‘ಏನಪ್ಪಾ, ನೀನು ಈಗೀಗ ಅತ್ತಿ ಮರದ ಹೂವಿನಂತೆ ಆಗಿದ್ದೀಯಲ್ಲಾ?’ ಎಂದು ಅಪರೂಪಕ್ಕೆ ಸಿಗುವವರಿಗೆ ಹೇಳುವ ಮಾತಿದೆ. ಅತ್ತಿ ಮರದ ಹೂವು ನೋಡಿದವರು ವಿರಳ. ಏಕೆಂದರೆ ಅದು ಎಲೆಗಳ ತಳಭಾಗದಲ್ಲಿದ್ದು ಎದುರಿಗೆ ಗೋಚರವಾಗುವುದೇ ಇಲ್ಲ. ಆದರೆ ಕಾಯಿಗಳಾಗಿ ಅವು ಅತ್ತಿ ಹಣ್ಣು ಆದಾಗ ಎಲ್ಲರ ಗಮನಕ್ಕೆ ಬರುತ್ತದೆ. ಈ ಕಾಯಿಗಳ ವಿಶೇಷತೆ ಏನೆಂದರೆ ಅವು ಹಣ್ಣಾಗಿ ಒಡೆದಾಗ ಅದರ ಒಳಗಿನಿಂದ ಹಲವಾರು ಪುಟ್ಟ ಪುಟ್ಟ ಕೀಟಗಳು ಹೊರಕ್ಕೆ ಹಾರಿ ಹೋಗುತ್ತವೆ. ಈ ಕೀಟಗಳ ಮೊಟ್ಟೆಗಳು ಅತ್ತಿ ಕಾಯಿ ಆಗುವುದಕ್ಕೆ ಮೊದಲೇ ಹೂವಿನಲ್ಲಿ ಸೇರಿರುತ್ತದೆ. ಅತ್ತಿ ಕಾಯಿಯಾಗಿ, ಬೆಳೆದು ಹಣ್ಣಾದಾಗ ಅವುಗಳೂ ಮೊಟ್ಟೆಯೊಡೆದು ಹೊರಬಂದು ಅಸಂಖ್ಯ ಕೀಟಗಳಾಗುತ್ತವೆ. ಇವೆಲ್ಲಾ ನೈಸರ್ಗಿಕ ವಿಸ್ಮಯ ವಿಷಯಗಳು.

ಅತ್ತಿ ಮರಕ್ಕೆ ಸಂಸ್ಕೃತದಲ್ಲಿ ಔದುಂಬರ ಎಂಬುದಾಗಿ ಹೆಸರು. ಇದರ ಉಪಯೋಗ ಹಲವು. ಬರೇ ಮನುಷ್ಯರಿಗೆ ಮಾತ್ರವಲ್ಲದೆ, ಪಕ್ಷಿ, ಪ್ರಾಣಿ, ಹುಳು ಹುಪ್ಪಟೆಗಳಿಗೂ ಇದು ಆಹಾರ. ಅತ್ತಿ ಮರದ ಹಣ್ಣು, ಎಲೆ ಮತ್ತು ತೊಗಟೆ ಬೇರು ಹೀಗೆ ಅದರ ಸರ್ವಾಂಗವೂ ಔಷಧೀಯ ಗುಣಗಳನ್ನು ಹೊಂದಿವೆ. ಇದರ ಕೆಲವು ಔಷಧೀಯ ಗುಣಗಳು ಹೀಗಿವೆ.

ಮೂಗಿನಿಂದ ರಕ್ತ ಸ್ರಾವವಾಗುತ್ತಿದ್ದರೆ, ಅಪಕ್ವವಾದ ಅತ್ತಿಯ ಹಣ್ಣನ್ನು ಜೇನು ತುಪ್ಪದೊಡನೆ ಬೆರೆಸಿ ೧೫ ದಿನಗಳವರೆಗೆ ಸೇವಿಸಬೇಕು. ಕಾಮಲೆ, ಬಾಯಿ ಹುಣ್ಣು, ಗರ್ಭಪಾತದ ತೊಂದರೆಗೆ ಅತ್ತಿ ಹಣ್ಣಿನ ಜೊತೆಗೆ ಜೇನು ತುಪ್ಪ, ಸ್ವಲ್ಪ ಉಪ್ಪು ಮಿಶ್ರಣ ಮಾಡಿ ಸೇವಿಸಬೇಕು. ಅತ್ತಿ ಎಲೆಗಳನ್ನು ಜಗಿಯುವುದರಿಂದ ಬಾಯಿ ಹುಣ್ಣು ಮತು ಬಾಯಿ ದುರ್ವಾಸನೆ ಮಾಯವಾಗುತ್ತದೆ. ಅತ್ತಿ ಎಲೆಗಳನ್ನು ಹಾಲಿನಲ್ಲಿ ನೆನೆಸಿ ಜೇನು ತುಪ್ಪದೊಡನೆ ಸೇವಿಸಿದರೆ ಸಿಡುಬಿನ ಕಲೆಗಳು ಮಾಯವಾಗುತ್ತದೆ. ಅತ್ತಿ ಮರದ ತೊಗಟೆಯನ್ನು ಒಣಗಿಸಿ ಪುಡಿಮಾಡಿ ಹಾಗಲಕಾಯಿ ರಸದೊಂದಿಗೆ ಸೇವಿಸಿದರೆ ಸಿಹಿ ಮೂತ್ರ ರೋಗ ವಾಸಿಯಾಗುತ್ತದೆ. 

ಹಳ್ಳಿಗಳಲ್ಲಿ ಹಿರಿಯ ತಲೆಗಳು ಅತ್ತಿ ಕೆತ್ತೆಯ ಕಷಾಯ ಮಾಡಿ ಕುಡಿಯುವುದಿದೆ. ಇದು ದೇಹಕ್ಕೆ ಹಾಲಿಗಿಂತ ಹೆಚ್ಚಿನ ಸತ್ವ ಕೊಡುತ್ತದೆಯಂತೆ. ಅದೇ  ರೀತಿಯಲ್ಲಿ ಇದೇ ಕುಟುಂಬದ ಗೋಳಿ ಮರದ ತೊಗಟೆಯನ್ನೂ  ಕಷಾಯವಾಗಿ ಕುಡಿಯುವುದು  ಹಿಂದೆ ಚಾಲ್ತಿಯಲ್ಲಿತ್ತು. ಅತ್ತಿಯ ಎಳೆ ಕಾಯಿಗಳನ್ನು ಹುಳಿ ಮಾಡುವುದು, ಪಲ್ಯ ಮಾಡುವುದು ಎಲ್ಲಾ ಕಡೆ ಇದೆ. ಬೆಳೆದ ಕಾಯಿಗಳನ್ನು ಪಶುಗಳಿಗೆ ಮೇವಾಗಿ ಬಳಕೆ ಮಾಡಬಹುದು. ಇದು ದೇಹಕ್ಕೆ ತಂಪು. ಹಾಲು ಹೆಚ್ಚಳವಾಗುತ್ತದೆ. ಎಲ್ಲರೂ ತಮ್ಮ ಹೊಲದಲ್ಲಿ ಇರುವ ಅತ್ತಿ ಮರ ಉಳಿಸಿಕೊಳ್ಳಿ, ಇಲ್ಲವಾದರೆ ಒಂದು ಸಸಿ ನೆಡಿ. ಇದು ಸಮೃದ್ದಿಯ ಸಂಕೇತದ ಮರ. ಹಕ್ಕಿಗಳು, ಕೋತಿಗಳಿಗೆ ಇದು ಸ್ವಾಭಾವಿಕ ಆಹಾರವಾಗಿದ್ದು ಈ ಮರಗಳ ಕೊರತೆಯಿಂದ ಅವು ಪೇಟೆಗೆ ಬಂದು ನಮ್ಮ ಬೆಳೆಗಳಿಗೆ ಹಾನಿ ಮಾಡಲಾರಂಭಿಸಿವೆ ಎನ್ನಬಹುದು. 

ಮಾಹಿತಿ: ರಾಧಾಕೃಷ್ಣ ಹೊಳ್ಳ

ಚಿತ್ರ ಕೃಪೆ: ಅಂತರ್ಜಾಲ ತಾಣ