು ಮೂತಿ ಹುಳ ಪ್ಯೂಪೆ ಹಂತದಿAದ ಹೊರ ಬಂದದ್ದಿರಬಹುದು. ಒಂದು ಮರ\ಸಸಿ ಸತ್ತಿದ್ದರೆ ಅಲ್ಲಿಗೆ ಕೆಂಪು ಮೂತಿ ಹುಳ ಬರುತ್ತದೆ. ಇವೆಲ್ಲಾ ಚಿನ್ಹೆಯ ಮೂಲಕ ನಿಮ್ಮಲ್ಲಿ ಕೆಂಪು ಮೂತಿ ಹುಳುವಿನ ಇರುವಿಕೆಯನ್ನು ಪತ್ತೆ ಮಾಡಬಹುದು. 

ಮಾಹಿತಿ: ರಾಧಾಕೃಷ್ಣ ಹೊಳ್ಳ