ಕನ್ನಡದ ಮಹಾನ್ ಸಾಹಿತಿ ಎಸ್.ಎಲ್. ಭೈರಪ್ಪ (94) ಇವತ್ತು, 24 ಸಪ್ಟಂಬರ್ 2025ರಂದು ನಮ್ಮನ್ನು ಅಗಲಿದ್ದಾರೆ. ಅವರು ಸರಸ್ವತಿ ಸಮ್ಮಾನ್, ಪದ್ಮಭೂಷಣ ಇತ್ಯಾದಿ ಹಲವು ಪ್ರಶಸ್ತಿ ಗಳಿಸಿದ ಹಿರಿಯ ಸಾಹಿತಿ.

ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ ಅವರು ತಮ್ಮ 23 ಕಾದಂಬರಿಗಳು ಹಾಗೂ ಚಿಂತನ ಕೃತಿಗಳ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರು. ಅವರು ಬರೆದ ಧರ್ಮಶ್ರೀ, ದೂರಸರಿದರು, ಜಲಪಾತ, ನಿರಾಕರಣ, ದಾಟು, ಅಂಚು, ಮಂದ್ರ, ಆವರಣ ಇತ್ಯಾದಿ ಕಾದಂಬರಿಗಳನ್ನು ನೆನಪು ಮಾಡಿಕೊಳ್ಳುವಾಗ ಆ ಕಾದಂಬರಿಗಳಲ್ಲಿ ಅವರು ಸೃಷ್ಟಿಸಿದ ಭಾವಲೋಕ ಮನಃಪಟಲದಲ್ಲಿ ಹಾದುಹೋಗುತ್ತದೆ. ಓದುಗನನ್ನು ಕಾದಂಬರಿಯ ಲೋಕಕ್ಕೆ ಒಯ್ಯುವ ಶಕ್ತಿ ಅವರ ಬರಹಕ್ಕಿತ್ತು. 

ಅವರ “ಪರ್ವ” ಕಾದಂಬರಿ ಮಹಾಭಾರತದ ಮರುಸೃಷ್ಟಿ. ಆ ಸವಾಲಿನ ಕಾಯಕವನ್ನು ದಕ್ಷತೆಯಿಂದ ನಿರ್ವಹಿಸಲಿಕ್ಕಾಗಿ ಅವರು ನಡೆಸಿದ ಅಧ್ಯಯನ ಹಾಗೂ ಕ್ಷೇತ್ರಭೇಟಿಗಳ ವಿವರಗಳನ್ನು ಓದಿದರೆ ಮಾತ್ರ ಸಾಹಿತ್ಯ ಸೃಷ್ಟಿಯನ್ನು ಭೈರಪ್ಪನವರು ಎಷ್ಟು ಗಂಭೀರವಾಗಿ ಪರಿಗಣಿಸಿದ್ದರು ಎಂಬುದು ನಮಗೆ ತಿಳಿಯುತ್ತದೆ. 

ಎಸ್.ಎಲ್. ಭೈರಪ್ಪನವರ “ಆವರಣ” ಕಾದಂಬರಿ ಹಲವು ವಿವಾದಗಳಿಗೆ ಕಾರಣವಾಯಿತು. ಭಾರತದ ಚರಿತ್ರೆಯಲ್ಲಿ ಬಹುಸಂಖ್ಯಾತರ ಮೇಲಾದ ಅನ್ಯಾಯಗಳನ್ನು, ಅತಿರೇಕಗಳನ್ನು ಕಣ್ಣಿಗೆ ಕಟ್ಟುವಂತೆ ಅದರಲ್ಲಿ ಚಿತ್ರಿಸಿದ್ದಾರೆ. ಅವಕ್ಕೆಲ್ಲ ಸುಮಾರು 150 ಚಾರಿತ್ರಿಕ ಸಾಕ್ಷ್ಯಗಳನ್ನು ಕಾದಂಬರಿಯ ಅನುಬಂಧದಲ್ಲಿ ನೀಡಿದ್ದಾರೆ. ಆದ್ದರಿಂದಲೇ ಆ ಕಾದಂಬರಿಯನ್ನು ನಿಷೇಧಿಸಲು ಕೆಲವರು ನಡೆಸಿದ ಪ್ರಯತ್ನಗಳು ಸಫಲವಾಗಲಿಲ್ಲ. 

ಕಾದಂಬರಿಯ ಪಾತ್ರಗಳ ಯೋಚನಾ ಲಹರಿಯ ಎಳೆಎಳೆಯನ್ನು ಸಶಕ್ತವಾಗಿ ಚಿತ್ರಿಸಿ, ಓದುಗನ ಹೃದಯದಲ್ಲಿ ಬಿಂಬಿಸುವ ಕಲೆ ಅವರಿಗೆ ಸಿದ್ಧಿಸಿತ್ತು. ಉದಾಹರಣೆಗೆ “ಮಂದ್ರ” ಮತ್ತು “ಅಂಚು” ಕಾದಂಬರಿಗಳು. “ಮಂದ್ರ”ದಲ್ಲಿ ಸಂಗೀತದ ಸ್ವರಗಳೇ ಪಾತ್ರಗಳಾಗಿ ನಮ್ಮ ಮನ ತಟ್ಟುತ್ತವೆ. “ಅಂಚು” ಕಾದಂಬರಿಯ ಮುಖ್ಯ ಪಾತ್ರ ಒಂದು ತುದಿಯಿಂದ ಇನ್ನೊಂದು ತುದಿಗೆ ತೊನೆದಾಡುವ ಉಯ್ಯಾಲೆಯಂತೆ, ಪ್ರತಿಯೊಂದು ಜೀಕಿನಲ್ಲಿಯೂ ನಮ್ಮನ್ನು ಚಿಂತನೆಯ ಅಂಚಿಗೆ ತಂದು ನಿಲ್ಲಿಸುತ್ತದೆ. 

ಆದ್ದರಿಂದಲೇ ಅವರ ಎಲ್ಲ ಕಾದಂಬರಿಗಳು ಹತ್ತಾರು ಬಾರಿ ಮರುಮುದ್ರಣವಾಗಿವೆ. ಅವರ ಹಲವು ಕಾದಂಬರಿಗಳು ಹಿಂದಿ, ಮರಾಠಿ, ಇಂಗ್ಲಿಷ್ ಇತ್ಯಾದಿ ಭಾಷೆಗಳಿಗೆ ಅನುವಾದವಾಗಿ ಜನಮಾನಸವನ್ನು ಗೆದ್ದಿವೆ. ಕನ್ನಡದಲ್ಲಿ ಯಾವ ಸಾಹಿತಿಯ ಕಾದಂಬರಿಗಳನ್ನು ಅತ್ಯಂತ ಹೆಚ್ಚು ಓದುಗರು ಓದಿದ್ದಾರೆ ಎಂದು ಕೇಳಿದರೆ ಎಸ್.ಎಲ್. ಭೈರಪ್ಪನವರ ಹೆಸರು ಮುಂಚೂಣಿಗೆ ಬರುತ್ತವೆ. ಅವರ ಗೃಹಭಂಗ ಕಾದಂಬರಿ ಧಾರಾವಾಹಿಯಾಗಿ, ವಂಶವೃಕ್ಷ, ಮತದಾನ ಮತ್ತು ತಬ್ಬಲಿಯು ನೀನಾದೆ ಮಗನೇ ಕಾದಂಬರಿ ಚಲನಚಿತ್ರವಾಗಿ ಪ್ರೇಕ್ಷಕರ ಮನಗೆದ್ದಿವೆ. 

ಅವರ ಕಾದಂಬರಿಗಳ ಜನಪ್ರಿಯತೆಯಿಂದಾಗಿಯೇ ಕೆಲವರಿಗೆ ಅವರ ಬಗ್ಗೆ ಇನ್ನಿಲ್ಲದ ಮತ್ಸರ. ಅಂಥವರು ಅವರ ಮನೆಗೆ ಹಲವಾರು ದಿನ ರಾತ್ರಿ ಕಲ್ಲೆಸೆದು ಅವರನ್ನು ಹೆದರಿಸುವ ಮಟ್ಟಕ್ಕೂ ಇಳಿದಿದ್ದರು. ಇವೆಲ್ಲವನ್ನೂ ಅವರು ತಮ್ಮ ಆತ್ಮವೃತ್ತಾಂತ “ಭಿತ್ತಿ”ಯಲ್ಲಿ ದಾಖಲಿಸಿದ್ದಾರೆ. 

ಪ್ರತಿಯೊಬ್ಬರೂ ಓದಲೇ ಬೇಕಾದ ಪುಸ್ತಕ “ಭಿತ್ತಿ”. ಅದನ್ನು ಓದುತ್ತಿದ್ದಂತೆ ಬದುಕಿನ ಕಷ್ಟಗಳು ಹೇಗಿರುತ್ತವೆ ಎಂಬ ಕಲ್ಪನೆ ಮೂಡುತ್ತದೆ. ಹಾಸನ ಜಿಲ್ಲೆಯ ಸಂತೇಶಿವರದಲ್ಲಿ 1931ರಲ್ಲಿ ಜನಿಸಿದ ಭೈರಪ್ಪನವರ ಬಾಲ್ಯ ಸಂಕಟಗಳಿಂದ ತುಂಬಿತ್ತು. ತೀವ್ರ ಬಡತನದಿಂದಾಗಿ ಮನೆಯಲ್ಲಿ ಊಟಕ್ಕೂ ತತ್ವಾರ. ಆಗ ಅವರ ಊರಿನ ಸುತ್ತಮುತ್ತ ಪ್ಲೇಗಿನ ತಾಂಡವ. ಅವರ ಅಣ್ಣ, ಅಕ್ಕ ಹಾಗೂ ತಮ್ಮ ಪ್ಲೇಗಿಗೆ ಬಲಿಯಾಗುತ್ತಾರೆ. ಆಗೆಲ್ಲ, ತಮ್ಮ ತಂದೆಯ ಬೇಜವಾಬ್ಡಾರಿ ಹೇಗಿತ್ತು ಎಂಬುದನ್ನು ದಾಖಲಿಸಿದ್ದಾರೆ ಭೈರಪ್ಪನವರು. ತಮ್ಮನ ಶವವನ್ನು ಅವರೇ ಹೆಗಲಿನಲ್ಲಿ ಹೊತ್ತು ಶ್ಮಶಾನಕ್ಕೆ ಒಯ್ದು ಅಂತ್ಯ ಸಂಸ್ಕಾರ ನಡೆಸಿದ ವಿವರಗಳನ್ನು ಓದುತ್ತಿದ್ದಂತೆ ನಮ್ಮ ಕಣ್ಣು ಮಂಜಾಗುತ್ತದೆ. ಅವರ ಕುಟುಂಬ ಉಳಿದದ್ದೇ ಅವರ ತಾಯಿಯ ಕಷ್ಟಸಹಿಷ್ಣುತೆಯಿಂದಾಗಿ. ಆದರೆ ತಾಯಿಯನ್ನು ಬಾಲ್ಯದಲ್ಲಿ ಕಳೆದುಕೊಂಡಾಗ, ಭೈರಪ್ಪನವರಿಗೆ ದಿಕ್ಕುತೋಚದಂತಾಗುತ್ತದೆ. 

ಶಾಲಾ ಶಿಕ್ಷಣಕ್ಕಾಗಿ ತನ್ನ ಮಾವನ ಮನೆಯಲ್ಲಿದ್ದರು ಎಸ್.ಎಲ್. ಭೈರಪ್ಪ. ಅತ್ಯಂತ ಕ್ರೂರಿಯೂ ಕಾಮುಕನೂ ಆದ ಆ ಮಾವ ನೀಡುತ್ತಿದ್ದ ದೈಹಿಕ ಹಾಗೂ ಮಾನಸಿಕ ಹಿಂಸೆಯ ವಿವರಗಳನ್ನು ಓದುತ್ತಿದ್ದಂತೆ ಬೆಚ್ಚಿ ಬೀಳುತ್ತೇವೆ. ನಂತರ, ವಾರಾನ್ನದವರ ಕೃಪೆಯಿಂದ ಹೈಸ್ಕೂಲ್ ಶಿಕ್ಷಣ ಮುಗಿಸುತ್ತಾರೆ ಭೈರಪ್ಪನವರು. ಬಾಲ್ಯದ ದಾರುಣ ಬಡತನ, ಅವಮಾನಗಳೇ ಮುಂದೆ ಅವರ ಬರವಣಿಗೆಗೆ ಬಲ ನೀಡಿದವು. ಕಾಲೇಜು ಶಿಕ್ಷಣವನ್ನು ಮೈಸೂರಿನಲ್ಲಿ ಪಡೆದ ಎಸ್.ಎಲ್. ಭೈರಪ್ಪನವರು ಎಂ.ಎ.ಯನ್ನು ಚಿನ್ನದ ಪದಕ ಗಳಿಸಿ ಪೂರೈಸಿದರು. ಬರೋಡಾದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯದಿಂದ “ಸತ್ಯ ಮತ್ತು ಸೌಂದರ್ಯ” ಎಂಬ (ಇಂಗ್ಲೀಷಿನಲ್ಲಿ ಬರೆದ) ಮಹಾಪ್ರಬಂಧಕ್ಕಾಗಿ ಡಾಕ್ಟರೇಟ್ ಗಳಿಸಿದರು. ಅನಂತರ ಪ್ರಾಧ್ಯಾಪಕರಾಗಿ ಹಲವು ವಿದ್ಯಾಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ ಭೈರಪ್ಪನವರು ಉನ್ನತ ಹುದ್ದೆಯ ಆಮಿಷಗಳನ್ನು ಜೀವನದುದ್ದಕ್ಕೂ ನಿರಾಕರಿಸಿ, ಸಾಹಿತ್ಯಸೇವೆಗೆ ತನ್ನನ್ನು ಮುಡಿಪಾಗಿಸಿಕೊಂಡರು. 

ಮೈಸೂರಿನಲ್ಲಿ ವಾಸವಿದ್ದ ಎಸ್.ಎಲ್. ಭೈರಪ್ಪನವರು ಹಲವಾರು ದಿನಗಳಿಂದ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವತ್ತು ರಾಜರಾಜೇಶ್ವರಿ ನಗರದ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ನಿಧನರಾದರು. 

ಇದೇ ವರುಷ, 12 ಜನವರಿ 2025ರಂದು ಮಂಗಳೂರಿನ “ಸಾಹಿತ್ಯ ಹಬ್ಬ” (ಲಿಟ್ ಫೆಸ್ಟ್)ದಲ್ಲಿ ಎಸ್.ಎಲ್. ಭೈರಪ್ಪನವರು ಭಾಗವಹಿಸಿದ್ದರು. ಆಗ ಅವರನ್ನು ಭೇಟಿಯಾಗಿ, “ನಿರಾಕರಣ” ಕಾದಂಬರಿಯಲ್ಲಿ ಅವರ ಹಸ್ತಾಕ್ಷರ ಪಡೆದಿದ್ದೆ. (ಫೋಟೋ 2) ಅದು, ಎಸ್.ಎಲ್. ಭೈರಪ್ಪ ಎಂಬ ಮಹಾನ್ ಚೇತನವನ್ನು ಮತ್ತೆಮತ್ತೆ ನೆನಪು ಮಾಡುವ ಸ್ಮರಣಿಕೆಯಾಗಿ ನನ್ನೊಂದಿಗಿದೆ. ಆ ಮಹಾನ್ ಸಾಹಿತಿಗೆ, ಧೀಮಂತ ಚೇತನಕ್ಕೆ ಇದು ನನ್ನ ನುಡಿನಮನ.