ಮನೆಗೆಲಸದ ಕಾರ್ಮಿಕರ ಕಲ್ಯಾಣಕ್ಕಾಗಿ ಸರಕಾರವು ಕಾನೂನು ತರುವತ್ತ ಚಿಂತನೆ ನಡೆಸಿರುವುದು ಗಮನಾರ್ಹ ವಿಷಯ. ಅಸಂಘಟಿತ ವಲಯದಲ್ಲಿ ಬರುವ ಮತ್ತು ಸಾಕಷ್ಟು ಅವಗಣನೆಗೆ ಒಳಗಾಗಿರುವ ದುಡಿಮೆಯ ಈ ಕ್ಷೇತ್ರದತ್ತ ಗಮನ ಹರಿಸಿರುವ ನಡೆ ಸ್ವಾಗತಾರ್ಹವಾಗಿದೆ. ಇದಕ್ಕಾಗಿ ರೂಪುಗೊಳ್ಳಲಿರುವ ಮಸೂದೆಯು ಶೀಘ್ರವೇ ಅನುಮೋದನೆಗೊಂಡು ಕಾನೂನಾಗಿ ಜಾರಿಗೆ ಬರಬೇಕಿದೆ ಮತ್ತು ಈ ಕಾರ್ಮಿಕರಿಗಾಗಿ ಕಲ್ಯಾಣ ಮಂಡಳಿ ಸ್ಥಾಪನೆಯಾಗಬೇಕಿದೆ.
ಮನೆ ಕೆಲಸದ ಕಾರ್ಮಿಕರ ಕಲ್ಯಾಣ, ಸಾಮಾಜಿಕ ಭದ್ರತೆಗಾಗಿ ಕರ್ನಾಟಕ ರಾಜ್ಯ ಮನೆ ಕೆಲಸದ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಮಸೂದೆಯ ಕರಡನ್ನು ಸರಕಾರ ಸಿದ್ದಪಡಿಸಿದೆ. ಇದರಡಿ ಮಂಡಳಿಯನ್ನು ಅಸ್ತಿತ್ವಕ್ಕೆ ತಂದು ಅದರ ಮೂಲಕ ವಿವಿಧ ಕಾರ್ಯಕ್ರಮ, ಯೋಜನೆಗಳನ್ನು ಹಮ್ಮಿಕೊಳ್ಳುವುದು, ನಿಯಮಗಳನ್ನು ರೂಪಿಸುವುದು ಸರಕಾರದ ಚಿಂತನೆ. ಮನೆ ಕೆಲಸದ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳುವವರು, ಸೇವಾ ಪೂರೈಕೆದಾರರು, ಏಜೆನ್ಸಿಗಳು, ಡಿಜಿಟಲ್ ವೇದಿಕೆಗಳು ಇದರಡಿ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ಶೇ. ೫ರಷ್ಟು ಉಪಕರದ ಮೂಲಕ ವಿವಿಧ ಕಲ್ಯಾಣ ಕಾರ್ಯಕ್ರಮಗಳಿಗೆ ಅಗತ್ಯವಾದ ನಿಧಿಯನ್ನು ರೂಪಿಸಲಾಗುತ್ತದೆ. ಮನೆ ಕೆಲಸಕ್ಕೆ ನೇಮಕ ಮಾಡಿಕೊಳ್ಳುವಾಗ ಒಪ್ಪಂದ ಪತ್ರಕ್ಕೆ ಸಹಿ ಹಾಕುವುದು, ಕೆಲಸದ ಸಮಯ, ರಜೆ, ಗಳಿಕೆ ರಜೆ, ಹೆರಿಗೆ ರಜೆ, ವಾರದ ರಜೆ ನೀಡುವುದು ಇತ್ಯಾದಿ ಮನೆ ಕೆಲಸದ ಕಾರ್ಮಿಕರ ಹಿತರಕ್ಷಣೆಯ ದೃಷ್ಟಿಯಿಂದ ಹಲವು ನಿಯಮಗಳು, ನಿಬಂಧನೆಗಳನ್ನು ಕರಡು ಮಸೂದೆಯಲ್ಲಿ ಪ್ರಸ್ತಾವಿಸಲಾಗಿದೆ. ಒಟ್ಟಿನಲ್ಲಿ ಮನೆ ಕೆಲಸವನ್ನು ಒಂದು ಗೌರವಯುತವಾದ ವೃತ್ತಿಯಾಗಿ ಪರಿಗಣಿಸುವ ನಿಟ್ಟಿನಲ್ಲಿ ಈ ಕಾನೂನು ಇರಲಿದೆ.
ಮನೆ ಕೆಲಸ, ಮನೆ ಕೆಲಸದವರನ್ನು ಬಹಳ ಲಘುವಾಗಿ 'ಕಾಣುವ ಪ್ರವೃತ್ತಿ ನಮ್ಮ ಸಮಾಜದಲ್ಲಿ ಬಹಳ ಹಿಂದಿನಿಂದಲೂ ಇದೆ. ಕಾಲ ಸಾಕಷ್ಟು ಬದಲಾಗಿದ್ದರೂ ಈ ಮನೋಭಾವ ಇನ್ನೂ ಬದಲಾಗಿಲ್ಲ ಮನೆ ಕೆಲಸ ಎಂಬುದು ಒಂದು ವಿಶಾಲ ವ್ಯಾಪ್ತಿಯ ವಿಷಯವಾಗಿದ್ದು, ಗೃಹ ಪರಿಚಾರಕರು, ಮನೆಯಲ್ಲಿ ಸೇವೆ ಸಲ್ಲಿಸುವ ದಾದಿಯರು, ಅಡುಗೆಯವರು, ವಾಹನ ಚಾಲಕರು ಹೀಗೆ ಹಲವಾರು ವಿಧದ ಕಾರ್ಮಿಕರು ಇದರಡಿ ಬರುತ್ತಾರೆ. ಇವರಾರೂ ಸಂಘಟಿತ ಕಾರ್ಮಿಕರಲ್ಲ. ಜತೆಗೆ ಮನೆಗೆಲಸದ ಬಗೆಗಿರುವ ಅವಜ್ಞೆಯೇ ಈ ಕಾರ್ಮಿಕರ ಕುರಿತಾಗಿಯೂ ಇದೆ. ಇದರ ಪರಿಣಾಮವಾಗಿಯೇ ಸಾಕಷ್ಟು ಸಂದರ್ಭಗಳಲ್ಲಿ ಇವರು ಶೋಷಣೆಗೆ ಗುರಿಯಾಗುವುದು ಕೂಡ ಇದೆ. ವೃತ್ತಿಯ ಸಂದರ್ಭದಲ್ಲಿ ಕನಿಷ್ಠ ಸೌಲಭ್ಯಗಳ ನಿರಾಕರಣೆ, ರಜೆ ನಿರಾಕರಣೆ, ಕೀಳಾಗಿ ಕಾಣುವುದು ಈ ವರ್ಗದ ಕಾರ್ಮಿಕರನ್ನು ಕಾಡುತ್ತಿದೆ. ಪ್ರಸ್ತುತ ಸರಕಾರವು ತರಲು ಉದ್ದೇಶಿಸಿರುವ ಮಸೂದೆಯು ಕಾನೂನಾಗಿ ಜಾರಿಗೆ ಬಂದಾಗ ಇಂತಹ ಸಮಸ್ಯೆಗಳನ್ನೆಲ್ಲ ನಿವಾರಿಸಿ ಮನೆ ಕೆಲಸಕ್ಕೂ ವೃತ್ತಿ ಘನತೆ, ಗೌರವಗಳನ್ನು ಒದಗಿಸುವ ಉದ್ದೇಶ ಹೊಂದಿದೆ.
ಮನೆ ಕೆಲಸ ಮಾತ್ರವಲ್ಲ ಗಿಗ್ ಕಾರ್ಮಿಕರು, ನಿರ್ಮಾಣ ಕಾರ್ಮಿಕರು -ಹೀಗೆ ಅಸಂಘಟಿತ ವಲಯದಲ್ಲಿ ಬರುವ ಹಲವಾರು ವಿಧದ ಕಾರ್ಮಿಕರು ನಮ್ಮ ನಡುವೆ ಇದ್ದಾರೆ. ಈ ಒಂದೊಂದೇ ಕ್ಷೇತ್ರಕ್ಕೆ ಕಲ್ಯಾಣ ಕಾರ್ಯಕ್ರಮ, ಯೋಜನೆಗಳನ್ನು ಪರಿಚಯಿಸುವ ಪ್ರಯತ್ನ ಆಗುತ್ತಿದೆ ಎಂಬುದು ಸಮಾಧಾನಕರ ವಿಷಯ. ಇತ್ತೀಚೆಗೆ ಗಿಗ್ ಕೆಲಸಗಾರರಿಗಾಗಿ ಸರಕಾರ ಯೋಜನೆಗಳನ್ನು ಆರಂಭಿಸಿತ್ತು. ಅದೇರೀತಿ ನಿರ್ಮಾಣ ಕೆಲಸಗಾರರ ನೋಂದಣಿ, ಅಪಘಾತ ವಿಮೆಯಂತಹ ಪ್ರಯತ್ನಗಳು ನಡೆದಿವೆ. ಇದೇ ರೀತಿ ಗೃಹ ಕಾರ್ಮಿಕರಿಗಾಗಿಯೂ ಕಲ್ಯಾಣ ಮಂಡಳಿ ಸ್ಥಾಪನೆಗೆ ಮುಂದಾಗಿರುವುದು ಶ್ಲಾಘನೀಯ, ಇನ್ನೀಗ ಈ ಕಾನೂನು ಚೆನ್ನಾಗಿ ಅನುಷ್ಟಾನಗೊಳ್ಳುವ ನಿಟ್ಟಿನಲ್ಲಿ ಸಂಬಂಧಪಟ್ಟವರು ಶ್ರಮಿಸಬೇಕು.
ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೨೩-೦೯-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!