ಕನ್ನಡ ಸಾರಸ್ವತ ಲೋಕಕ್ಕೆ ಈ ನವರಾತ್ರಿಯ ಈ 'ಪರ್ವ' ಕಾಲ ನೋವು ತುಂಬಿದ ಗಳಿಗೆ. ಕನ್ನಡದ ಕಾದಂಬರಿ ಸಾಹಿತ್ಯಕ್ಕೆ ಅಗ್ರಮಾನ್ಯತೆ ತಂದ ಕೊಟ್ಟ ಕಾದಂಬರಿಕಾರ, ಚಿಂತಕ, ಡಾ. ಎಸ್ ಎಲ್ ಭೈರಪ್ಪ ಅವರು ವಯೋಸಹಜ ಕಾರಣಗಳಿಂದ ನಿರ್ಗಮಿಸಿದ್ದಾರೆ. ತಮ್ಮ ಹಿಂದೆ ಶ್ರೇಷ್ಠ ಸಾಹಿತ್ಯವನ್ನು ಬಿಟ್ಟು ಹೋಗಿದ್ದಾರೆ. ಕನ್ನಡದ ಜನತೆ ಸದಾ ಕಾಲ ಸ್ಮರಿಸಬೇಕಾದ ಕಾದಂಬರಿ ಪಾತ್ರಗಳನ್ನು, ಅವುಗಳ ಮೂಲಕ ಗಹನ ಚಿಂತನೆಯನ್ನು ಅವರು ನೀಡಿದವರು. ಅವರ ಸಾಹಿತ್ಯಕ್ಕೆ ಪರಮೋನ್ನತ ಸ್ಥಾನ ನೀಡಿರುವುದು ಅವರು ಯಾವತ್ತೂ ಅನುಸರಿಸಿಕೊಂಡು ಬಂದ ಸತ್ಯಾನ್ವೇಷಣೆಯ ತಹತಹ, ಕಾಪಾಡಿಕೊಂಡು ಬಂದ ತಾತ್ವಿಕತೆಯ ಭಿತ್ತಿಗಳು. ಭಾರತೀಯ ಸಾಹಿತ್ಯದಲ್ಲಿ ಶ್ರೇಷ್ಠ ಕೃತಿಕಾರರಿಗೆ ನೀಡಲಾಗುವ ಸರಸ್ವತಿ ಸಮ್ಮಾನ್ ಪ್ರಶಸ್ತಿಯನ್ನು ಪಡೆದಿರುವ ಅವರು ಪದ್ಮಶ್ರೀ, ಪದ್ಮಭೂಷಣ ಪುರಸ್ಕೃತರು ಸಹ ಆಗಿದ್ದಾರೆ. ಅವರ ಕೃತಿಗಳು ಇತರ ಭಾರತೀಯ ಭಾಷೆಗಳಿಗೆ ಜೊತೆಗೆ ರಷ್ಯನ್, ಜರ್ಮನ್, ಚೈನೀಸ್‌ನಂಥ ಭಾಷೆಗಳಿಗೂ ಅನುವಾದವಾಗಿವೆ. ಅಲ್ಲಿನ ಜನತೆ ಕೂಡ ಅವರನ್ನು ಓದಿ ಮೆಚ್ಚಿಕೊಂಡಿರುವುದು ಭೈರಪ್ಪನವರು ವಿಶ್ವಮಾನ್ಯ ಸಾಹಿತಿಯಾಗಿದ್ದರು ಎಂಬುದಕ್ಕೆ ಸಾಕ್ಷಿ. ಕನ್ನಡದಲ್ಲಿ ಜನಪ್ರಿಯತೆಯಲ್ಲಿ ಅವರನ್ನು ಮೀರಿಸುವವರು ಇರಲಿಲ್ಲ. ಅವರು ತತ್ವಶಾಸ್ತ್ರ ಪ್ರಾಧ್ಯಾಪಕರೂ ಆಗಿದ್ದರಿಂದ ಅದರ ತಳಪಾಯವೂ ಅವರ ಕೃತಿಗಳಲ್ಲಿತ್ತು. ಅವರ ಪ್ರತಿಯೊಂದು ಕೃತಿಯ ಹಿಂದೆಯೂ ಗಾಢ ಅಧ್ಯಯನ, ಪ್ರವಾಸ ಇರುತ್ತಿದ್ದವು.

ಹಾಸನ ಜಿಲ್ಲೆಯ ಪುಟ್ಟ ಹಳ್ಳಿ ಸಂತೇಶಿವರದಲ್ಲಿ ಜನಿಸಿದ ಭೈರಪ್ಪನವರು ಬಾಲ್ಯದಲ್ಲಿ ಕಂಡುಂಡ ಕಷ್ಟನಷ್ಟ ಅಂತಿಂಥದ್ದಲ್ಲ. ಕಿತ್ತು ತಿನ್ನುವ ಬಡತನ. ಬೇಜವಾಬ್ದಾರಿ ತಂದೆ, ಪ್ರೇಗ್ ಮಾರಿಯಿಂದ ಉಂಟಾದ ಕುಟುಂಬದ ಸಾವುಗಳು ಇವೆಲ್ಲವೂ ಅವರ ಜೀವನದ ಕುರಿತ ಅವರ ಒಳನೋಟಗಳನ್ನು ರೂಪಿಸಿದವು. ಈ ಎಲ್ಲಾ ಪ್ರತಿಕೂಲತೆಗಳ ನಡುವೆಯೇ ಭಿಕ್ಷಾನ್ನ, ವಾರಾನ್ನ ಮಾಡಿಕೊಂಡು ಶಿಕ್ಷಣ ಮುಂದುವರಿಸಿ ರಾಂಕ್ ವಿದ್ಯಾರ್ಥಿ ಆಗಿ ತರ್ಕಶಾಸ್ತ್ರ, ಮನಶ್ಯಾಸ್ತ್ರ, ತತ್ವಶಾಸ್ತ್ರಗಳನ್ನು ಕಲಿತು ಪ್ರಾಧ್ಯಾಪಕರಾದದು, ದೇಶವಿದೇಶಗಳನ್ನು ಸುತ್ತಾಡಿದ್ದು, ರಾಷ್ಟ್ರೀಯ ಶಿಕ್ಷಣ ಪಠ್ಯ ರಚನೆಯಲ್ಲಿ ಕೈಗೂಡಿಸಿದ್ದು ಇವೆಲ್ಲವೂ ನೆನೆಯಬೇಕಾದ ಸಂಗತಿಗಳು, ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಬರುವ ಕಷ್ಟಗಳನ್ನು ಅನುಭವಗಳನ್ನಾಗಿ ಪರಿವರ್ತಿಸಿಕೊಂಡು ಹೇಗೆ ಪರಿಣಾಮಕಾರಿಯಾಗಿ ಅಕ್ಷರರೂಪದಲ್ಲಿ ಮೂಡಿಸಬಹುದು ಎಂಬುದಕ್ಕೆ ಭೈರಪ್ಪನವರು ನಿದರ್ಶನ.

ಭೈರಪ್ಪನವರು ಧರ್ಮಶ್ರೀ'ಯಿಂದ ಆರಂಭಿಸಿ ಉತ್ತರಕಾಂಡ ದವರೆಗೆ ಇಪ್ಪತ್ತೊರು ಮಹತ್ವಪೂರ್ಣ ಕಾದಂಬರಿಗಳನ್ನು ಬರೆದಿದ್ದಾರೆ. ಸತ್ಯ ಮತ್ತು ಸೌಂದರ್ಯ ಮೊದಲಾದ ಗಂಭೀತರ ಚಿಂತನಾತ್ಮಕ ಪ್ರಬಂಧಗಳನ್ನೂ ಬರೆದಿದ್ದಾರೆ. ಅವರ ಒಂದೊಂದು ಕಾದಂಬರಿಯೂ ಒಂದೊಂದು ತಾತ್ವಿಕತೆಯ ಹುಡುಕಾಟವೇ ಆಗಿದೆ. 'ಪರ್ವ' ದ ಮೂಲಕ ಭಾರತೀಯ ಪುರಾಣಕ್ಕೆ ವಾಸ್ತವದ ಸ್ಪರ್ಶ ನೀಡಿದರೆ, 'ಗೃಹಭಂಗ'ದ ಮೂಲಕ ಭಾರತೀಯ ಕೆಳಮಧ್ಯಮ ವರ್ಗದ ಜೀವನ ಕಥನವನ್ನು ಮಂಡಿಸಿದರು. 'ವಂಶವೃಕ್ಷ'ದ ಮೂಲಕ ಮನುಷ್ಯನ ಜೀವನದ ಸಾರ್ಥಕತೆಯ ಹುಡುಕಾಟ, ಅನ್ನೇಷಣ' 'ನೆಲೆ' 'ನಿರಾಕರಣ'ಗಳ ಮೂಲಕ ಮನುಷ್ಯನ ಆಧ್ಯಾತ್ಮಿಕ ಶೋಧ. 'ಅಂಚು', ತಂತು' 'ದೂರ ಸರಿದರು' ಮೂಲಕ ಮನುಷ್ಯನ ಮನೋವೈಜ್ಞಾನಿಕ ಗಹನ ನೆಲೆಗಳು, 'ದಾಟು' ಮೂಲಕ ಭಾರತದ ಪ್ರಮೀಣ ವ್ಯವಸ್ಥೆಯ ಅಧಃಪತನ, ಮಂದ್ರ'ದ ಮೂಲಕ ಕಲೆಯಲ್ಲಿ ಮನುಷ್ಯನ ತೊಡಗುವಿಕೆಯ ಪ್ರವೃತ್ತಿ, 'ಉತ್ತರಕಾಂಡ ಮೂಲಕ ಸ್ತ್ರೀತ್ವದ ಅನ್ವೇಷಣೆ, 'ಆವರಣ'ದ ಇತಿಹಾಸದ ವಾಸ್ತವಗಳ ಅನಾವರಣ ಮಾಡಿದ್ದಾರೆ. ಎಲ್ಲವೂ ಅಪಾರ ಜನಮೆಚ್ಚುಗೆ ಗಳಿಸಿವೆ. ಭೈರಪ್ಪನವರು ತಮ್ಮ ಪ್ರತಿಯೊಂದೂ ಕಾದಂಬರಿ ಬರೆಯುವುದಕ್ಕೆ ಮಾಡುವ ಪೂರ್ವಭಾವಿ ತಯಾರಿ, ನಡೆಸುವ ಅಧ್ಯಯನ, ವ್ಯಾಪಕ ಸಂಚಾರ, ಕಂಡುಕೊಳ್ಳುವ ಅನುಭವ ಇದೆಲ್ಲವೂ ಬಹಳ ವಿಶಿಷ್ಟವಾದವು.

ಭೈರಪ್ಪನವರು ಅಕ್ಷರಜೀವಿಯಷ್ಟೇ ಅಲ್ಲ, ಅವರು ಬರೆದಂತೆ ನಡೆದೂ ತೋರಿಸಿದವರು. ತಮ್ಮ ಊರಿಗೆ ಅವರು ಸಲ್ಲಿಸಿದ ಕೃತಜ್ಞತೆಯ ಸ್ವರೂಪ ಅವಿಸ್ಮರಣೀಯ. ತಮ್ಮ ಹುಟ್ಟೂರು ಸಂತೇಶಿವರದಲ್ಲಿನ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಪರಿಹಾರ ಒದಗಿಸಲು. ನೀರು ಪೂರೈಸಲು ಅವರು ಮಾಡಿದ ಪ್ರಯತ್ನ ನೆನಪಿಡಬೇಕಾದು, ಇವರ ಮೂಲಕ ಚನ್ನರಾಯಪಟ್ಟಣ ತಾಲೂಕಿನ ಸಂತೇಶಿವರ ಮತ್ತು ಅಗ್ರಹಾರ ಬೆಳಗುಲಿ ಗ್ರಾಮಗಳ ಕೆರೆ ಕಟ್ಟೆಗಳಿಗೆ ಸರಕಾರದ ವತಿಯಿಂದ ಏತ ನೀರಾವರಿ ಯೋಜನೆಯಲ್ಲಿ ನೀರು ಪೂರೈಕೆಯಾಯಿತು. ಸುತ್ತಲ ೨೦ಕ್ಕೂ ಹೆಚ್ಚು ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಏರಿಕೆಯಿಂದಾಗಿ ಸಾವಿರಾರು ಕೊಳವೆ ಬಾವಿಗಳು ಮರುಪೂರಣಗೊಂಡು ರೈತರಿಗೆ ಖುಷಿ ನೆಮ್ಮದಿ ದೊರೆಯಿತು. ಊರಿನಲ್ಲಿ ಲೈಬ್ರರಿ ಸ್ಥಾಪನೆಗೆ ಕಾರಣೀಕರ್ತರಾದರು. ಇದಕ್ಕಾಗಿ ಊರಿನ ಜನರಿಂದ ಸಾರ್ಥಕ ಸನ್ಮಾನ ಪಡೆದರು. ಹೀಗೆ ತಮ್ಮೂರ ಜನರಿಂದ ಶ್ಲಾಘನೆ ಪಡೆಯುವ ಸಾಹಿತಿಗಳ ವಿರಳತೆಯೇ ಭೈರಪ್ಪವರ ಅಮೂಲ್ಯತೆಯನ್ನು ಸಾರುತ್ತದೆ.

ಹಾಗೆಯೇ ತಮ್ಮ ಕೃತಿಗಳಿಗೆ ಬಂದ ಗೌರವಧನವನ್ನೆಲ್ಲ ತಮಗಾಗಿ ವಿನಿಯೋಗಿಸದೆ, ತಮ್ಮಂತೆಯೇ ಜೀವನದಲ್ಲಿ ನೊಂದ ಬಡ ಮಕ್ಕಳ ಶಿಕ್ಷಣಕ್ಕಾಗಿ ಮೀಸಲಿಟ್ಟದ್ದು ಕೂಡ, ಅವರು ಆಡುತ್ತಿದ್ದ ಆದರ್ಶಗಳು ಬರಿಯ ಬಾಯಿಮಾತಾಗಿರಲಿಲ್ಲ ಎಂಬುದರ ದ್ಯೋತಕ, ಅದಕ್ಕಾಗಿಯೇ ಒಂದು ಟ್ರಸ್ಟ್ ರಚಿಸಿದ್ದು, ಅದರ ಮೂಲಕ ಆ ಹಣವನ್ನು ಬಡ, ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ವಿನಿಯೋಗಿಸುವ ಉದಾತ್ತ ಆಶಯವನ್ನು ತೋರಿಸುತ್ತದೆ. ತನಗೆ ಬಾಲ್ಯದಲ್ಲಿ ಒದಗಿದ ಕಷ್ಟ ಬೇರೆ ಮಕ್ಕಳಿಗೆ ಬರದಿರಲಿ ಎಂಬುದು ಅವರ ಅಭೀಷ್ಠೆಯಾಗಿತ್ತು. ೯೪ ವರ್ಷಗಳ ತುಂಬು ಬದುಕಿನಲ್ಲಿ ಅವರು ತಮ್ಮ ಕಾದಂಬರಿಗಳ ಜೊತೆಗೆ ಚಿಂತನೆ, ತಾತ್ವಿಕ ದಿಗ್ಧರ್ಶನ, ಕಿರಿಯರಿಗೆ ಮಾರ್ಗದರ್ಶನಗಳಿಂದಲೂ ಬೆಳಕಿನ ಸ್ತಂಭವಾಗಿದ್ದರು. ಅವರದು ಇನ್ನೂ ನೂರು ವರ್ಷಗಳ ಕಾಲ ಚಿಂತನೆಯಾಗಿ, ಭಾವನೆಯಾಗಿ ಕನ್ನಡದ ಜನಮಾನಸವನ್ನು ಮುನ್ನಡೆಸಬಲ್ಲ ವ್ಯಕ್ತಿತ್ವವಾಗಿದೆ.

ಕೃಪೆ: ವಿಶ್ವವಾಣಿ ನುಡಿ ನಮನ, ದಿ: ೨೫-೦೯-೨೦೨೫

ಚಿತ್ರ ಕೃಪೆ: ಅಂತರ್ಜಾಲ ತಾಣ